ಒಳ್ಳೆ ಮನಸ್ಸು, ವ್ಯಕ್ತಿತ್ವವಿರುವ ಮನುಷ್ಯರು ಇದ್ದಾರೋ ಇಲ್ಲವೋ ಎಂಬ ಈ ಕಾಲದಲ್ಲಿ, ಸ್ನೇಹಕ್ಕಿಂತ ದ್ವೇಷವೇ ಮುಖ್ಯ ಎಂದು ಬಾಳುವವರು ಹಲವರಿದ್ದಾರೆ. ಉತ್ತಮ ಸಂಬಂಧ ವನ್ನಿಟ್ಟುಕೊಂಡು ಸುಖ ಸಂತೋಷದಿಂದ ಜೀವನ ಸಾಗಿಸುವ ಬದಲು ತಮ್ಮ ವೈರಿಗಳ ವಿರುದ್ಧ ದ್ವೇಷ ಸಾಧಿಸುವುದೇ ಮುಖ್ಯವಾಗಿಬಿಟ್ಟಿದೆ. ದ್ವೇಷ, ಕೋಪದ ಮಡಿಲಲ್ಲಿ ಮಲಗಿ ಸಂಬಂಧಗಳನ್ನು, ಮನದ ಶಾಂತಿಯನ್ನು ಮರೆತಿರುವರು ನಮ್ಮ ಆಧುನಿಕ ಜಗತ್ತಿನ ಈ ಜನರು.
ಸಣ್ಣ ವಯಸ್ಸಿನಲ್ಲಿ ಆಟ ಆಡುವಾಗ ತನ್ನ ಸ್ನೇಹಿತ / ಸ್ನೇಹಿತೆ ಆಟದ ಸಾಮಾನು ಕೊಡಲಿಲ್ಲ ಎಂಬ ಸಣ್ಣ ವಿಚಾರಕ್ಕೆ ಸಾಯೋತನಕ ಅವನ ಜತೆ ಮಾತನಾಡುವುದೇ ಇಲ್ಲ ಎಂದು ಒಬ್ಬರು ಹೇಳಿದರೆ, ಆಸ್ತಿಗೋಸ್ಕರ ಅಣ್ಣ – ತಮ್ಮ ಅಥವಾ ತಂದೆ – ತಾಯಿ ಜತೆ ಜಗಳವಾಡಿ ನಿಷ್ಠುರ ಆಗುವವನು ಇನ್ನೊಬ್ಬ. ಇವುಗಳನ್ನು ಕೇಳುವಾಗ ಬಾಲಿಶ ಅನಿಸಿದರೂ ನಮ್ಮ ಪ್ರಪಂಚ ನಡೆಯುತ್ತಿರುವುದು ಹೀಗೆಯೇ.
ದಿನ ಬೆಳಗಾದರೆ ಸಾಕು ಕನಿಷ್ಠ ಒಂದಾದರೂ ಕೊಲೆ ಸುದ್ದಿಯನ್ನು ಕೇಳಿಯೇ ಕೇಳುತ್ತೇವೆ. ದ್ವೇಷಕ್ಕಾಗಿಯೇ ಒಂದು ಜೀವವನ್ನು ಕೊಲ್ಲುವ ಮಟ್ಟಕ್ಕೆ ಮನುಷ್ಯ ನಿಷ್ಠುರನಾಗಿದ್ದಾನೆ. ಅದೇ ಜೀವವನ್ನು ನಂಬಿಕೊಂಡು ಇನ್ನು ಅನೇಕ ಜೀವಗಳು ಜೀವನ ನಡೆಸುತ್ತಿದ್ದಾವೆ ಎಂದು ಅರಿವಾಗುವ ಹೊತ್ತಿಗೆ ಕಾಲ ಮಿಂಚಿ ಹೋಗಿರುತ್ತೆ. ಈ ವರ್ತನೆಗೆ ನಾನು ಎಂಬ ಅಹಂ ಕಾರಣ ಎನ್ನಬಹುದು. ಎಲ್ಲವೂ ತನ್ನದು, ತನಗೇ ಬೇಕು ಎನ್ನುವ ಮನುಷ್ಯನ ಆಸೆ ದ್ವೇಷದ ರೀತಿ ಹೊರ ಹೊಮ್ಮವುದು. ಇದೆಲ್ಲವನ್ನು ಬಿಟ್ಟು ಎಲ್ಲರೂ ತನ್ನವರು ಎಂದು ಜೀವಿಸಿದರೆ ಬಾಳು ಎಷ್ಟು ಸುಂದರವಲ್ಲವೆ?
ಸಾಯುವಾಗ ಯಾರು ಕೂಡ ಆಸ್ತಿ, ಹಣ, ಸಂಪತ್ತನ್ನು ಹೊತ್ತುಕೊಂಡು ಹೋಗುವುದಿಲ್ಲ. ಅದರ ಬದಲು ಜನರಿಂದ ಗಳಿಸಿದ ಪ್ರೀತಿ, ವಿಶ್ವಾಸ, ಸ್ನೇಹವನ್ನು ತೆಗೆದುಕೊಂಡು ಹೋಗುತ್ತಾನೆ. ಅದುವೇ ನಮ್ಮ ನಿಜವಾದ ಆಸ್ತಿ ಹಾಗೂ ಸಂಭಾವನೆ.
-ಹರ್ಷಿತಾ ಎಂ.ಕೆ.
ಎಸ್.ಡಿ.ಎಂ. ಕಾಲೇಜು ಉಜಿರೆ