Advertisement

ಮಾನವೀಯ ಕಾಳಜಿಯ ವೈಚಾರಿಕ ಲೇಖಕಿ ಬಿ. ಎಂ. ರೋಹಿಣಿ

07:11 PM Jan 23, 2020 | mahesh |

ಇತ್ತೀಚೆಗೆ ಬಿ.ಎಂ. ರೋಹಿಣಿಯವರ ಜೀವನ ಕಥನ ನಾಗಂದಿಗೆಯೊಳಗಿಂದ ಬಿಡುಗಡೆಗೊಂಡಿತು. ಅದರ ಮುಖಪುಟದಲ್ಲಿ ಪುಸ್ತಕವನ್ನು ಮಡಿಲಲ್ಲಿರಿಸಿಕೊಂಡು ನಡೆಯುತ್ತಿರುವ ಬಿ.ಎಂ. ರೋಹಿಣಿಯವರ ಭಾವಚಿತ್ರವಿದೆ. ಅದು ಅವರ ಜೀವನನಡೆಯ ರೂಪಕದಂತಿದೆ. ಸದಾಕಾಲ ಪುಸ್ತಕವನ್ನೇ ಅವಚಿಕೊಂಡು, ಅದನ್ನೇ ಸಂಗಾತಿಯಾಗಿಸಿಕೊಂಡು ಬದುಕುತ್ತಿರುವ ಹಿರಿಯಕ್ಕ ಅವರು.

Advertisement

ಅಕ್ಷರ ಪ್ರೀತಿ, ಜೀವನ ಪ್ರೀತಿ ಮತ್ತು ಮನುಷ್ಯ ಪ್ರೀತಿ- ಇವು ಮೂರೂ ಮುಪ್ಪುರಿಗೊಂಡಂಥ ಜೀವನ ದರ್ಶನ ಅವರದು. ಬರಹಗಾರ್ತಿಯಾಗಿ ಪುಸ್ತಕಗಳ ಲೋಕಕ್ಕೆ ಸೀಮಿತಗೊಳ್ಳದೆ ಹೋರಾಟಗಾರ್ತಿಯಾಗಿಯೂ ಗುರುತಿಸಿಕೊಂಡವರು. ಸಮಾಜಮುಖೀ ಚಿಂತನೆಯೊಂದಿಗೆ ತಪ್ಪನ್ನು ತಪ್ಪು ಎಂದು ನಿಷ್ಠುರವಾಗಿ ಹೇಳಿದರೂ ತಪ್ಪಿತಸ್ಥರನ್ನು ಪ್ರೀತಿಯಿಂದ ಕಾಣುವ ಔದಾರ್ಯವನ್ನು ತೋರಿಸಿದವರು. “ನನ್ನ ಬಗ್ಗೆ ನಾನೇ ಏನು ಹೇಳಲಿ’ ಎನ್ನುತ್ತ ತುಸು ಮುಜುಗರದಿಂದಲೇ ಮಾತಿಗೆ ತೊಡಗಿದರು…

