Advertisement
ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ, ಪ್ರತಿ ಎರಡು ತಿಂಗಳಿಗೊಮ್ಮೆ ದೇಶದ ಹಣಕಾಸು ನೀತಿ ನಿಯಮಾವಳಿಗಳನ್ನು ಪರಾಮರ್ಶಿಸುತ್ತದೆ. ಆರು ಸದಸ್ಯರಿರುವ ರಿಸರ್ವ್ ಬ್ಯಾಂಕ್‌ನ Monetory Policy Committee ಎರಡು ದಿನಗಳ ಕಾಲ ದೇಶದ ಹಣಕಾಸು ಸ್ಥಿತಿಗತಿಗಳನ್ನು ವಿಶ್ಲೇಷಿಸಿ, ಅಂತಾರಾಷ್ಟ್ರೀಯ ಅರ್ಥಿಕ ಸ್ಥಿತಿಗತಿಗಳನ್ನು ಮತ್ತು ಸಾಧ್ಯತೆಯನ್ನು ಸುದೀರ್ಘ ಚಿಂತನ- ಮಂಥನಕ್ಕೆ ಒಳಪಡಿಸಿ, ಮುಂದಿನ ಎರಡು ತಿಂಗಳುಗಳ ಕಾಲ ದೇಶವು ಅಳವಡಿಸಿಕೊಳ್ಳುವ ಅರ್ಥಿಕ ನೀತಿ ನಿರೂಪಣೆಗಳನ್ನು ಪ್ರಕಟಿಸುತ್ತದೆ.
Related Articles
Advertisement
ರೆಪೋ ದರ ಇಳಿಕೆಯ ಪರಿಣಾಮ ಏನು?: ರೆಪೋ ದರ ಇಳಿಕೆಯಾದಾಗ, ಬ್ಯಾಂಕುಗಳಿಗೆ cost of funds ಅಷ್ಟರಮಟ್ಟಿಗೆ ಕಡಿಮೆಯಾಗುತ್ತಿದ್ದು, ಅದನ್ನು ಗ್ರಾಹಕರಿಗೆ ವರ್ಗಾಯಿಸುವ ಅನಿವಾರ್ಯತೆ ಇರುತ್ತದೆ. ಇದು ಲಾಗಾಯ್ತನಿಂದ ನಡೆದ ಬಂದ ಪದ್ಧತಿ. ರೆಪೋ ದರವನ್ನು ಇಳಿಸಿ, ತನ್ಮೂಲಕ ಬ್ಯಾಂಕುಗಳಿಗೆ cost of funds ಅನ್ನು ಕಡಿಮೆ ಮಾಡಿ ಅದರ ಲಾಭ ಸಾಲ ಗ್ರಾಹಕರಿಗೆ ದೊರಕುವಂತೆ ಮಾಡುವುದೇ ರೆಪೋ ದರ ಇಳಿಕೆಯ ಹಿಂದಿನ ಉದ್ದೇಶ. ಬ್ಯಾಂಕುಗಳು ಸಾಮಾನ್ಯವಾಗಿ ಈ ಇಳಿಕೆಯನ್ನು ಗ್ರಾಹಕರಿಗೆ ವರ್ಗಾಯಿಸುತ್ತವೆ ಮತ್ತು ರೆಪೋ ದರದಲ್ಲಿ ಇಳಿಕೆಯಾದಷ್ಟೇ ಪ್ರಮಾಣದಲ್ಲಿ ಗ್ರಾಹಕರಿಗೆ ನೀಡುವ ಸಾಲದ ಮೇಲಿನ ಬಡ್ಡಿದರವನ್ನು ಇಳಿಸುತ್ತವೆ.
ಹಾಗಾದರೆ ವಾಸ್ತವ ಏನು?: ಸಾಮಾನ್ಯವಾಗಿ ರೆಪೋ ದರ ಇಳಿಕೆಯಾದ ಒಂದೆರಡು ದಿನಗಳಲ್ಲಿಯೇ ಬ್ಯಾಂಕುಗಳು ರೆಪೋ ದರದ ಇಳಿಕೆಯ ಲಾಭವನ್ನು ಗ್ರಾಹಕರಿಗೆ ವರ್ಗಾಯಿಸುತ್ತವೆ. ಅದರೆ, ಇತ್ತೀಚಿನ ದಿನಗಳಲ್ಲಿ ಈ ವರ್ಗಾವಣೆಗೆ ಮೀನ ಮೇಷ ಎಣಿಸಲಾಗುತ್ತಿದೆ. ಹಾಗೆಯೇ ಇಳಿಕೆಯಾದಷ್ಟು ಪ್ರಮಾಣದಲ್ಲಿ ಅದನ್ನು ಗ್ರಾಹಕರಿಗೆ ವರ್ಗಾಯಿಸುವುದಿಲ್ಲ. ಕಳೆದ ಹತ್ತು ತಿಂಗಳಲ್ಲಿ 1.10% ಕಡಿಮೆಯಾದರೂ ಬ್ಯಾಂಕುಗಳು ಕೇವಲ 0.29%ರಷ್ಟು ಬಡ್ಡಿಯನ್ನು ಇಳಿಸಿವೆ. ಇದು ಒಟ್ಟೂ ರೆಪೋ ಇಳಿತದ ಕೇವಲ 26% ಎನ್ನುವುದು ವಿಶೇಷ. ಅಗಸ್ಟ್ ತಿಂಗಳಿನಲ್ಲಿ 0.35%ರಷ್ಟು ರೆಪೋ ಕಡಿಮೆಯಾದರೂ, ಗ್ರಾಹಕರಿಗೆ ದೊರಕಿದ ಲಾಭ ಕೇವಲ 0.09% ಎಂದು ರಿಸರ್ವ್ ಬ್ಯಾಂಕ್ ವರದಿ ಹೇಳುತ್ತಿದೆ.
