ಮಂಗಳೂರು: ಮುಂಗಾರು ಮಳೆಯ ಅಬ್ಬರ ಕಡಿಮೆಯಾಗಿ, ಹಿಂಗಾರು ಮಳೆ ಆಗಾಗ ಸುರಿಯುತ್ತಿದೆ. ಇದೇ ವೇಳೆ ಪೂರ್ವ ಕಡಲಿನಲ್ಲಿ ಆಗುತ್ತಿರುವ ಹವಾಮಾನ ಬದಲಾವಣೆ, ವಾಯುಭಾರ ಕುಸಿತ, ಅದರಿಂದ ಸುರಿಯುತ್ತಿರುವ ಮಳೆ ಮೊದಲಾದ ಕಾರಣಗಳಿಂದ ಈ ಬಾರಿ ಚಳಿಯ ದಿನಗಳು ಕಡಿಮೆಯಾಗುತ್ತಿವೆ.
ಆಗಾಗ ಸಾಮಾನ್ಯ ಚಳಿ, ಹಗಲು ವೇಳೆ ಉರಿ ಬಿಸಿಲಿನ ದಿನಗಳು ಸದ್ಯ ಕಂಡುಬರುತ್ತಿವೆ. ಅಕ್ಟೋಬರ್ ಅಂತ್ಯ-ನವೆಂಬರ್ ಆರಂಭದಲ್ಲಿ ಎರಡು ಮೂರು ದಿನ ಚಳಿಯ ವಾತಾವರಣವಿತ್ತು. ಜತೆಗೆ ಗ್ರಾಮೀಣ ಭಾಗದಲ್ಲಿ ದಟ್ಟ ಮಂಜು ಕವಿದ ವಾತಾವರಣವೂ ಕಂಡುಬಂದಿತ್ತು. ಆದರೆ ಬಳಿಕ ಚಳಿ ದೂರವಾಗಿ ಮುಂಜಾನೆಯೇ ಸೆಕೆ ಹೆಚ್ಚಾಗಿದೆ.
ಈಗ ಮತ್ತೆ ಕೆಲವು ದಿನಗಳಿಂದ ಸಾಮಾನ್ಯ ಚಳಿ ಅನುಭವಕ್ಕೆ ಬರುತ್ತಿದೆ. ಆದರೆ ಇದು ಕೂಡ ಕೆಲವೇ ದಿನಗಳಿಗೆ ಸೀಮಿತ. ನ. 12ರಿಂದ ಮತ್ತೆ ಮಳೆ ಸುರಿಯುವ ಸಾಧ್ಯತೆ ಇದ್ದು, ಬಳಿಕ ಕಡಿಮೆಯಾದರೂ, ನ. 19ರಿಂದ ಮತ್ತೆ ಮಳೆಯಾಗುವ ಮುನ್ಸೂಚನೆ ಇದೆ. ನವೆಂಬರ್ ಅಂತ್ಯದ ವರೆಗೂ ಇದೇ ರೀತಿಯ ಆಗಾಗ ವಾತಾವರಣದಲ್ಲಿ ಬದಲಾವಣೆ ಕಂಡುಬಂದು ಮಳೆ ಸುರಿಯುವ ನಿರೀಕ್ಷೆಯನ್ನು ಹವಾಮಾನ ಇಲಾಖೆ ವ್ಯಕ್ತಪಡಿಸಿದೆ. ಮಳೆ ದೂರವಾದರೆ ಡಿಸೆಂಬರ್ ತಿಂಗಳಿನಿಂದ ಚಳಿ ತೀವ್ರವಾಗುವ ಸಾಧ್ಯತೆಯಿದೆ ಎನ್ನುತ್ತಾರೆ ಹವಾಮಾನ ತಜ್ಞರು.