ನಿಮ್ಮ ಬಾಲ್ಯದತ್ತ ತಿರುಗಿ ನೋಡಿದಾಗ…?
ತಂದೆಗೆ ಅನಾರೋಗ್ಯ, ಗೇರುಬೀಜ ಕಾರ್ಖಾನೆಯಲ್ಲಿ ದುಡಿಯುವ ತಾಯಿ, ಕಡು ಬಡತನದ ಬಾಲ್ಯ ನನ್ನದು. ನನಗೆ ಬೀಡಿ ಕಟ್ಟಲು ಗೊತ್ತಿತ್ತು. ಬೀಡಿ ಕಟ್ಟಿಯೇ ನಾನು ಜೀವನೋಪಾಯಕ್ಕೆ ಹಾದಿಮಾಡಿಕೊಂಡದ್ದು. ಬೀಡಿಯ ಸೂಪಿನ ಮೇಲೆ ಪುಸ್ತಕ ಇಟ್ಟುಕೊಂಡು ಓದುವುದು ನನಗೆ ಚಪಲವೇ ಆಗಿತ್ತು. ಆದರೆ, ತಂದೆಯವರು ಕಲಿಯುವುದಕ್ಕೆ ಪ್ರೋತ್ಸಾಹ ನೀಡಿದರು. ಎಸ್‌ಎಸ್‌ಎಲ್‌ಸಿವರೆಗೆ ಓದಿದೆ. ಆಮೇಲೆ ಹೋಗಿ ಮಂಗಳೂರಿನ ಬಲ್ಮಠದಲ್ಲಿ ಡಿ.ಎಡ್‌ ಮಾಡಿದೆ. ಸರ್ಕಾರಿ ಶಾಲೆಯಲ್ಲಿ ಕೆಲಕಾಲ ಪಾಠ ಮಾಡಿದೆ. ಅದನ್ನು ಬಿಟ್ಟು ಕುಲಶೇಖರದಲ್ಲಿ ನಾನೇ ಕಲಿತ ಶಾಲೆಯಾದ ಸೇಕ್ರೆಡ್‌ ಹಾರ್ಟ್‌ ಸ್ಕೂಲ್‌ಗೆ ಸೇರಿದೆ. ನನ್ನ ವೃತ್ತಿಯಿಂದಾಗಿ ಮನೆಯನ್ನು ನಡೆಸುವುದಕ್ಕೆ ಅನುಕೂಲವಾಯಿತು. ಸ್ವಾವಲಂಬಿಯಾದುದರಿಂದ ಬಡತನ-ಮತ್ತಿತರ ರೀತಿಯ ಅವಮಾನಗಳನ್ನು ಮೆಟ್ಟಿ ನಿಲ್ಲುವುದಕ್ಕೆ ಅವಕಾಶವಾಯಿತು.

ಬರವಣಿಗೆ ಹೇಗೆ ಆರಂಭವಾಯಿತು. ಬದುಕಿನ ಗಾಢ ಅನುಭವಗಳನ್ನು ನೆನಪಿಸಿಕೊಳ್ಳಿ.
ತಂದೆ ಸಾಹಿತ್ಯ ಪ್ರೇಮಿ. ಬಾಲ್ಯದಿಂದಲೇ “ಗದುಗಿನ ಭಾರತ’ದಂಥ ಸಾಹಿತ್ಯ ಕೃತಿಗಳನ್ನು ಓದುವ ಅವಕಾಶ ಮಾಡಿಕೊಟ್ಟರು. ಆರ್ಥಿಕವಾಗಿ ನಾವು ಬಡವರೇ. ಆದರೆ, ಸಾಂಸ್ಕೃತಿಕ ಸಿರಿವಂತಿಕೆ ಇತ್ತೆನ್ನಿ. ಒಂಬತ್ತು ಮಕ್ಕಳಲ್ಲಿ ಉಳಿದದ್ದು ನಾನು ಮತ್ತು ನನ್ನ ತಮ್ಮ ಮಾತ್ರ. ಅವನಿಗೂ ನನಗೂ ಹನ್ನೊಂದು ವರ್ಷಗಳ ಅಂತರ. ನನ್ನ ತಮ್ಮ ಹುಟ್ಟುವವರೆಗೆ ನನ್ನನ್ನು ಗಂಡು ಮಗನ ಹಾಗೆ ಬೆಳೆಸಿದರು. ತಾಯಿ, ಬಂಧುಗಳ ವಿರೋಧದ ನಡುವೆಯೂ 7-8 ವರ್ಷ ಪ್ರಾಯದ ನನ್ನನ್ನು ತಂದೆ ವ್ಯಾಯಾಮ ಶಾಲೆಗೆ ಕಳುಹಿಸುತ್ತಿದ್ದರು. 6 ವರ್ಷ ಶಾಸ್ತ್ರೀಯ ಸಂಗೀತವನ್ನು ಕಲಿತಿದ್ದೆ. ಆದರೆ, ತಮ್ಮ ಹುಟ್ಟಿದ ಕ್ಷಣದಿಂದ ನಾನು “ಹೆಣ್ಣಾದೆ’! ನಂತರ ವಿವಿಧ ಕಟ್ಟುಪಾಡು ಶುರುವಾಯಿತು. ಸಂಗೀತ ತರಬೇತಿ ನಿಂತಿತು. ಮಾಸ್ಟರ್‌ ವಿಠಲ್‌ರ ನಿರ್ದೇಶನದ ನೃತ್ಯವೊಂದಕ್ಕೆ ನನ್ನನ್ನು ಹಾಡುವುದಕ್ಕೆ ಕರೆದಿದ್ದರು. ಕಳುಹಿಸಲು ತಂದೆ ನಿರಾಕರಿಸಿದರು. ಈ ತರತಮಕ್ಕೆ ನಾನು ಅಸಹನೆ ವ್ಯಕ್ತಪಡಿಸಿದೆ. ಮೊದಲು ಒಂದು ಬಗೆಯಲ್ಲಿ ಗಂಡಿನಂತೆ ಬೆಳೆದ ಕಾರಣದಿಂದಲೋ ಏನೊ, ನನ್ನ ಅಸ್ತಿತ್ವದ ಪ್ರಶ್ನೆ ಗಾಢವಾಗಿ ಕಾಡಲಾರಂಭಿಸಿತ್ತು. ಒಂದೆಡೆ ತುತ್ತು ಅನ್ನಕ್ಕೆ ತತ್ವಾರವಿರುವ ಸ್ಥಿತಿ. ಮತ್ತೂಂದು ಕಡೆ ಅವಮಾನ, ನೋವು, ಸಂಕಟ, ವಿಷಾದ. ಇವು ನನ್ನನ್ನು ಅಂತರ್ಮುಖೀಯಾಗಿಸಿತು. ಮೊದಲು ಬರೆಯುತ್ತಿರಲಿಲ್ಲ. ಶಿಕ್ಷಕಿಯಾದ ಮೇಲೆ ಬರವಣಿಗೆಯಲ್ಲಿ ತೊಡಗಿಸಿಕೊಂಡೆ.

