Advertisement

ಅಸುರರ ಮುಂದೆ ಅಬಲರ ಆರ್ತನಾದ

12:30 AM Feb 15, 2019 | |

ಪ್ರಸ್ತುತ ದೇಶದಾದ್ಯಂತ ನಡೆಯುತ್ತಿರುವ ಅತ್ಯಾಚಾರ ಪ್ರಕರಣ ಮತ್ತು ಅದರ ತಪ್ಪಿತಸ್ಥರಿಗೆ ಆಗಬೇಕಾದ ಶಿಕ್ಷೆ, ಕಾನೂನು ಕ್ರಮಗಳು, ಸಾಮಾಜಿಕ ಜವಾಬ್ದಾರಿಗಳ ಬಗ್ಗೆ ಅನೇಕ ಮಾಧ್ಯಮಗಳಲ್ಲಿ ಗಂಭೀರ ಚರ್ಚೆಗಳು ನಡೆಯುತ್ತಿದೆ. ಇದರ ನಡುವೆಯೇ ಇಲ್ಲೊಂದು ಚಿತ್ರ ಕೂಡ ಅಂಥದ್ದೇ ವಿಷಯವನ್ನು ತೆರೆಮೇಲೆ ಹೇಳಲು ಹೊರಟಿದೆ. 

Advertisement

ಕೆಲ ವರ್ಷಗಳ ಹಿಂದೆ ಬೆಂಗಳೂರಿನ ಖಾಸಗಿ ಶಾಲೆಯೊಂದರಲ್ಲಿ ನಡೆದ ಅಪ್ರಾಪ್ತ ಬಾಲಕಿಯ ಮೇಲಿನ ಅತ್ಯಾಚಾರ ಘಟನೆ ಇಡೀ ರಾಜ್ಯವನ್ನೆ ಬೆಚ್ಚಿ ಬೀಳಿಸಿತ್ತು. ಈಗ ಅದೇ ಘಟನೆಯನ್ನ ಆಧರಿಸಿ “ಅಸುರ ಸಂಹಾರ’ ಹೆಸರಿನಲ್ಲಿ ಚಿತ್ರವೊಂದು ತೆರೆಗೆ ಬರುತ್ತಿದೆ. ಸುಮಾರು ಹತ್ತು ವರ್ಷಗಳಿಂದ ಬಣ್ಣದ ಲೋಕದ ನಂಟು ಬೆಳೆಸಿಕೊಂಡಿರುವ ಕಿರುತೆರೆ ಮತ್ತು ಹಿರಿತೆರೆಯಲ್ಲಿ ಕೆಲಸ ಮಾಡಿದ ಅನುಭವವಿರುವ ಪ್ರದೀಪ್‌ ಅರಸು ಈ ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ. ಹರ್ಷ ಅರಸು (ಹರಿ ಪ್ರಸಾದ್‌)ಚಿತ್ರವನ್ನು ನಿರ್ಮಿಸುವುದರ ಜೊತೆ ನಾಯಕರಾಗಿ ಬೆಳ್ಳಿತೆರೆಗೆ ಪರಿಚಯವಾಗುತ್ತಿದ್ದಾರೆ. 

ಇತ್ತೀಚೆಗೆ ನಡೆದ ಸಮಾರಂಭದಲ್ಲಿ “ಅಸುರ ಸಂಹಾರ’ ಚಿತ್ರತಂಡ ತನ್ನ ಹಾಡುಗಳನ್ನು ಬಿಡುಗಡೆ ಮಾಡಿದೆ. ನಟ ಧರ್ಮ, ಒಗ್ಗರಣೆ ಡಬ್ಬಿ ಖ್ಯಾತಿಯ ಮುರಳಿ, ಬಿಬಿಎಂಪಿ ಸದಸ್ಯ ಶಿವಕುಮಾರ್‌ ಸೇರಿದಂತೆ ಹಲವರು ಹಾಜರಿದ್ದು ಚಿತ್ರದ ಹಾಡುಗಳನ್ನು ಬಿಡುಗಡೆಗೊಳಿಸಿ ಚಿತ್ರತಂಡಕ್ಕೆ ಶುಭ ಹಾರೈಸಿದರು. 