ಮಧ್ಯಾಹ್ನ ಉರಿ ಬಿಸಿಲು:
ಹಗಲು ಹೊತ್ತಿನಲ್ಲಿ ಉರಿ ಬಿಸಿಲಿನಿಂದ ತಾಪಮಾನದದಲ್ಲಿ ವಿಪರೀತ ಏರಿಕೆ ಉಂಟಾಗುತ್ತಿದೆ. ಸದ್ಯ ಕರಾವಳಿಯಲ್ಲಿ 30-34 ಡಿಗ್ರಿ ಸೆಲ್ಸಿಯಸ್ ವರೆಗೆ ಗರಿಷ್ಠ ಉಷ್ಣಾಂಶ ದಾಖಲಾಗುತ್ತಿದೆ. ಮುಂದಿನ ದಿನಗಳಲ್ಲಿ ಈ ತಾಪಮಾನ 35-36 ಡಿಗ್ರಿ ಸೆ.ವರೆಗೆ ತಲುಪುವ ಸಾಧ್ಯತೆಯೂ ಇದೆ ಎನ್ನುತ್ತದೆ ಹವಾಮಾನ ಇಲಾಖೆಯ ಈ ಹಿಂದಿನ ಅಂಕಿ ಅಂಶ. ಸದ್ಯ ಕನಿಷ್ಠ ತಾಪಮಾನ 22-23 ಡಿಗ್ರಿ ಸೆ. ಗಡಿಯಲ್ಲಿದ್ದು, ಡಿಸೆಂಬರ್ ಅಂತ್ಯದ ವೇಳೆ 20 ಡಿಗ್ರಿ ಸೆ.ಗಿಂತ ಕೆಳಗಿಳಿಯುವ ಸಾಧ್ಯತೆಯಿದೆ.
ಕೃಷಿಕರಲ್ಲಿ ಆತಂಕ:
ಚಳಿ ಕಡಿಮೆಯಾದರೆ ಕರಾವಳಿಯಲ್ಲಿ ಮುಖ್ಯವಾಗಿ ಪರಿಣಾಮ ಬೀಳುವುದು ಭತ್ತದ ಬೆಳೆಯ ಮೇಲೆ. ಚಳಿ ಹೆಚ್ಚಿದ್ದಷ್ಟು ಭತ್ತದ ಪೈರು ಉತ್ತಮವಾಗಿ ಬರುತ್ತದೆ. ಉತ್ತಮ ಚಳಿ ಇದ್ದರೆ ಗೇರು, ಮಾವು, ಹಲಸಿನ ಮರಗಳಲ್ಲಿ ಹೂ ಬಿಡಲು ಆರಂಭವಾಗುತ್ತದೆ. ಚಳಿ ಕಡಿಮೆಯಾದರೆ ಇದೂ ವಿಳಂಬವಾಗುತ್ತದೆ. ಅಂದರೆ ಬೇಸಗೆಯಲ್ಲಿ ಕೈಗೆ ಸಿಗಬೇಕಾದ ಬೆಳೆ ಮಳೆಗಾಲದ ಹೊತ್ತಿಗೆ ಸಿಗುವಂತಾಗುತ್ತದೆ. ಇದು ಫಸಲು- ಆದಾಯದ ಮೇಲೆ ಪರಿಣಾಮ ಬೀಳುತ್ತದೆ ಎನ್ನುತ್ತಾರೆ ಕೃಷಿಕರು. ಚಳಿ ತಡವಾದರೆ ತರಕಾರಿ ಬೆಳೆಗಳ ಮೇಲೆಯೂ ದುಷ್ಪರಿಣಾಮ ತಪ್ಪಿದ್ದಲ್ಲ.
ಸದ್ಯ ಆಗಾಗ ಮಳೆ ಸುರಿಯುತ್ತಿರುವುದರಿಂದ ಚಳಿಯಲ್ಲಿ ನಿರಂತರತೆ ಇಲ್ಲ. ನವೆಂಬರ್ ಅಂತ್ಯದ ವರೆಗೂ ಇದೇ ರೀತಿಯ ವಾತಾವರಣ ಇರಬಹುದು. ಬಳಿಕ ಚಳಿ ತೀವ್ರವಾಗುವ ಸಾಧ್ಯತೆಯಿದೆ.
– ಸಾಯಿಶೇಖರ್ ಕರಿಕಳ,ಹವ್ಯಾಸಿ ಹವಾಮಾನ ವಿಶ್ಲೇಷಕರು