ವಿಜಯಪುರ: ನೀರಾವರಿ ಯೋಜನೆಗಳ ಅನುಷ್ಠಾನಕ್ಕೆ ವಿವಿಧ ಇಲಾಖೆಗಳ ರೈಲ್ವೆ ಅಧಿಕಾರಿಗಳು ಅಸಹಕಾರ ನೀಡುತ್ತಿದ್ದಾರೆ. ಭೀಕರ ಬರ ಇದ್ದರೂ ರೈತರ ಜಮೀನಿಗೆ ನೀರು ಹರಿಸುವಲ್ಲಿ ಸರ್ಕಾರಗಳು ವಿಫಲವಾಗಿವೆ. ಕೂಡಲೇ 15 ದಿನಗಳ ಕಾಲ ಸೊಲ್ಲಾಪುರ-ಗದಗ ಮಾರ್ಗದ ಸಂಚಾರ ಸ್ಥಗಿತಗೊಳಿಸಬೇಕು.
ಇಲ್ಲವಾದಲ್ಲಿ ಅ. 29ರಂದು ಕೂಡಗಿ ರೈಲು ನಿಲ್ದಾಣದಲ್ಲಿ ಪಕ್ಷಾತೀತವಾಗಿ ರೈತರೊಂದಿಗೆ ಪ್ರತಿಭಟನೆ ನಡೆಸುವುದಾಗಿ ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ, ಸೋಮನಗೌಡ ಪಾಟೀಲ ಮನಗೂಳಿ ಎಚ್ಚರಿಸಿದ್ದಾರೆ.
ಸೋಮವಾರ ನಗರದಲ್ಲಿ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯ ಬಹುತೇಕ ನೀರಾವರಿ ಯೋಜನೆಗಳು ಹಿಂದಿನ ಸರ್ಕಾರದಲ್ಲಿ ಸಚಿವ ಡಾ| ಎಂ.ಬಿ. ಪಾಟೀಲ ಅವರಿಂದಾಗಿ ಶರವೇಗಲ್ಲಿ ನಡೆಯುತ್ತಿದ್ದವು. ಈ ಸರ್ಕಾರದಲ್ಲಿ ಜಿಲ್ಲೆಯ ಕಾಮಗಾರಿಗಳೆಲ್ಲ ಅರ್ಧಕ್ಕೆ ನಿಂತಿದ್ದು ಬಾರಾಕಮಾನ್‌ನಂತೆ ದುಸ್ಥಿತಿಯಲ್ಲಿವೆ ಎಂದು ದೂರಿದರು. ಮಲಘಾಣ ಯೋಜನೆಯ ಬಹುತೇಕ ಕಾಮಗಾರಿ ಮುಗಿದಿವೆ. ರೈತರ ಜಮೀನಿಗೆ ನೀರು ಹರಿಸಲು ಸಿದ್ಧವಾಗಿವೆ. ಆದರೆ ಕೂಡಗಿ ಬಳಿ ರೈಲ್ವೆ ಮಾರ್ಗದ ತಳಭಾಗದಲ್ಲಿ ಕಾಲುವೆ ಮಾರ್ಗದ ಕಾಮಗಾರಿ ಬಾಕಿ ಇದ್ದು, ರೈಲ್ವೇ ಅಧಿಕಾರಿಗಳ ಅಸಹಕಾರದಿಂದ ಇಡಿ ಯೋಜನೆ ಮೂಲೆಗುಂಪಾಗಿದೆ. ಪರಿಣಾಮ ಭೀಕರ ಬರದಿಂದ ತತ್ತರಿಸಿರಿರುವ ಮಸೂತಿ, ಮಲಘಾಣ, ಮುತ್ತಗಿ ಭಾಗದ ಲಕ್ಷಾಂತರ ಎಕರೆ ಜಮೀನಿನಲ್ಲಿ ರೈತರು ಬಿತ್ತಿದ ಬೆಳೆ ನೀರಿಲ್ಲದೇ ಒಣಗುತ್ತಿದ್ದು, ಆರ್ಥಿಕ ಸಂಕಷ್ಟ ಅನಭವಿಸುವಂತಾಗಿದೆ ಎಂದು ಕಿಡಿ ಕಾರಿದರು.
