ಉಡುಪಿ: ಸಾರ್ವ ಜನಿಕ ಪಡಿತರ ವ್ಯವಸ್ಥೆಯಡಿ ಬಿಪಿಎಲ್ ಕಾರ್ಡ್‌ದಾರರಿಗೆ ರಾಜ್ಯ ಸರಕಾರದಿಂದ ಅಕ್ಕಿಯ ಬದಲಿಗೆ ಹಣವನ್ನೇ ನೀಡಲಾಗುತ್ತಿದ್ದರೂ ಮಾರ್ಚ್ ಬಳಿಕ ಯಾರ ಖಾತೆಗೂ ಹಣ ಬಂದಿಲ್ಲ ಹಾಗೂ ಅಕ್ಕಿಯೂ ಸಿಗುತ್ತಿಲ್ಲ. ಚುನಾವಣೆ ನೀತಿ ಸಂಹಿತೆ ಮುಗಿದರೂ ಅಧಿಕಾರಿಗಳು ಈ ಬಗ್ಗೆ ಎಚ್ಚೆತ್ತುಕೊಳ್ಳದಿರುವ ಬಗ್ಗೆ ಸಾರ್ವಜನಿಕರು ಆಕ್ರೋಶ ಹೊರಹಾಕಿದ್ದಾರೆ.
ಹಣ ನೀಡುವ ಪ್ರಕ್ರಿಯೆ ಮಾರ್ಚ್‌ವರೆಗೆ ಸರಾಗವಾಗಿ ನಡೆದುಕೊಂಡು ಬಂದಿತ್ತು. ಒಂದು ತಿಂಗಳು ವಿಳಂಬವಾದರೂ ಎರಡನೇ ತಿಂಗಳಲ್ಲಿ ಒಟ್ಟಿಗೆ ಹಣ ಬರುತ್ತಿತ್ತು. ಈಗ ಎಪ್ರಿಲ್, ಮೇ ತಿಂಗಳು ಕಳೆದು ಜೂನ್ ಮುಗಿಯುತ್ತಾ ಬಂದರೂ ಹಣ ಬಂದಿಲ್ಲ. ಅಧಿಕಾರಿಗಳು ಮತ್ತು ನ್ಯಾಯಬೆಲೆ ಅಂಗಡಿಗಳಲ್ಲಿ ವಿಚಾರಿಸಿದರೂ ಸ್ಪಷ್ಟ ಉತ್ತರ ಸಿಕ್ಕಿಲ್ಲ ಎಂದು ಕಾರ್ಡ್‌ದಾರರು ತಿಳಿಸಿದ್ದಾರೆ.
ಚುನಾವಣೆ ನೀತಿ ಸಂಹಿತೆ ಕಾರಣದಿಂದ ಎರಡು ತಿಂಗಳು ವಿಳಂಬವಾಗಿದೆ. ಎಪ್ರಿಲ್ ತಿಂಗಳ ಹಣ ಎರಡು ಮೂರು ದಿನಗಳಲ್ಲಿ ಫಲಾನುಭವಿಗಳ ಖಾತೆಗೆ ವರ್ಗಾವಣೆಯಾಗಲಿದೆ. ರಾಜ್ಯ ಸರಕಾರ ಎಪ್ರಿಲ್ ತಿಂಗಳಗೆ ಅವಶ್ಯವಿರುವಷ್ಟು ಅನುದಾನವನ್ನು ಖಜಾನೆಗೆ ಜಮೆ ಮಾಡಿದೆ. ಆದರೆ ಮೇ ಮತ್ತು ಜೂನ್ ತಿಂಗಳ ಹಣ ಇನ್ನೂ ವಿಳಂಬವಾಗುವ ಸಾಧ್ಯತೆಯಿದೆ ಎಂದು ಆಹಾರ ಮತ್ತು ಗ್ರಾಹಕ ವ್ಯವಹಾರ ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಅಕ್ಕಿ ವಿತರಣೆಗೆ ಚಿಂತನೆ
ಹಣದ ಬದಲಿಗೆ ಅಕ್ಕಿಯನ್ನೇ ವಿತರಿಸಲು ಸರಕಾರ ಚಿಂತಿಸುತ್ತಿದೆ. ಆದರೆ ಖರೀದಿಗೆ ಕೇಂದ್ರ ಆಹಾರ ನಿಗಮವು ಒಪ್ಪಿಗೆ ನೀಡಬೇಕಿದೆ. ಇಲ್ಲವಾದರೆ ದುಬಾರಿ ಹಣ ಕೊಟ್ಟು ಸರಕಾರ ಖರೀದಿ ಸಬೇಕಾಗುತ್ತದೆ. ಕೇಂದ್ರ ಸರಕಾರ ಹೊಸದಾಗಿ ರಚನೆಯಾಗಿದ್ದ ರಿಂದ ರಾಜ್ಯದಿಂದ ಮತ್ತೆ ಪ್ರಯತ್ನ ನಡೆಯುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.