ಡೀಡ್ಸ್‌, ಸೆಸ್ಕಾ, ಪ್ರಜ್ಞಾ, ಪಡಿ, ಸಂಚಯ, ವೆಲೆರೋಡ್‌, ಶಿಕ್ಷಕ- ಸಂಗತಿ ಹೀಗೆ ವಿವಿಧ ಸಂಸ್ಥೆಗಳಲ್ಲಿ ತಾವು ಅವಿರತವಾಗಿ ತೊಡಗಿಸಿಕೊಂಡಿದ್ದೀರಲ್ಲ…
ನನ್ನ ಬರಹಕ್ಕೆ ಶಕ್ತಿ ಬಂದದ್ದೇ ಈ ಸಮಾಜಮುಖಿ ಸಂಸ್ಥೆಗಳಲ್ಲಿ ಕ್ರಿಯಾಶೀಲವಾಗಿ ತೊಡಗಿಸಿಕೊಂಡದ್ದರಿಂದ. ಬಾಲ್ಯದಿಂದಲೇ ಒಂದು ಬಗೆಯ ಹೋರಾಟದ ಬದುಕು ನನ್ನದು. ನನಗೆ ಬಾಲ್ಯವೇ ಇರಲಿಲ್ಲ. ಬದುಕಿನಲ್ಲಿ ಎಲ್ಲವನ್ನು ಒಂದು ಬಗೆಯ ಹೋರಾಟದಿಂದಲೇ ಪಡೆದುಕೊಳ್ಳಬೇಕಾಯಿತು. ನನ್ನ ದಿನಗಳಲ್ಲಿ ನನ್ನನ್ನು ಪ್ರೋತ್ಸಾಹಿಸುವವರೇ ಇರಲಿಲ್ಲ. ನಾನು ಅನುಭವಿಸಿದ ನೋವನ್ನು ಉಳಿದವರು ಅನುಭವಿಸಬಾರದು ಎಂಬ ಆಶಯದಿಂದ ಸಮಾಜಮುಖೀಯಾಗಿ ಕೆಲಸ ಮಾಡುವ ಸಂಸ್ಥೆಗಳಲ್ಲಿ ತೊಡಗಿಸಿಕೊಂಡೆ. ನಾನು ಹೆಣ್ಣುಮಕ್ಕಳ ಶಾಲೆಯಲ್ಲಿ ಕಲಿತವಳು, ಅದೇ ಶಾಲೆಯಲ್ಲಿ ಕಲಿಸಿದವಳು. ಸುಮಾರು 38 ವರ್ಷಗಳ ವೃತ್ತಿ ಅನುಭವ ನನ್ನದು. ಈ ಸಂದರ್ಭದಲ್ಲಿ ಹೆಣ್ಣುಮಕ್ಕಳ ನೋವನ್ನು ಹತ್ತಿರದಿಂದ ಕಂಡು ಸೂಕ್ಷ್ಮವಾಗಿ ಸ್ಪಂದಿಸಲು ಸಾಧ್ಯವಾಯಿತು. ಸೇಕ್ರೆಡ್‌ ಹಾರ್ಟ್‌ ಬಾಲಿಕಾ ಪ್ರೌಢಶಾಲೆಯ ವೃತ್ತಿಬಾಂಧವ ಸಿಸ್ಟರ್‌ಗಳಿಂದ ದೊರೆತ ಬೆಂಬಲ ಇಂದಿಗೂ ಮುಂದುವರಿದಿದೆ. ನನ್ನನ್ನು ಅವರು ಸಂಸ್ಥೆಯ ಐಕಾನ್‌ ಎಂದು ಗುರುತಿಸುವಾಗ ಅಭಿಮಾನವೆನಿಸುತ್ತದೆ. ಆ ಸಂಸ್ಥೆಯ ಎನ್‌ಜಿಓದಲ್ಲಿ ಈಗಲೂ ಸಕ್ರಿಯಳಾಗಿದ್ದೇನೆ.