ಇನ್ನೊಂದು ವಿಚಿತ್ರವೆಂದರೆ, ರೆಪೋ ದರ ಇಳಿದಾಗಲೆಲ್ಲಾ, ಗ್ರಾಹಕರ ಠೇವಣಿ ಮೇಲಿನ ಬಡ್ಡಿದರವೂ ಇಳಿಯುತ್ತಿದ್ದು, ಠೇವಣಿ ಮೇಲಿನ ಬಡ್ಡಿಯಲ್ಲಿಯೇ ಜೀವನ ರಥ ಸಾಗಿಸುವ ಗ್ರಾಹಕರು, ಮುಖ್ಯವಾಗಿ ನಿವೃತ್ತರು ಸಂಕಷ್ಟಕ್ಕೊಳಗಾಗುತ್ತಾರೆ. ಕಳೆದ ಫೆಬ್ರವರಿ 2019ರಿಂದ ಅಗಸ್ಟ್ 2019ರ ವರೆಗೆ ಸುಮಾರು 0.40% ಬಡ್ಡಿದರ ಇಳಿದಿದೆ. ಕಳೆದ ಬಜೆಟ್‌ನಲ್ಲಿ ಠೇವಣಿ ಮೇಲಿನ ಬಡ್ಡಿಗೆ ವಿಧಿಸಿದ್ದ ಟಿಡಿಎಸ್ ಮಿತಿಯನ್ನು 10,000 ರೂ.ನಿಂದ 40,000ಕ್ಕೆ ಏರಿಸಿದ್ದು, ಈ ಲಾಭವನ್ನು ಠೇವಣಿ ಮೇಲಿನ ಬಡ್ಡಿದರ ಇಳಿತ ತಿಂದು ಹಾಕಿದೆ ಎಂಬುದು ಹಲವರ ದೂರು.
ಕಾರ್ಪೊರೇಟ್ ಟ್ಯಾಕ್ಸ್ ಇಳಿಸಿದ್ದೇಕೆ?: ಪ್ರತಿ ಎರಡು ತಿಂಗಳಿಗೊಮ್ಮೆ ದೇಶದ ಹಣಕಾಸು ನೀತಿ ನಿಯಮಾವಳಿಗಳ ಪರಿಷ್ಕರಣೆ ನಡೆದರೂ, ಈ ಹಿಂದೆ ಕಾಣದ ಕುತೂಹಲ ಮತ್ತು ತೀವ್ರ ಆಸಕ್ತಿ ಈ ಬಾರಿ ಕಂಡಿದೆ. ಇದಕ್ಕೆ ಮುಖ್ಯ ಕಾರಣ, ಈ ಹಣಕಾಸು ವರ್ಷದ ಮೊದಲು ತ್ತೈಮಾಸಿಕದಲ್ಲಿ ದೇಶದ ಎಈಕ ದಾಖಲೆ 5%ಗೆ ಇಳಿದದ್ದು. ಅಟೋಮೊಬೈಲ್ ಮತ್ತು ಟೆಕ್ಸ್‌ಟೈಲ್ ವಲಯದಲ್ಲಿ ಲಕ್ಷಾಂತರ ಉದ್ಯೋಗಗಳ ನಷ್ಟ, ಮಾರುಕಟ್ಟೆಯಲ್ಲಿ ನಿಸ್ತೇಜ ಬೇಡಿಕೆ ಪರಿಸ್ಥಿತಿ ಮತ್ತು ಜನತೆಯಲ್ಲಿ ಖರೀದಿ ಶಕ್ತಿ ಕಡಿಮೆಯಾಗಿದ್ದು.
