ವಾಡಿ: ಕನ್ನಡ ಚಿತ್ರರಂಗಕ್ಕೆ ವರನಟ ಡಾ| ರಾಜಕುಮಾರ ಹಾಗೂ ಯುವರತ್ನ ಡಾ| ಪುನೀತ್ ರಾಜಕುಮಾರ ಅಂತಹ ಶ್ರೇಷ್ಠ ಕಲಾವಿದರನ್ನು ಕೊಟ್ಟಿರುವ ಶ್ರೇಯಸ್ಸು ಈಡಿಗ ಸಮುದಾಯಕ್ಕೆ ಸಲ್ಲುತ್ತದೆ ಎಂದು ಈಡಿಗ ಸಮಾಜದ ಗುರುಗಳಾದ ಶ್ರೀ ಪ್ರಣವಾನಂದ ಸ್ವಾಮೀಜಿ ಹೇಳಿದರು.
ಪಟ್ಟಣದ ಬಳವಡಗಿ ರಸ್ತೆ ಮಾರ್ಗ ಹಾಗೂ ರೈಲ್ವೆ ಮೇಲ್ಸೇತುವೆ ಪ್ರದೇಶದಲ್ಲಿ ಕೋಲಿ ಕಬ್ಬಲಿಗ ಸಮಾಜದ ಪುನೀತ್ ಅಭಿಮಾನಿ ಬಳಗದ ವತಿಯಿಂದ ಸ್ಥಾಪಿಸಲಾದ ಯುವರತ್ನ ಡಾ|ಪುನೀತ್ ರಾಜಕುಮಾರ ವೃತ್ತದ ನೂತನ ಫಲಕ ಅನಾವರಣಗೊಳಿಸಿ ಮಾತನಾಡಿದರು.
ಕನ್ನಡ ಚಿತ್ರರಂಗದ ಪ್ರಗತಿಗೆ ಶ್ರಮಿಸುವ ಜತೆಗೆ ಸಮಾಜ ಸೇವೆಯಲ್ಲೂ ತೊಡಗಿದ ದಿ| ಪುನೀತ್ ರಾಜಕುಮಾರ ಅವರು ಅದ್ಭುತ ಕಲಾವಿದರಾಗಿದ್ದರು. ಸಿನೆಮಾ ವೃತ್ತಿಯಲ್ಲಿ ತೊಡಗಿದ್ದಾಗಲೇ ಅನಾಥ ಮಕ್ಕಳ ಶಿಕ್ಷಣಕ್ಕಾಗಿ ಶಾಲೆ ತೆರೆದದ್ದನ್ನು ಯಾರಿಗೂ ಗೊತ್ತುಪಡಿಸದೆ ತೆರೆಮರೆಯಲ್ಲಿ ಸೇವೆ ಮಾಡಿದ ಪುಣ್ಯಾತ್ಮನಾಗಿದ್ದ. ಪುನೀತ್ ಈಗ ಅಗಲಿದ್ದರೂ ಪ್ರತಿಯೊಬ್ಬ ಕನ್ನಡಿಗನ ಹೃದಯದಲ್ಲಿ ಅಡಕವಾಗಿದ್ದಾರೆ ಎಂದರು.
ಕೊಂಚೂರು ಮಹರ್ಷಿ ಸವಿತಾ ಪೀಠದ ಧರ್ಮಾಧಿಕಾರಿ ಶ್ರೀಧರಾನಂದ ಸರಸ್ವತಿ ಸ್ವಾಮೀಜಿ, ಪುನೀತ್ ಅಭಿಮಾನಿ ಬಳಗದ ಅಧ್ಯಕ್ಷ, ಕೋಲಿ ಸಮಾಜದ ಅಧ್ಯಕ್ಷ ನಾಗೇಂದ್ರ ಜೈಗಂಗಾ, ಆರ್ಯ ಈಡಿಗ ಸಮಾಜದ ತಾಲೂಕು ಕಾರ್ಯದರ್ಶಿ ಕಾಶೀನಾಥ ಗುತ್ತೇದಾರ, ನಗರ ಸಮಿತಿ ಅಧ್ಯಕ್ಷ ಸುನೀಲ ಗುತ್ತೇದಾರ, ಕಾರ್ಯದರ್ಶಿ ಮಲ್ಲಯ್ಯ ಗುತ್ತೇದಾರ, ಮಾಜಿ ಅಧ್ಯಕ್ಷ ಸಂತೋಷ ಗುತ್ತೇದಾರ, ಕೋಲಿ ಸಮಾಜದ ಮುಖಂಡರಾದ ಶಿವಪ್ಪ ಮುಂಡರ್ಗಿ, ಅರ್ಜುನ ನಾಯ್ಕೋಡಿ, ಯಂಕಪ್ಪ ಮಾಲಗತ್ತಿ, ಅನಿಲಕುಮಾರ ಶಿವಬೋಧ, ರಮೇಶ ಕೊಳ್ಳಿ, ರಾಮಚಂದ್ರ ಹೊನಗುಂಟಿ, ಹಣಮಂತ ಮದ್ರಿ, ಮಲ್ಲಿಕಾರ್ಜುನ ತಳವಾರ, ಮಡಿವಾಳ ಬಿದನೂರ, ಬಸವರಾಜ ಚಿತ್ತಾಪುರ, ರಾಜು ಇದ್ದರು.