Advertisement
ಮೋಡದ ಗರ್ಭ ಸೀಳಿ ಮೊದಲ ಹನಿ ಕುಡಿಯೊಡೆದು, ಭುವಿಯ ತಾಕಿದ ಘಳಿಗೆಯಲ್ಲಿಯೇ ಒಲವ ತುಂತುರಿನ ಸಿಂಚನ ನಮ್ಮಿಬ್ಬರ ಹೃದಯದಲ್ಲಿ ಮೊಳಕೆಯೊಡೆದಿದ್ದು. ಅಂದು ಕಾಲೇಜಿಗೆ ಹೊರಡುವಾಗಲೇ ಅಂದುಕೊಂಡಿದ್ದೆ; ಇಂದು ಖಂಡಿತ ಮಳೆ ಬರುತ್ತದೆ ಅಂತ. ತರಗತಿಯ ಕೋಣೆಯಲ್ಲಿ ಹಿಸ್ಟ್ರಿ ಲೆಕ್ಚರರ್ ಪಾಠ ಮಾಡುತ್ತಿದ್ದರೆ, ಹೊರಗೆ ಬಾನಗಲ ತುಂಬ ದಟ್ಟ ಕಪ್ಪು ಮೋಡಗಳ ಮಿಲನ.
Related Articles
Advertisement
ಅರಳು ಹುರಿದಂತೆ ಮಾತಾಡುವಾಗ ಇಷ್ಟಗಲ ಅರಳುವ ನಿನ್ನ ಬೊಗಸೆ ಕಂಗಳು, ಪದೇ ಪದೆ ಹಣೆ ಮೇಲೆ ಬೀಳುತ್ತಾ, ಸೌಂದರ್ಯಕ್ಕೆ ಸಾಥ್ ನೀಡುವ ಮುಂಗುರುಳು, ನಕ್ಕಾಗ ಕೆನ್ನೆ ಮೇಲೆ ಬೀಳುವ ಗುಳಿ, ಮೊದಲ ಪರಿಚಯದಲ್ಲಿಯೇ ಎಲ್ಲವನ್ನು ಹೇಳಿಕೊಂಡು ಹತ್ತಿರವಾದ ನಿನ್ನ ಸ್ವಭಾವ… ಎಲ್ಲವೂ ಹಿಡಿಸಿದವು. ಪ್ರೀತಿಯ ಪರಿಮಳ ಘಮಘಮಿಸಲು ಇಷ್ಟು ಸಾಕಲ್ಲವೇ? ಮಳೆ, ನಿನ್ನಂಥ ಚೆಂದದ ಗೆಳತಿಯನ್ನು ಹತ್ತಿರವಾಗಿಸಿತ್ತು. ಆಮೇಲೆ ಇಳೆಗಿಳಿಯುವ ಮಳೆಯ ನಡುವೆ ಜೊತೆಗೂಡಿ ಹೆಜ್ಜೆ ಹಾಕಿದ್ದು, ಮನಬಿಚ್ಚಿ ಹರಟಿದ್ದು, ನಿನ್ನ ಕಷ್ಟಗಳಿಗೆ ಕಣ್ಣೀರಾಗಿದ್ದು, ಭವಿಷ್ಯದ ಹೊಂಗನಸು ಹೆಣೆದಿದ್ದು ಎಲ್ಲವೂ ಹಚ್ಚ ಹಸಿರು. ಖುಷಿಯೆಂಬ ಹುಡುಗಿ ಬದುಕಿನ ಖುಷಿಯನ್ನೇ ಖಾಯಮ್ಮಾಗಿಸುತ್ತಾಳೆ ಎಂದು ಅದ್ಯಾರಿಗೆ ಗೊತ್ತಿತ್ತು? ಭಗವಂತ ಒಮ್ಮೊಮ್ಮೆ ಏನನ್ನೂ ಕೇಳದೆಯೇ ದಯಪಾಲಿಸಿ ಬಿಡುತ್ತಾನಂತೆ. ಧನ್ಯೋಸ್ಮಿ!
ಮಧ್ಯರಾತ್ರಿ ಮನೆಯ ಕಿಟಕಿಯಾಚೆಗಿಂದ ಜಿಟಿಗುಟ್ಟುವ ಮಳೆಯನ್ನು ದಿಟ್ಟಿಸುತ್ತ ಕುಳಿತ ನನಗೆ ಇಷ್ಟೆಲ್ಲ ನೆನಪುಗಳು ಜೊತೆಯಾದೆವು. ಷೋಕೇಸಿನಲ್ಲಿನ ಮೊಲದ ಬಿಳುಪಿನ ತಾಜ್‌ಮಹಲ್ ಅನ್ನು ಒಮ್ಮೆ ನೋಡಿಕೊಂಡೆ. ನಿದ್ದೆಯಲ್ಲಿ ಏನನ್ನೋ ನೆನೆಸಿಕೊಂಡು ನಗುತ್ತಿದ್ದ ನಿನ್ನ ಹಣೆಗೆ ಹೂಮುತ್ತನಿತ್ತು ಕಣ್ತುಂಬಿಕೊಂಡೆ. ಒಳಗೂ, ಹೊರಗೂ ಸಣ್ಣಗೆ ಹನಿಯುವ ಮಳೆ ಖುಷಿಗೆ ಸಾಥ್ ನೀಡುತ್ತಿತ್ತು.
ನಾಗೇಶ್ ಜೆ. ನಾಯಕ