ತೆಂಕಿನಲ್ಲಿ ಇಲ್ಲವೇ ಇಲ್ಲ ಎನ್ನಬಹುದಾದ, ಬಡಗಿನಲ್ಲೂ ಈಗ ಮರೆಯಾಗುತ್ತಿರುವ ಪ್ರಸಂಗ ಕಾಳಿದಾಸ. ಒಂದು ಕಾಲದಲ್ಲಿ ಚಿಟ್ಟಾಣಿ, ಧಾರೇಶ್ವರ, ಗುಡಿಗಾರರ ತಂಡದ ಅಡಿಯೋ ಕ್ಯಾಸೆಟ್ ಮೂಲಕ ಈ ಪ್ರಸಂಗ ಸೂಪರ್ ಹಿಟ್ ಆಗಿತ್ತು. ಅಂತಹ ಹಳೆಯ ವೈಭವದ ದಿನಗಳ ಮೆಲುಕು ಹಾಕಲು ರಾಜಾಂಗಣದ ಯಕ್ಷಗಾನ ಅವಕಾಶ ಮಾಡಿಕೊಟ್ಟಿತು.
ವಿದ್ಯೆ ಇದ್ದವರು ಎಲ್ಲ ಬುದ್ಧಿವಂತರಾಗಿರಬೇಕಿಲ್ಲ. ಬುದ್ಧಿವಂತರೆಲ್ಲ ವಿದ್ಯಾವಂತರಾಗಿರಬೇಕಿಲ್ಲ. ಎರಡೂ ಇದ್ದವರು ರೂಪವಂತರಾಗಿರಬೇಕಿಲ್ಲ. ಹೀಗಂತ ವಿವರಿಸಿದ್ದು ಕಲಾಧರ. 61ರ ಹರೆಯದ ತೀರ್ಥಹಳ್ಳಿ ಗೋಪಾಲಾಚಾರ್ ಅವರು ಕಲಾಧರನಾಗಿದ್ದರು. ರಾಜಕುವರಿ ವಿದ್ಯಾಧರೆಯನ್ನು (ವಂಡಾರು ಗೋವಿಂದ) ಮದುವೆಗೆ ಮುನ್ನ ಕೂಡುವ ಇಚ್ಛೆಯಿಂದ ಹೋದ ಮಂತ್ರಿ ಕುವರನ ಜತೆಗಿನ ಸರಸಮಯ ಸಂಭಾಷಣೆ ರಸಮಯವಾಗಿತ್ತು. ಅದಕ್ಕೊಪ್ಪದ ವಿದ್ಯಾಧರೆಯಿಂದ ಅವಮಾನಿತನಾದ ಕಲಾಧರ ಅಪ್ಪನಲ್ಲಿ (ನಾಕೋಡು ಉದಯ)ದೂರು ಹೇಳಿ ಮಂತ್ರಿ ಹುಡುಕುವ ಅವಿದ್ಯಾವಂತ ಕುರುಬ (ಶ್ರೀಧರ ಕಾಸರಕೋಡು) ತಾತ್ಕಾಲಿಕ ಪಂಡಿತನಾಗಿ ವಿದ್ಯಾಧರೆಯನ್ನು ವರಿಸುತ್ತಾನೆ. ಮದುವೆ ದಿನ ರಾತ್ರಿ ವಂಚನೆ ಅರಿತ ವಿದ್ಯಾಧರೆಯ ಕಾಳಿಯ ಉಪಾಸನೆ ಮಾಡುವಂತೆ ಪತಿಗೆ ನೀಡಿದ ಸಲಹೆಯಂತೆ ಪ್ರಾರ್ಥಿಸಿ ಕಾಳಿ ಪ್ರತ್ಯಕ್ಷವಾಗಿ ನಾಲಿಗೆಯಲ್ಲಿ ಬೀಜಾಕ್ಷರ ಬರೆದು ಕಾಳಿದಾಸ ಎಂದು ಪ್ರಖ್ಯಾತನಾಗುವುದು ಕಥಾ ಹಂದರ.
ಶ್ರೀ ಕೃಷ್ಣ ಮಠದ ರಾಜಾಂಗಣದಲ್ಲಿ ಜು.22ರ ರಾತ್ರಿ ನಡೆದ ಕಡತೋಕ ಮಂಜುನಾಥ ಭಾಗವತ ವಿರಚಿತ ಕವಿರತ್ನ ಕಾಳಿದಾಸ ಯಕ್ಷಗಾನ ಪ್ರಸಂಗ ಪ್ರೇಕ್ಷಕ ಸಂದೋಹಕ್ಕೆ ಮನರಂಜನೆ ಜತೆಗೆ ಭಾವಪೂರ್ಣ ಅಭಿನಯ, ಹಾಡುಗಾರಿಕೆ ಆಸ್ವಾದನೆಗೆ ಅವಕಾಶ ನೀಡಿತು. ಪರ್ಯಾಯ ಪಲಿಮಾರು ಮಠ, ಶೀ ಕೃಷ್ಣ ಮಠ, ತಲ್ಲೂರ್ಸ್ ಫ್ಯಾಮಿಲಿ ಟ್ರಸ್ಟ್, ಲಯನ್ಸ್ ಸಂಸ್ಥೆ ಸಹಯೋಗದಲ್ಲಿ ಧಾರೇಶ್ವರ ಯಕ್ಷಬಳಗ ಟ್ರಸ್ಟ್ ಕಿರಿಮಂಜೇಶ್ವರ ಸಂಯೋಜನೆಯಲ್ಲಿ ಮೂರನೇ ವರ್ಷದ ಯಕ್ಷ ಅಷ್ಟಾಹ ಅಂಗವಾಗಿ ಎಂಟು ಪ್ರಸಂಗಗಳ ಆಯೋಜನೆ.