Advertisement

ಸಾಮಾನ್ಯವಾಗಿ ಕತೆ-ಕವಿತೆಗಳು ಅಭಿವ್ಯಕ್ತಿಯ ಮುಖ್ಯ ಮಾದರಿಗಳು. ನೀವೇಕೆ ವೈಚಾರಿಕ ಬರಹಗಳಿಗೇ ಆತುಕೊಂಡಿರಿ?
ನಾನು ಮೊದಲು ಬರೆದದ್ದು ಕತೆಗಳನ್ನು. ಮೊದಲ ಕತೆ “ಹೊಲಿದ ಹೃದಯ’. 70ರ ದಶಕದಲ್ಲಿ ಆಕಾಶವಾಣಿಯಲ್ಲಿ ಪ್ರಸಾರವಾಯಿತು. ನಂತರ ಅದೇ ಕತೆ ಉದಯವಾಣಿಯಲ್ಲಿಯೂ ಪ್ರಕಟವಾಗಿತ್ತು. ಮುಂದೆ ತುಷಾರ, ವನಿತಾ, ಮುಕ್ತ ಕರ್ನಾಟಕ ಮುಂತಾದ ಪತ್ರಿಕೆಗಳಲ್ಲಿ ಕತೆಗಳು ಪ್ರಕಟವಾದವು. ಭಾಮಿನಿ ಷಟ³ದಿಯಲ್ಲಿ ಕವನಗಳನ್ನು ಬರೆದಿದ್ದೆ. ಶಿಕ್ಷಕಿಯಾಗಿದ್ದಾಗ ನನ್ನ ವಿದ್ಯಾರ್ಥಿ ಗಳಿಗೆ ಸಾಹಿತ್ಯಿಕ-ಸಾಂಸ್ಕೃತಿಕ ಅಭಿರುಚಿ ಬೆಳೆಸುವುದನ್ನು ಒಂದು ಗೀಳಿನಂತೆ ರೂಢಿಸಿಕೊಂಡಿದ್ದೆ. ಮುಂದೆ ನನಗೆ ಅನ್ನಿಸಿದ್ದನ್ನು ನೇರವಾಗಿ ಹೇಳುವುದಕ್ಕೆ ಕತೆಗಳಿಗಿಂತ ವೈಚಾರಿಕ ಬರಹಗಳು ಸೂಕ್ತ ಎನಿಸಿದವು. ಕ್ಷೇತ್ರಕಾರ್ಯಗಳಲ್ಲಿ ಮತ್ತು ಚಳುವಳಿಗಳಲ್ಲಿ ಭಾಗವಹಿಸಿದಾಗ ಆದ ಅನುಭವಗಳು ಬರಹಗಳಿಗೆ ಆಕರಗಳಾದವು.