ಇದೇ ವೇಳೆ ಮಾತನಾಡಿದ ನಿರ್ದೇಶಕ ಪ್ರದೀಪ್‌ ಅರಸು, “ಸಿನಿಮಾ ಮಾಡಬೇಕು ಎನ್ನುವುದು ಅನೇಕ ನರ್ಷದ ಕನಸು ಈ ಸಿನಿಮಾದ ಮೂಲಕ ನನಸಾಗುತ್ತಿದೆ. ಅತ್ಯಾಚಾರ ಪ್ರಕರಣಗಳಲ್ಲಿ ಅಪರಾಧಿಗಳಿಗೆ ವಿಳಂಬ ಶಿಕ್ಷೆ, ಅಂತಹ ಸಂದರ್ಭದಲ್ಲಿ ಸಂತ್ರಸ್ಥ ಹೆಣ್ಣು ಮಕ್ಕಳ ಮನಸ್ಥಿತಿ ಹೇಗಿರುತ್ತದೆ ಎನ್ನುವುದನ್ನು ಚಿತ್ರದ ಮೂಲಕ ಬಿಂಬಿಸುವ ಪ್ರಯತ್ನ ಮಾಡಲಾಗಿದೆ. ಅತ್ಯಾಚಾರಿಗಳಿಗೆ ಕನಸಿನಲ್ಲಿಯೇ ಶಿಕ್ಷೆ ಕೊಡುವ ಪಾತ್ರ ಚಿತ್ರದಲ್ಲಿದೆ’ ಎಂದು ಚಿತ್ರದ ಬಗ್ಗೆ ವಿವರ ನೀಡಿದರು. 

ಚಿತ್ರದ ನಾಯಕ ಕಂ ನಿರ್ಮಾಪಕ ಹರ್ಷ ಅರಸು ಮಾತನಾಡಿ, “ಮೊದಲಿನಿಂದಲೂ ಸಿನಿಮಾದ ಕಡೆಗೆ ಆಸಕ್ತಿ ಇದ್ದು, ನಿರ್ದೇಶಕರು ಹೇಳಿದ ಕಥೆ ಇಷ್ಟವಾಗಿ ಅದನ್ನು ನಿರ್ಮಿಸಿ ಜೊತೆಗೆ ನಾಯಕನಾಗಿ ಅಭಿನಯಿಸಲು ಒಪ್ಪಿಕೊಂಡೆ. ಒಬ್ಬ ಅಣ್ಣ ತಂಗಿಯನ್ನು ಹೇಗೆ ಕಾಪಾಡುತ್ತಾನೆ ಎನ್ನುವುದು ಚಿತ್ರದ ತಿರುಳು ನನಗೆ ಇಷ್ಟವಾಯಿತು. ಚಿತ್ರ ಚೆನ್ನಾಗಿ ಮೂಡಿಬಂದಿದ್ದು, ಮಾರ್ಚ್‌ ವೇಳೆಗೆ ಚಿತ್ರವನ್ನು ತೆರೆಗೆ ತರುವ ಯೋಚನೆ ಇದೆ’ ಎಂದರು. 

Advertisement

ಇನ್ನು ಬಿಡುಗಡೆಯಾಗಿರುವ “ಅಸುರ ಸಂಹಾರ’ ಚಿತ್ರದಲ್ಲಿ ಎರಡು ಹಾಡುಗಳಿದ್ದು, ಮೆಹಬೂಬ್‌ ಸಾಬ್‌, ಸಂತೋಷ್‌ ವೆಂಕಿ, ಮಾನಸ ಹೊಳ್ಳ ಹಾಡುಗಳಿಗೆ ಧ್ವನಿಯಾಗಿದ್ದಾರೆ. ಲೋಕಿ ಹಾಡಿಗೆ ಸಂಗೀತ ಸಂಯೋಜಿಸಿದ್ದಾರೆ. ಚಿತ್ರಕ್ಕೆ ಪ್ರವೀಣ್‌ ಶೆಟ್ಟಿ ಛಾಯಾಗ್ರಹಣ, ವಿನಯ್‌ ಕುಮಾರ್‌ ಸಂಕಲನವಿದೆ. ಚನ್ನರಾಯಪಟ್ಟಣ, ಹಾಸನ, ಬೇಳೂರು, ಮಂಗಳೂರು ಮೊದಲಾದ ಸ್ಥಳಗಳಲ್ಲಿ ಸುಮಾರು ನಲವತ್ತು ದಿನಗಳ ಕಾಲ “ಅಸುರ ಸಂಹಾರ’ ಚಿತ್ರೀಕರಣ ಮಾಡಲಾಗಿದೆ. ಹರ್ಷಲ ಹನಿ, ಧರ್ಮ, ರವಿಚಂದ್ರ, ಶಿವು ಬಾಲಾಜಿ, ವೀಣಾ ಸುಂದರ್‌, ಅಶ್ವಿ‌ನ್‌, ಹರಿಬ್ರಹ್ಮ, ದೀಕ್ಷಾ ಶೆಟ್ಟಿ ಮೊದಲಾದವರು ಚಿತ್ರದ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next