ಆಗಸ್ಟ್ 2019ರಲ್ಲಿ 3.20% ಇದ್ದ ಹಣದುಬ್ಬರ ಸೆಪ್ಟೆಂಬರ್‌ನಲ್ಲಿ 3.40%ಗೆ ಏರಿದ್ದು, ಜಿಎಸ್‌ಟಿ ಸಂಗ್ರಹದಲ್ಲಿ ಕೊರತೆ, ಮಾರುಕಟ್ಟೆಯಲ್ಲಿ ಹಣದ ಹರಿವು ಕಡಿಮೆಯಾಗಿದ್ದು, ದೇಶದಲ್ಲಿ ಅರ್ಥಿಕ ಹಿಂಜರಿಕೆಯ ಲಕ್ಷಣ ಕಾಣುತ್ತಿದ್ದು, ಸರ್ಕಾರಕ್ಕೆ ಅರ್ಥಿಕತೆಯನ್ನು ಪುನಶ್ಚೇತನಗೊಳಿಸಲು, ತುರ್ತು ಕ್ರಮಗಳನ್ನು ತೆಗೆದುಕೊಳ್ಳುವ ಅನಿವಾರ್ಯತೆ. ಇದರ ಮೊದಲ ಹೆಜ್ಜೆಯಾಗಿ ಸರ್ಕಾರ ವಿದೇಶಿ ಹೂಡಿಕೆದಾರರ ಮೇಲಿನ ತೆರಿಗೆಯನ್ನು ಕಡಿತಗೊಳಿಸಿತು. ಉದ್ಯಮಿಗಳ ಬಹುದಿನಗಳ ಬೇಡಿಕೆಯಾದ ಕಾರ್ಪೋರೇಟ್ ಟ್ಯಾಕ್ಸನ್ನು ಕಡಿಮೆ ಮಾಡಿತು. ಬ್ಯಾಂಕುಗಳ ನಿರ್ವಹಣಾ ವೆಚ್ಚವನ್ನು ನಿಯಂತ್ರಿಸಲು, 12 ಸರ್ಕಾರಿ ಸ್ವಾಮ್ಯದ ಬ್ಯಾಂಕುಗಳನ್ನು ವಿಲೀನಗೊಳಿಸಲಾಯಿತು.
ಬ್ಯಾಂಕುಗಳು ಹೆಚ್ಚು ಸಾಲ ನೀಡುವಂತಾಗಲು ಬ್ಯಾಂಕುಗಳಿಗೆ ಸುಮಾರು 70,000 ಕೋಟಿ ಬಂಡವಾಳ ನೀಡಲಾಯಿತು. ಇದರ ಮುಂದಿನ ಹೆಜ್ಜೆಯಾಗಿ ಬ್ಯಾಂಕುಗಳು ಹೆಚ್ಚಿನ ಸಾಲವನ್ನು ನೀಡಲು ಅನುಕೂಲವಾಗುವಂತೆ ಎಂಬತ್ತರ ದಶಕದ ಲೋನ್ ಮೇಳದ ರೀತಿಯಲ್ಲಿ, ಎರಡು ಹಂತದಲ್ಲಿ ಶಾಮಿಯಾನಾ ಸಾಲ ಮೇಳ ನಡೆಸಲೂ ಯೋಚಿಸಲಾಗುತ್ತಿದೆ. ಹಣಕಾಸು ನೀತಿಯ ಮುಂದಿನ ಪರಿಷ್ಕರಣೆ ಡಿಸೆಂಬರ್‌ನಲ್ಲಿ ಇದ್ದು, ರೇಟಿಂಗ್ ಎಜೆನ್ಸಿಗಳು ರೆಪೋ ದರದಲ್ಲಿ 0.40ನಿಂದ 0.65% ಇಳಿಕೆಯನ್ನು ನಿರೀಕ್ಷಿಸುತ್ತಿವೆ.
ಸರಿಯಾದ ಆಧಾರ ಯಾವುದು?: ತೀರಾ ಇತ್ತೀಚಿನವರೆಗೆ ಬ್ಯಾಂಕುಗಳು Marginal Cost Of Fund Based Lending ಅಧಾರದ ಮೇಲೆ ಸಾಲದ ಮೇಲಿನ ಬಡ್ಡಿದರವನ್ನು ನಿಗದಿ ಪಡಿಸುತ್ತಿದ್ದವು. ಇದು ಪಾರದರ್ಶಕ ವ್ಯವಸ್ಥೆಯಲ್ಲ ಎನ್ನುವ ಗ್ರಾಹಕರ ದೂರಿನನ್ವಯ, ಅಕ್ಟೋಬರ್ 1ರಿಂದ ಬ್ಯಾಂಕುಗಳು ರೆಪೋ ದರ ಆಧಾರಿತ ಬಡ್ಡಿದರವನ್ನು ನಿಗದಿಪಡಿಸಬೇಕಾಗಿದೆ ಮತ್ತು ಈ ವ್ಯವಸ್ಥೆಯನ್ನು ಮೂರು ತಿಂಗಳಿಗೊಮ್ಮೆ ಪರಿಷ್ಕರಿಸಬೇಕಾಗಿದೆ. ಈ ರೀತಿ ಬಡ್ಡಿದರ ನಿಗದಿಪಡಿಸುವಿಕೆ ಗ್ರಾಹಕರಿಗೆ ಲಾಭದಾಯಕ ಮತ್ತು ಪಾರದರ್ಶಕ ಎನ್ನುವ ಮಾತು ಬ್ಯಾಂಕಿಂಗ್ ವಲಯದಲ್ಲಿ ಕೇಳುತ್ತಿದೆ.
* ರಮಾನಂದ ಶರ್ಮಾ