ಹುಬ್ಬಳ್ಳಿ: ಆಸ್ತಿಕರ ಹಾಗೂ ಇನ್ನಿತರ ತೆರಿಗೆ ಸಂಗ್ರಹವನ್ನು ಶೀಘ್ರದಲ್ಲಿಯೇ ಸರಳೀಕರಣಗೊಳಿಸಲಾಗುತ್ತಿದ್ದು, ಆನ್‌ಲೈನ್ ಹಾಗೂ ಮೊಬೈಲ್ ಅಪ್ಲಿಕೇಶನ್ ಮೂಲಕ ಕರ ಪಾವತಿ ಸೌಲಭ್ಯ, ಕರ ಪಾವತಿ ಬಾಕಿ ಕಡತಗಳ ವಿಲೇವಾರಿಗೆ ಅದಾಲತ್ ಮಾಡುವುದಾಗಿ ಪಾಲಿಕೆ ಆಯುಕ್ತ ಸಿದ್ದಲಿಂಗಯ್ಯ ಹಿರೇಮಠ ಹೇಳಿದರು.
ಸೋಮವಾರ ನಡೆದ ಪಾಲಿಕೆ ಸಾಮಾನ್ಯ ಸಭೆಯಲ್ಲಿ ಜೆಡಿಎಸ್ ಸದಸ್ಯ ರಾಜಣ್ಣಾ ಕೊರವಿ ಅವರ ಪ್ರಶ್ನೆಗೆ ಉತ್ತರಿಸಿದ ಆಯುಕ್ತರು, ಸ್ಮಾರ್ಟ್ ಸಿಟಿ ಯೋಜನೆಯಡಿ ತೆರಿಗೆ ಸಂಗ್ರಹಕ್ಕೆ ವೆಬ್‌ಸೈಟ್ ಮತ್ತು ಮೊಬೈಲ್ ಅಪ್ಲಿಕೇಶನ್ ಸಿದ್ಧತೆಗೆ ಸೂಚನೆ ಇದ್ದು, ಆನ್‌ಲೈನ್ ಪಾವತಿಗೆ ಒತ್ತು ನೀಡಲಾಗುತ್ತಿದೆ.
ಕರ ಸಂಗ್ರಹಕಾರರಿಗೆ ಪಿಒಎಸ್ ಯಂತ್ರಗಳನ್ನು ನೀಡಲಾಗುವುದು ಎಂದರು. ಪಾಲಿಕೆಯಲ್ಲಿ ಕಾಗದ ರಹಿತ ಆಡಳಿತಕ್ಕೆ ಕ್ರಮ ಕೈಗೊಳ್ಳಲಾಗುವುದು. ಕರ ಪಾವತಿ ಬಾಕಿ ಕಡತಗಳ ವಿಲೇವಾರಿಗೆ ವಲಯವಾರು ಅದಾಲತ್ ನಡೆಸಲಾಗುವುದು. ಬೇಸಿಗೆ ಸಂದರ್ಭದಲ್ಲಿ ಪಾಲಿಕೆಯಲ್ಲಿ ವರ್ಗಾವಣೆ ನಡೆಯಲಿದ್ದು, ಹೆಚ್ಚು ವರ್ಷಗಳಿಂದ ಒಂದೇ ಕಡೆ ಇರುವವರನ್ನು ವರ್ಗ ಮಾಡಲಾಗುವುದು ಎಂದರು.
ಪಕ್ಷಭೇದ ಮರೆತು ವಿರೋಧ: ಕರ ಪಾವತಿ ಕಡತಗಳ ಬಾಕಿ ಕುರಿತು ಜೆಡಿಎಸ್‌ನ ರಾಜಣ್ಣಾ ಕೊರವಿ ಮಾತನಾಡಿ, ಸುಮಾರು 1,273 ಆಸ್ತಿ ಕರ ಪಾವತಿ ಅರ್ಜಿಗಳು ಬಾಕಿ ಉಳಿದಿವೆ. ಇದಕ್ಕೆ ಕಾರಣವೇನು ಎಂದು ಪ್ರಶ್ನಿಸಿದರು. ಬಿಜೆಪಿಯ ಶಿವು ಹಿರೇಮಠ ಮಧ್ಯಪ್ರವೇಶಿಸಿ, ವಲಯ ಕಚೇರಿಗಳಲ್ಲಿ ಕ್ಲಾಕ್ ìಗಳು ಹೊಸದಾಗಿ ಆಸ್ತಿಕರ ಜೋಡಣೆಗೆ ಮುಂದಾಗುವವರಿಗೆ ನಿಗದಿತ ಹಣದ ಬದಲು ಲಂಚದ ಹಣ ಕೇಳುತ್ತಿದ್ದಾರೆ.
ಪಾಲಿಕೆ ಸದಸ್ಯರನ್ನು ಕರೆ ತಂದರೆ ಕೆಲಸ ಮಾಡಿಕೊಡುವುದಿಲ್ಲ ಎಂದು ಸಾರ್ವಜನಿಕರಿಗೆ ಹೇಳುತ್ತಿದ್ದಾರೆ ಎಂದು ಆರೋಪಿಸಿದರು. ವಿಪಕ್ಷ ನಾಯಕ ಸುಭಾಸ ಶಿಂಧೆ, ಸದಸ್ಯರಾದ ನಿರ್ಮಲಾ ಜವಳಿ, ಅಲ್ತಾಫ್ ಕಿತ್ತೂರ, ರಘು ಲಕ್ಕಣ್ಣವರ, ದೀಪಕ ಚಿಂಚೋರೆ, ಬಲರಾಮ ಕುಸುಗಲ್ಲ, ಗಣೇಶ ಟಗರಗುಂಟಿ ಇನ್ನಿತರ ಸದಸ್ಯರು ಮಾತನಾಡಿದರು.