Advertisement
ಯಾರಿವರು? ಅಂತ ನೀವು ಕೇಳಿದರೆ ಉತ್ತರ, ಮಳೆಗಾಲದಲ್ಲಿ ಏಡಿ ಬೇಟೆಗೆ ಹೋಗುವ ಉತ್ಸಾಹಿ ಗುಂಪು. ಈ ಸಲದ ಮಳೆ ಕೊಂಚ ಕಡಿಮೆ ಇದ್ದರೂ ಹಳ್ಳಿಗಳಲ್ಲಿ ಏಡಿ, ಹಳ್ಳದ ಮೀನುಗಳನ್ನು ಹಿಡಿಯುವ ಯುವ ಜನರ ಗುಂಪು ಕಡಿಮೆಯಾಗಿಲ್ಲ. ಜುಲೈ ತಿಂಗಳಲ್ಲಿ ಮಳೆ ಬಿರುಸುಗೊಂಡರೆ ಊರಿನ ಹಳ್ಳಗಳಲ್ಲಿ ಮೀನು ಹಾಗೂ ಏಡಿ ಬೇಟೆಯ ಹುರುಪು ಕೂಡ ಜಾಸ್ತಿ.
ಹೊರಗೆ ಮಳೆ ಬೀಳುತ್ತಿದೆ ಅಂತ ಬೆಚ್ಚಗೇ ಕಂಬಳಿ ಹೊದ್ದು ಮಲಗಿಕೊಳ್ಳುವವರ ದಂಡು ಒಂದೆಡೆಯಾದರೆ, ಜೂನ್ ತಿಂಗಳ ಮೊದಲ ಮಳೆ ಬೋರೆಂದು ಬಂದದ್ದೇ ತಡ ಉಬ್ಬೆರ್ ಸಂಭ್ರಮದಲ್ಲಿ ಕಳೆದು ಹೋಗುವವರ ದಂಡು ಮತ್ತೂಂದೆಡೆ. ಮಳೆಗಾಲದ ಶುರುವಾತಿನಲ್ಲಿ ಗ್ರಾಮೀಣ ಭಾಗಗಳಲ್ಲಿ ರಾತ್ರಿಯಾಗುತ್ತಿದ್ದಂತೆಯೇ ಉಬ್ಬೆರ್‌ಗ್ ಪೋಯಾ? ಅಂತ ಖುಷಿಯಿಂದ ಕೇಳಿ ತಲೆಗೆ ಟೊಪ್ಪಿ ಏರಿಸಿ, ಗೋಣಿ ಕತ್ತಿ, ಏಡಿ ಹಿಡಿಯೋ ಬುಟ್ಟಿ,ಮುಂತಾದ ಉಪಕರಣಗಳನ್ನು ಹಿಡಿದು ಹಳ್ಳದ ಕಡೆಗೋ? ಗದ್ದೆಯ ಕಡೆಗೋ ಹೋಗುವ ಉತ್ಸಾಹಿ ಯುವಕರು ಕಾಣಸಿಗುತ್ತಾರೆ. ತಾಲೂಕಿನಲ್ಲಿಯೂ ಅಂತಹ ಕೆಲವು ಗುಂಪು ಸಕ್ರಿಯವಾಗಿದೆ. ಹಳ್ಳೇಡಿಯ ರುಚಿ ಬಲ್ಲವನೇ ಬಲ್ಲ
ಮೊದಲ ಮಳೆ ಬಿದ್ದಾಗ ಹಳ್ಳದ ಏಡಿಗಳ ಚಟುವಟಿಕೆ ಜಾಸ್ತಿ. ಅಲ್ಲದೇ ಅವುಗಳ ಸಂತತಿಯೂ ಮಳೆಗಾಲಕ್ಕೆ ಹೆಚ್ಚಾಗುತ್ತದೆ. ಕಡಲಿನ ಮೀನುಗಾರಿಕೆ ಮುಗಿದು ಪೇಟೆಗೆ ಮೀನುಗಳು ಬರುವುದಿಲ್ಲ. ಈ ಸಮಯದಲ್ಲಿ ಹಳ್ಳ ಕೊಳ್ಳದ ಮೀನುಗಳನ್ನು ಹಳ್ಳದ ಏಡಿಗಳನ್ನೋ ಹಿಡಿದು ಅವುಗಳ ಬಗೆ ಬಗೆ ಖಾದ್ಯ ತಯಾರಿಸಿ ತಿಂದು ಖುಷಿ ಪಡುವವರು ಇದ್ದಾರೆ. ಏನೇ ಆಗಲಿ ಹಳ್ಳದ ಏಡಿಗಳ ರುಚಿಯೋ ರುಚಿ ಅನ್ನೋದು ಏಡಿ ಖಾದ್ಯ ತಿಂದವರ ಹೇಳಿಕೆ.
