ಗುರುಮಠಕಲ್: ಪಟ್ಟಣದ ಹೊರವಲಯದಲ್ಲಿ ನಿರ್ಮಾಣವಾಗಿರುವ ರೀಡಿಂಗ್ ಸೆಂಟರ್ ನೂತನ ಕಟ್ಟಡ ಅಪೂರ್ಣ ಕಾಮಗಾರಿಯಿಂದ ಅವ್ಯವಸ್ಥೆ ಆಗರವಾಗಿ ಮಾರ್ಪಾಡಾಗುತ್ತಿದೆ. ಕಾಕಲವಾರ ಮಾರ್ಗದಲ್ಲಿ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯ ಮೈಕ್ರೊ ಯೋಜನೆಯಡಿ 95 ಲಕ್ಷ ರೂ.ಅಂದಾಜು ಮೊತ್ತದ ಕಾಮಗಾರಿಯನ್ನು 86.77 ಲಕ್ಷಕ್ಕೆ ಗುತ್ತಿಗೆ ಪಡೆದ ಗುತ್ತಿಗೆದಾರರು ಕಾಮಗಾರಿ ಮುಗಿಸಿ ಕೈ ತೊಳೆದುಕೊಂಡಿದ್ದಾರೆ. ಆದರೆ ಕೋಣೆಗಳ ವರಾಂಡಾ ಮೇಲ್ಭಾಗದಲ್ಲಿ ಗಾಜು ಅಳವಡಿಸಲು ಫ್ರೇಮ್ ತಯಾರಿಸಿ ಗಾಜು ಹಾಕದೇ ಬಿಟ್ಟಿದ್ದು ಮಳೆ ನೀರು ಒಳಗೆ ನುಗ್ಗುತ್ತಿದೆ.
ಸದ್ಯ ತಾಲೂಕು ದಂಡಾಧಿಕಾರಿಗಳ ಕಚೇರಿಗೆ ಕಟ್ಟಡ ನೀಡಲಾಗಿದ್ದು, ಅರೆಬರೆ ವ್ಯವಸ್ಥೆಯಿಂದ ಕಟ್ಟಡದ ಕೋಣೆಗಳಲ್ಲಿ ಮಳೆ ನೀರು ಬರುತ್ತಿದೆ. ಗೋಡೆಗಳಿಗೆ ನೀರಿಳಿಯುತ್ತಿದ್ದು ದಾಖಲೆಗಳು ತೋಯುವ ಆತಂಕ ಎದುರಾಗಿದೆ. ಮಳೆ ಬಂತೆಂದರೆ ಕಚೇರಿ ಕೋಣೆಗಳ ಹೊರಭಾಗದಲ್ಲಿ ನೀರು ಬಿದ್ದು ಕಚೇರಿ ಕೆಲಸಕ್ಕೆ ಬರುವ ಜನರು ಕಾಲು ಜಾರಿ ಬೀಳುವ ಆತಂಕದಲ್ಲಿದ್ದಾರೆ.
ರೀಡಿಂಗ್ ಸೆಂಟರ್ ಹಿಂಭಾಗದ ಪಕ್ಕದ ಗೋಡೆ ಬಿರುಕು ಬಿಟ್ಟಿದ್ದು, ಕೋಣೆಗಳಲ್ಲೂ ಅಲ್ಲಲ್ಲಿ ಬಿರುಕು ಕಾಣಿಸಿಕೊಂಡಿದೆ. ಕಟ್ಟಡ ಸಂಪೂರ್ಣ ಸಿದ್ಧಗೊಂಡ ಬಳಿಕವಷ್ಟೇ ಉದ್ಘಾಟನೆಗೊಳ್ಳುವುದು ನೋಡಿದ್ದೇವೆ. ಆದರೆ ಕಟ್ಟಡ ಉದ್ಘಾಟಿಸಿದ ಶಾಸಕರ ಗಮನಕ್ಕೂ ಕಾಮಗಾರಿ ಅರೆಬರೆಯಾಗಿರುವ ಕುರಿತು ಗಮನಕ್ಕೆ ಬರಲಿಲ್ಲವೇ? ಎನ್ನುವ ಮಾತುಗಳು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿವೆ. ಗೋಡೆಗಳಲ್ಲಿ ಬಿರುಕು ಕಾಣಿಸಿಕೊಂಡಿರುವುದು ಉತ್ತಮ ಸಿಮೆಂಟ್ ಬಳಸದಿರುವುದು ಮೇಲ್ನೋಟಕ್ಕೆ ಕಂಡು ಬಂದಿದ್ದು, ಕಿಟಕಿ ಫ್ರೇಮ್ ಕೂಡ ಗುಣಮಟ್ಟ ಹೊಂದಿಲ್ಲ ಎಂದು ಜನರು ಆರೋಪಿಸುತ್ತಿದ್ದಾರೆ.
ನೂತನ ರೀಡಿಂಗ್ ಸೆಂಟರ್ ಕಟ್ಟಡದಲ್ಲಿ ತಹಶೀಲ್ದಾರ್ ಕಚೇರಿ ಕಾರ್ಯ ನಿರ್ವಹಿಸುತ್ತಿದ್ದು, ಗುತ್ತಿಗೆದಾರರು ಬೇಜವಾಬ್ದಾರಿ ವಹಿಸಿದ್ದಾರೆ. ಕೊಠಡಿ ಹೊರಾಂಗಣದ ಮೇಲ್ಭಾಗದಲ್ಲಿ ಗಾಜು ಅಳವಡಿಸಿಲ್ಲ. ಹೀಗಾಗಿ ಮಳೆ ನೀರು ಒಳಗೆ ನುಗ್ಗುತ್ತಿದ್ದು,ಸಿಬ್ಬಂದಿ ಮತ್ತು ಜನರು ತೊಂದರೆ ಅನುಭವಿಸುವಂತಾಗಿದೆ. ಈ ಬಗ್ಗೆ ಸಂಬಂ ಧಿಸಿದವರು ಗಮನ ಹರಿಸಬೇಕು.
ವಿನಾಯಕ ಜನಾರ್ಧನ,
ಬಿಜೆಪಿ ಯುವ ಅಧ್ಯಕ್ಷ
ಕಳೆದ 5 ತಿಂಗಳ ಹಿಂದೆ ರೀಡಿಂಗ್ ಸೆಂಟರ್ ಕಟ್ಟಡವನ್ನು ನಮಗೆ ಪುರಸಭೆ ಒದಗಿಸಿಕೊಟ್ಟಿದ್ದು ಅನುಕೂಲವಾಗಿದೆ. ಜೋರಾದ ಮಳೆಯಿಂದ ಕಟ್ಟಡ ಸೋರುತ್ತಿದ್ದು, ಈ ಕುರಿತು ಪುರಸಭೆಗೆ ತಿಳಿಸಿದ್ದೇವೆ.
ಶರಣಬಸವ, ತಹಶೀಲ್ದಾರ್,
ಗುರುಮಠಕಲ್
*ಚೆನ್ನಕೇಶವುಲುಗೌಡ