ತೆಂಕಿನಲ್ಲಿ ಇಲ್ಲವೇ ಇಲ್ಲ ಎನ್ನಬಹುದಾದ, ಬಡಗಿನಲ್ಲೂ ಈಚಿನ ದಿನಗಳಲ್ಲಿ ಮರೆಯಾಗುತ್ತಿರುವ ಪ್ರಸಂಗ ಕಾಳಿದಾಸ. ಒಂದು ಕಾಲದಲ್ಲಿ ಚಿಟ್ಟಾಣಿ, ಧಾರೇಶ್ವರ, ಗುಡಿಗಾರರ ತಂಡದ ಅಡಿಯೋ ಕ್ಯಾಸೆಟ್ ಮೂಲಕ ಈ ಪ್ರಸಂಗ ಸೂಪರ್ ಹಿಟ್ ಆಗಿತ್ತು. ಅಂತಹ ಹಳೆಯ ವೈಭವದ ದಿನಗಳ ಮೆಲುಕು ಹಾಕಲು ರಾಜಾಂಗಣದ ಯಕ್ಷಗಾನ ಅವಕಾಶ ಮಾಡಿಕೊಟ್ಟಿತು. ಸುಬ್ರಹ್ಮಣ್ಯ ಧಾರೇಶ್ವರರ ಹಳೆಯ ಪದ್ಯಗಳ ನೆನಪು ಆರಂಭವಾದದ್ದು “ಕುರುಬರೆಲ್ಲರು ಸೇರುವ ಕುರಿಮಂದೆ ಕಾಯುವ ಹೇ ಕಾಳಪ್ಪ, ಮುಕ್ಕಣ್ಣನೆಲ್ಲರೂ ಕೊಂಡಾಡಿರೋ’ ಎಂದು ಕುರುಬನ ಪ್ರವೇಶದಿಂದಲೇ. ಅಲ್ಲಿವರೆಗೆ ಅವರ ಬದಲಾದ ಶೈಲಿಯ ಭಾಗವತಿಕೆಯೇ ಇತ್ತು. ವಿದ್ಯಾಧರೆಯ “ವೇದ ಶಾಸ್ತ್ರಂಗಳಲಿ ಧೀರತೆಯಿಂದ ವಾದಿಸಿ ಗೆಲುವವಗೆ’ ಎಂಬ ಪದ್ಯ, “ವರ ಮನೋಹರೆ ಬಳಿಗೆ ನೀ ಬಾರೆ’ , “ಅಳಬೇಡ ಕಣೇ ಸುಮ್ಕಿರೆ ಎಲಾ ಹೆಂಡ್ರೆ . . ‘ ಮೊದಲಾದ ಪದ್ಯಗಳು ಪ್ರೇಕ್ಷಕರಿಂದ ಅಪೂರ್ವ ಕರತಾಡನಕ್ಕೆ ಸಾಕ್ಷಿಯಾಯಿತು.
ತೀರ್ಥಹಳ್ಳಿಯವರ ಕಲಾಧರ ಇಡೀ ಪ್ರಸಂಗದ ಹೈಲೈಟ್ ಆಗಿದ್ದರೆ ಅದಕ್ಕೆ ಪೂರಕವಾದ ಉತ್ತಮ ಸಾಹಚರ್ಯ ನೀಡಿದ್ದು ವಂಡಾರು ಗೋವಿಂದರ ವಿದ್ಯಾಧರೆ. ಅವರಿಬ್ಬರ ಸಂಭಾಷಣೆ, ನೃತ್ಯ ಸಮಯೋಚಿತ. ಎಲ್ಲೆ ಮೀರದ ಚೌಕಟ್ಟಿನಲ್ಲಿಯೇ ಶೃಂಗಾರವನ್ನು ಅಭಿನಯಿಸಿದ್ದು ಅನನ್ಯವಾಗಿತ್ತು. ನಾಕೋಡು ಉದಯರ ಮಂತ್ರಿ, ಶ್ರೀಧರ ಕಾಸರಕೋಡು ಅವರ ಕಾಳಿದಾಸ ಒಟ್ಟು ಪ್ರಸಂಗವನ್ನು ಅಮೋಘವಾಗಿಸಿತು. ಕುರುಬನ ಪ್ರವೇಶದ ಬಳಿಕ ಮಂತ್ರಿಯ ಪ್ರವೇಶದವರೆಗಿನ ಹಾಸ್ಯ ಸ್ವಲ್ಪ ಮಟ್ಟಿಗೆ ಸಮಯ ಕೊಲ್ಲುವಂತೆ ಕಂಡರೂ ಮಂತ್ರಿಯ ಜತೆಗೆ ಅರಮನೆ ಪ್ರವೇಶವಾದ ಬಳಿಕ ಪ್ರಸಂಗಕ್ಕೆ ಉತ್ತಮ ಓಘ ಕಾಣಸಿಕ್ಕಿತು. ಬೊಳ್ಗೆರೆ ಹಾಗೂ ಶಿವಾನಂದ ಕೋಟ ಅವರ ಹಿಮ್ಮೇಳವಿತ್ತು.
ಲಕ್ಷ್ಮೀ ಮಚ್ಚಿನ