Related Articles
ನಗರ ಪ್ರದೇಶಗಳಲ್ಲಿ ಹಳ್ಳ ಕೊಳ್ಳಗಳು ಮಾಯವಾಗು ತ್ತಿದ್ದರೂ ಗ್ರಾಮೀಣ ಪ್ರದೇಶಗಳ ಹಳ್ಳ, ತೋಡು, ಗದ್ದೆಗಳ ಮೂಲೆ ಗಳಲ್ಲಿ ಮಳೆಗಾಲದ ಏಡಿಗಳು ಮನೆಮಾಡಿಕೊಂಡಿರುತ್ತದೆ. ಮಳೆಗಾಲ ಆರಂಭದಲ್ಲಿ ತಾಲೂಕಿನ ಗ್ರಾಮಗಳಾದ ಮಾಳ, ಸಾಣೂರು, ಕಲ್ಯಾ, ಅಜೆಕಾರು, ಕಡಾರಿ ಮೊದಲಾದ ಕಡೆಗಳಲ್ಲಿ ಹಳ್ಳಗಳ ಹರಿವು ಜಲಮೂಲಗಳು ಅಧಿಕವಾಗಿರುವುದರಿಂದ ಇಲ್ಲಿ ಹಳ್ಳದ ಏಡಿಗಳ ಸಂಖ್ಯೆ ಜಾಸ್ತಿ. ಹಾಗಾಗಿ ರಾತ್ರಿಯಾದರೆ ಸಾಕು ಅವುಗಳು ನೀರಲ್ಲಿ ತೇಲಿ ಬರುತ್ತದೆ, ಮಳೆ ಬಂದರಂತೂ ಅವುಗಳ ಅಸ್ತಿತ್ವ ಎದ್ದು ಕಾಣುತ್ತದೆ.ಹಾಗಾಗಿ ಇದೇ ಸಮಯವೇ ಏಡಿ ಬೇಟೆಗೆ ಸುಗ್ಗಿಕಾಲ ಅನ್ನುವುದು ಏಡಿ ಹಿಡಿಯುವವರ ಮಾತು.ಆದರೂ ಹಿಂದಿನ ಕಾಲದಲ್ಲಿ ಇದ್ದಷ್ಟು ಸಂಭ್ರಮ ಈಗಿನ ಮಂದಿಗೆ ಇಲ್ಲ. ಎಲ್ಲವೂ ಬದಲಾಗಿರುವಾಗ ಏಡಿ ಹಿಡಿಯುವ ಸಡಗರವೂ ಬದಲಾಗಿರುವುದು ವಿಶೇಷವಲ್ಲ ಎನ್ನುವುದು ಹಳ್ಳಿಯ ಹಳೆ ಮಂದಿಗಳ ಹೇಳಿಕೆ.
Advertisement
ಮಳೆ ಜಾಸ್ತಿ ಬಿರುಸಾದರೆ ಹಳ್ಳದ ಏಡಿಗಳನ್ನು ಹಿಡಿಯೋದು ಕಷ್ಟ. ಜೂನ್ ಜುಲೈ ತಿಂಗಳಲ್ಲಿ ಏಡಿಗಳನ್ನು ಹಿಡಿಯೋ ಖುಷಿ ಬೇರೆಯೇ. ಈಗಲೂ ಊರಿನ ಸಣ್ಣ ಮಕ್ಕಳ ಜತೆಗೂಡಿ ಏಡಿ ಹಿಡಿಯಲು ರಾತ್ರಿ ಹೊತ್ತು ಗ್ಯಾಸ್‌ಲೈಟ್ ಹಿಡಿದು ಏಡಿ ಬೇಟೆಗೆ ಹೋಗುತ್ತೇವೆ. ಅಲ್ಲದೇ ಹಳ್ಳದ ಮೀನುಗಳು ಕೂಡ ಈ ಸಮಯದಲ್ಲಿ ಸಿಗುತ್ತವೆ. ಹಳ್ಳದ ಏಡಿಗಳಲ್ಲಿ ಕಪ್ಪು ಮತ್ತು ಬಿಳಿ ಏಡಿಗಳೆಂಬ ಎರಡು ವಿಧಗಳಿದ್ದರೂ ಜಾಸ್ತಿ ಬೇಟೆಗೆ ಸಿಗುವುದು ಕಪ್ಪು ಏಡಿಗಳು.-ನಾಗೇಂದ್ರ, ಬೈಲೂರು
ಏಡಿ ಹಿಡಿಯುವ ತಂಡದ ಸದಸ್ಯ – ಪ್ರಸಾದ್ ಶೆಣೈ ಕಾರ್ಕಳ