ಈವರೆಗೆ ಎಲ್ಲಿಯೂ ದಾಖಲಾಗದ ಅವಿವಾಹಿತೆಯರ ತಲ್ಲಣಗಳ ಬಗ್ಗೆ ತಾವು ಅಧ್ಯಯನ ನಡೆಸಿದ್ದು ವಿಶೇಷವೆನಿಸುತ್ತದೆ.
ನಾನು ಕೂಡ ಅವಿವಾಹಿತೆಯೇ. ನನ್ನ ಸುತ್ತಮುತ್ತ ಇದ್ದ, ಮಧ್ಯ ವಯಸ್ಸಿನ ಅವಿವಾಹಿತ ಮಹಿಳೆಯರ ಮಾನಸಿಕ ತುಮುಲವನ್ನು ಹತ್ತಿರದಿಂದ ಗಮನಿಸುತ್ತಿದ್ದೆ. ಸುತ್ತಲಿನ ಸಮಾಜ ಅವರನ್ನು ಒಂದು ಬಗೆಯಲ್ಲಿ ಅವಮಾನಿಸುತ್ತಿತ್ತು. ಮಂಗಳೂರಿನ ಸುತ್ತಲಿನ ಅವಿವಾಹಿತೆಯರ ಕುರಿತು ಅಧ್ಯಯನ ಮಾಡಲಾರಂಭಿಸಿದೆ. ಆಗ ಮಂಗಳೂರು ವಿಶ್ವವಿದ್ಯಾಲಯದ ಮಹಿಳಾ ಕೇಂದ್ರದ ವತಿಯಿಂದ ಸಬಿಹಾ ಭೂಮಿಗೌಡ ಅವರು ಜೊತೆ ಸೇರಿ ಅಧ್ಯಯನವನ್ನು ದಕ್ಷಿಣ ಕನ್ನಡ ಜಿಲ್ಲೆಗೆ ಅಕಾಡೆಮಿಕ್‌ ಶಿಸ್ತಿನಿಂದ ವಿಸ್ತರಿಸಿಕೊಂಡೆವು. ಪ್ರತಿ ತಾಲ್ಲೂಕಿನಿಂದ 100 ಮಂದಿಯನ್ನು ವೈಯಕ್ತಿಕವಾಗಿ ಸಂದರ್ಶಿಸಿದೆವು. 6000ಕ್ಕೂ ಮಿಕ್ಕಿ ಅವಿವಾಹಿತೆಯರ ಮಾಹಿತಿಯನ್ನು ಸಂಗ್ರಹಿಸಿದೆವು. ಅವರ ವೈಯಕ್ತಿಕ, ಕೌಟುಂಬಿಕ, ಆರ್ಥಿಕ, ಸಾಮಾಜಿಕ ತಲ್ಲಣಗಳನ್ನು ದಾಖಲೀಕರಣ ಮಾಡಿ ವರದಿಯನ್ನು ಸರಕಾರಕ್ಕೆ ಕಳುಹಿಸಿದೆವು. ಅಧ್ಯಯನದ ಸಂರ್ಭದಲ್ಲಿ ಉತ್ತರ ಕರ್ನಾಟಕ ಭಾಗದಿಂದ ಅವಿವಾಹಿತೆಯರ ಕುರಿತು ಅಧ್ಯಯನ ವರದಿ ಬಂತು. ಹಾಗಾಗಿ, 50 ವರ್ಷ ದಾಟಿದ ಅವಿವಾಹಿತೆಯರಿಗೆ ಮಾಸಾಶನ ನೀಡುವ ಮನಸ್ವಿನಿ ಯೋಜನೆ ಜಾರಿಗೆ ಬಂತು. ಇದು ತುಂಬ ಸಂತೃಪ್ತಿ ಕೊಟ್ಟಿದೆ.
.
ಕರ್ತವ್ಯ (1996), ಗರಿಕೆಯ ಕುಡಿಗಳು (2014), ಒಂದು ಹಿಡಿ ಮಣ್ಣು (2016), ಹಿರಿಯರ ಜೀವನ ಕಥನಗಳು-ಮಕ್ಕಳಿಗಾಗಿ (2012)- ಪ್ರಕಟಿತ ಕಥಾ ಸಂಕಲನಗಳು. ಸ್ತ್ರೀ-ಸಂವೇದನೆ (1995), ಸ್ತ್ರೀ-ಶಿಕ್ಷಣ-ಸಂಸ್ಕೃತಿ (2000), ಸ್ತ್ರೀ-ಭಿನ್ನ ಮುಖಗಳು (2005), ಸಾಮಾಜಿಕ ತಲ್ಲಣಗಳು (2007), ಆರಾಧನ ರಂಗದಲ್ಲಿ ಸ್ತ್ರೀ (2004)- ಪ್ರಕಟಿತ ಲೇಖನ ಸಂಕಲನಗಳು. ಲಲಿತಾ ರೈ, ಪಾವಂಜೆ ಗೋಪಾಲ ಕೃಷ್ಣಯ್ಯ, ಎನ್‌. ಕೇಶವ ಭಟ್‌, ಹಿಲ್ಡಾ ರಾಯಪ್ಪನ್‌- ಅವರ ವ್ಯಕ್ತಿಚಿತ್ರಗಳನ್ನು ಬರೆದಿದ್ದಾರೆ.