ಕೂಡಗಿ ಬಳಿ 24 ಗಂಟೆ ರೈಲು ಸಂಚಾರ ಸ್ಥಗಿತಗೊಳಿಸಿದರೆ ಕಾಮಗಾರಿ ಮುಗಿಸಿ ಕೊಡುವುದಾಗಿ ಗುತ್ತಿಗೆದಾರರು ಹೇಳುತ್ತಿದ್ದರೂ ರೈಲ್ವೇ ಇಲಾಖೆ ಅಧಿಕಾರಿಗಳು ಸಹಕಾರ ನೀಡುತ್ತಿಲ್ಲ. ಹೀಗಾಗಿ ರೈತರ ಹಿತ ದೃಷ್ಟಿಯಿಂದ ಜಿಲ್ಲಾಡಳಿತಕ್ಕೆ ತಕ್ಷಣ ಸಮಸ್ಯೆ ಪರಿಹಾರಕ್ಕಾಗಿ 15 ದಿನ ವಿಜಯಪುರ ಮಾರ್ಗದಲ್ಲಿನ ಎಲ್ಲ ರೈಲು ಸಂಚಾರದ ಮಾರ್ಗ ಬದಲಿಸಲು ಕ್ರಮ ಕೈಗೊಳ್ಳಬೇಕು. ತಕ್ಷಣ ಈ ಬಗ್ಗೆ ಸರ್ಕಾರ ಸ್ಪಂದಿಸದಿದ್ದಲ್ಲಿ ಅ. 29ರಂದು ಪಕ್ಷಾತೀತವಾಗಿ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದರು.
ಯೋಜನೆ ಆರಂಭದ ಸಂದರ್ಭದಲ್ಲಿ ರೈಲ್ವೆ ಇಲಾಖೆಯೊಂದಿಗೆ ಜಲ ಸಂಪನ್ಮೂಲ ಇಲಾಖೆ ಜೊತೆ ಒಪ್ಪಂದ ಮಾಡಿಕೊಳ್ಳಲಾಗಿರುತ್ತದೆ. ಆದರೆ ಇದೀಗ ಹುಬ್ಬಳ್ಳಿ ರೈಲ್ವೆ ಅಧಿ ಕಾರಿಗಳು ರೈಲು ಸಂಚಾರ ಮಾರ್ಗ ಬದಲಿಸಲು ಸಾಧ್ಯವಿಲ್ಲ, ಒಂದೊಮ್ಮೆ ಒತ್ತಡ ಹೇರಿ ಕಾಮಗಾರಿ ಮಾಡಿದರೆ ಭವಿಷ್ಯದಲ್ಲಿ ಎದುರಾಗುವ ದುರಂತಕ್ಕೆ ರೈತರೇ ಹೊಣೆ ಎಂದು ಬೆದರಿಕೆ ಹಾಕುತ್ತಿದ್ದಾರೆ. ಹೀಗಾಗಿ ತಕ್ಷಣ ಜಿಲ್ಲಾಡಳಿತ ಮಧ್ಯ ಪ್ರವೇಶಿಸಬೇಕೆಂದು ಆಗ್ರಹಿಸಿದರು.
ರೈತರು ಬನ್ನಿ ವಿನಿಯಮ ಸಂದರ್ಭದಲ್ಲಿಯೂ ಈಸಮಸ್ಯೆಯನ್ನು ಹೇಳಿಕೊಂಡಿದ್ದಾರೆ, ಈ ಸಮಸ್ಯೆ ನಿವಾರಣೆಯಾದರೆ ಬದುಕು ಬಂಗಾರವಾಗಲಿದೆ ಎಂಬ ಆಶಯ ರೈತರಲ್ಲಿದೆ. ರೈಲ್ವೆ ಇಲಾಖೆ ರೈತರ ಆಶಯಗಳಿಗೆ ತಣ್ಣೀರೆರಚಬಾರದು ಎಂದರು. ಜಿಪಂ ಸದಸ್ಯ ಕಲ್ಲಪ್ಪ ಕೊಡಬಾಗಿ, ಸಂಜಯ ಪಾಟೀಲ ಕನಮಡಿ, ವಿಜಯಕುಮಾರ ಚವ್ಹಾಣ, ಶ್ರೀನಿವಾಸ ಬೇಟಗೇರಿ, ಶ್ರೀಹರಿ ಗೊಳಸಂಗಿ, ಎಸ್. ಎಸ್. ಗೌರಿ ಇತರರು ಇದ್ದರು.