ಮಡಿಕೇರಿ: ಮಹಾಮಳೆಯ ಪ್ರವಾಹದಿಂದ ಸುಧಾರಿಸಿಕೊಳ್ಳಬೇಕು ಎನ್ನುವಷ್ಟರಲ್ಲೇ ಕೊಡಗಿನ ಜನತೆಗೆ ಮತ್ತೂಂದು ಆತಂಕ ಎದುರಾಗಿದೆ. ಮಳೆ ನಿಂತು ತಿಳಿ ಬಿಸಿಲಿನ ವಾತಾವರಣವಿದ್ದರೂ ವಿವಿಧ ಪ್ರದೇಶಗಳಲ್ಲಿ ಭೂಮಿ ಬಾಯಿ ಬಿಟ್ಟು ಜನತೆಯ ನಿದ್ದೆ ಗೆಡಿಸಲು ಆರಂಭಿಸಿದೆ.
ಭಾಗಮಂಡಲದ ಕೋರಂಗಾಲ ಹಾಗೂ ವಿರಾಜಪೇಟೆಯ ತೋರ ಗ್ರಾಮದಲ್ಲಿ ಗುಡ್ಡ ಕುಸಿದು ಸಾವು ನೋವುಗಳು ಸಂಭವಿಸಿದ ಬೆನ್ನಲ್ಲೇ ಜಿಲ್ಲೆಯ ಇತರೆಡೆಯೂ ಭೂಮಿ ಬಿರುಕು ಕಾಣಿಸಿಕೊಳ್ಳುತ್ತಿದೆ. ವಿರಾಜಪೇಟೆಯ ಮಲೆತಿರುಕೆ ಬೆಟ್ಟ, ನೆಹರೂ ನಗರ ಹಾಗೂ ಭಾಗಮಂಡಲದ ಬ್ರಹ್ಮಗಿರಿ ಬೆಟ್ಟದಲ್ಲಿ ಕೆಲವು ದಿನಗಳ ಹಿಂದೆ ಬಿರುಕು ಕಾಣಿಸಿಕೊಂಡು ವಿಜ್ಞಾನಿಗಳು ಸ್ಥಳ ಪರಿಶೀಲನೆ ನಡೆಸಿದ್ದಾರೆ.
ಬ್ರಹ್ಮಗಿರಿ ಬೆಟ್ಟಕ್ಕೆ ಅಧಿಕಾರಿಗಳ ಭೇಟಿ
ಪವಿತ್ರ ಕ್ಷೇತ್ರ ತಲಕಾವೇರಿಯ ಜಲಮೂಲದ ನೆಲೆಯಾಗಿರುವ ಬ್ರಹ್ಮಗಿರಿ ಬೆಟ್ಟಕ್ಕೆ ಭಾರತೀಯ ಸರ್ವೇಕ್ಷಣ ಇಲಾಖೆಯ ಇಬ್ಬರು ವಿಜ್ಞಾನಿಗಳು ಭೇಟಿ ನೀಡಿ ಪರಿಶೀಲಿಸಿದರು. ಈ ಬಾರಿಯ ಮಳೆ¿ ಆರ್ಭಟಕ್ಕೆ ಬ್ರಹ್ಮಗಿರಿ ಬೆಟ್ಟದ ಬಹುತೇಕ ಕಡೆಗಳಲ್ಲಿ ಬಿರುಕು ಕಾಣಿಸಿಕೊಂಡಿದೆ.
ಭಾರತೀಯ ಸರ್ವೇಕ್ಷಣ ಇಲಾಖೆಯ ವಿಜ್ಞಾನಿಗಳಾದ ಸುನಂದನ್ ಬಾಸು ಹಾಗೂ ಕಪಿಲ್ ಸಿಂಗ್ ಭೇಟಿ ನೀಡಿದ್ದಾರೆ.