ಅವಿವಾಹಿತ ಮಹಿಳೆಯರ ಸಮಾಜೋ-ಸಾಂಸ್ಕೃತಿಕ ಅಧ್ಯಯನ, ತುಳುನಾಡಿನ ಮಾಸ್ತಿಕಲ್ಲುಗಳು-ವೀರಗಲ್ಲುಗಳು, ದಕ್ಷಿಣ ಕನ್ನಡ ಜಿಲ್ಲೆಯ ಮಹಿಳಾ ಹೋರಾಟದ ದಾಖಲೀಕರಣ, ದಕ್ಷಿಣ ಕನ್ನಡ ಜಿಲ್ಲೆಯ ಬಿಲ್ಲವರ ಗುತ್ತು ಮನೆಗಳ ಅಧ್ಯಯನ- ಮುಂತಾದ ಸಂಶೋಧನ ಕೃತಿಗಳನ್ನು ಇತರ ಲೇಖಕರೊಂದಿಗೆ ಸೇರಿ ಪ್ರಕಟಿಸಿದ್ದಾರೆ.

ಕರಾವಳಿ ಲೇಖಕ-ವಾಚಕಿಯರ ಸಂಘದ ಆರಂಭದಿಂದಲೂ ಅವರ ಜೊತೆ ಸಕ್ರಿಯರಾಗಿರುವ ಬಿ. ಎಂ. ರೋಹಿಣಿ ಮಂಗಳೂರು ಜೈಲಿಗೆ ಹೋಗಿ “ಕ್ವಿಟ್‌ ಇಂಡಿಯಾ’ ಚಳುವಳಿಯಲ್ಲಿ ಭಾಗವಹಿಸಿದವರ ಬಗ್ಗೆ ಮಾಹಿತಿ ಸಂಗ್ರಹಿಸಿ ಅಧ್ಯಯನ ಮಾಡಿದವರು. “ಗುಡ್‌ಗರ್ಲ್ ಸಿಂಡ್ರೋಮ್‌’ನ ಅಮಲು ಹೆಣ್ಣನ್ನು ಪರೋಕ್ಷವಾಗಿ ಶೋಷಿಸುವ ಪರಿಯನ್ನು ಕಟುವಾಗಿ ಟೀಕಿಸುತ್ತ ಬಂದವರು. ನಿವೃತ್ತಿಯ ಮೊದಲು ಮತ್ತು ನಂತರವೂ ಹೆಣ್ಣುಮಕ್ಕಳ ಶಿಕ್ಷಣಕ್ಕೆ ತಮ್ಮದೇ ಆದ ಆರ್ಥಿಕ ನೆರವನ್ನು ನೀಡಿ ಅಕ್ಷರ ದಾಸೋಹವನ್ನು ಸಾಕಾರಗೊಳಿಸುತ್ತಿರುವವರು.

ಕುಡುಪುವಿನಲ್ಲಿ ವಾಸವಾಗಿರುವ ರೋಹಿಣಿ ಮೇಡಂಗೆ ಈಗ 76ರ ಈ ಹರೆಯ. ಬದುಕಿನಲ್ಲಿ ಇಷ್ಟು ದೂರ ಸಾಗಿಬಂದ ಬಳಿಕ ಏನನಿಸುತ್ತದೆ ಎಂದು ಕೇಳಿದರೆ ಅವರು ಹೇಳುತ್ತಾರೆ: “ತಿಳಿದುಕೊಳ್ಳಬೇಕಾದ ಎಷ್ಟೊಂದು ವಿಚಾರಗಳಿವೆಯಲ್ಲ!’

ಸುಧಾರಾಣಿ

Advertisement

Udayavani is now on Telegram. Click here to join our channel and stay updated with the latest news.

Next