ಬೆಂಗಳೂರು: ಹಳೆ ವೈಷಮ್ಯದ ಹಿನ್ನೆಲೆಯಲ್ಲಿ ಚಾಮರಾಜಪೇಟೆಯ ರೌಡಿ ಶೀಟರ್ ಜಯಂತ್ (28) ಎಂಬಾತನನ್ನು ದುಷ್ಕರ್ಮಿಗಳು ಕೋಣನಕುಂಟೆ ಕ್ರಾಸ್‌ನಲ್ಲಿ ಬರ್ಬರವಾಗಿ ಕೊಲೆಗೈದಿದ್ದಾರೆ.
ಹಲವು ಅಪರಾಧ ಪ್ರಕರಣಗಳಲ್ಲಿ ಆರೋಪಿಯಾಗಿದ್ದ ಜಯಂತ್ ಶನಿವಾರ ರಾತ್ರಿ ಕೋಣನಕುಂಟೆಯ ಬಾರ್‌ನಲ್ಲಿ ಮದ್ಯ ಸೇವಿಸಿ ತಡರಾತ್ರಿ 2.30ರ ಸುಮಾರಿಗೆ ಸ್ನೇಹಿತ ಲೋಕೆಶ್ ಜತೆ ಬೈಕ್‌ನಲ್ಲಿ ಚಾಮರಾಜಪೇಟೆಯಲ್ಲಿರುವ ತನ್ನ ಮನೆಯತ್ತ ಹೋಗುವಾಗ ಹತ್ಯೆ ನಡೆದಿದೆ. ಈ ಸಂಬಂಧ ಪ್ರಮುಖ ಆರೋಪಿ ಪವನ್‌ನನ್ನು ಪೊಲೀಸರು ಬಂಧಿಸಿದ್ದಾರೆ.
ಕೋಣನಕುಂಟೆ ಕ್ರಾಸ್ ಬಳಿ ಆರೋಪಿಗಳಾದ ಪವನ್, ರಾಮು ಸೇರಿ ಐವರು ದುಷ್ಕರ್ಮಿಗಳು ತಮ್ಮ ಕಾರಿನಿಂದ ಜಯಂತನ ಬೈಕ್‌ಗೆ ಡಿಕ್ಕಿ ಹೊಡೆದಿದ್ದಾರೆ. ಈ ವೇಳೆ ಜಯಂತ್, ಲೋಕೇಶ್ ಕೆಳಗೆ ಬಿದ್ದಿದ್ದು, ದುಷ್ಕರ್ಮಿಗಳು ಜಯಂತ್ ಮೇಲೆ ಮಾರಕಾಸ್ತ್ರಗಳಿಂದ ಎದೆ ಹಾಗೂ ಹೊಟ್ಟೆ ಭಾಗಕ್ಕೆ ಹಲ್ಲೆ ನಡೆಸಿದ್ದಾರೆ.
ಈ ವೇಳೆ ಜಯಂತ್ ಜತೆಗಿದ್ದ ಲೋಕೇಶ್ ಹೆದರಿ ಪರಾರಿಯಾಗಿದ್ದಾನೆ. ರಕ್ತದ ಮಡುವಿನಲ್ಲಿ ಬಿದ್ದಿದ್ದ ಜಯಂತ್‌ನನ್ನು ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಲಾಂಗ್ ಹಿಡಿದು ಓಡಾಡುತ್ತಿದ್ದ: ಶನಿವಾರ ರಾತ್ರಿ ಪಾಳಿ ಗಸ್ತಿನಲ್ಲಿದ್ದ ಸುಬ್ರಹ್ಮಣ್ಯಪುರ ಪೊಲೀಸ್ ಠಾಣೆ ಕಾನ್‌ಸ್ಟೆàಬಲ್‌ಗಳಾದ ಮಂಜು ಹಾಗೂ ಶರವಣ್, ರಾತ್ರಿ 3 ಗಂಟೆ ಸುಮಾರಿಗೆ ಕೋಣನಕುಂಟೆ ಕ್ರಾಸ್‌ನಲ್ಲಿ ಹೋಗುತ್ತಿದ್ದಾಗ ಪವನ್ ಲಾಂಗ್ ಹಿಡಿದು ಓಡಾಡುತ್ತಿದ್ದ. ಠಾಣೆಗೆ ಕರೆದೊಯ್ದು ವಿಚಾರಣೆಗೆ ಒಳಪಡಿಸಿದಾಗ ಜಯಂತ್‌ನನ್ನು ಕೊಲೆ ಮಾಡಿರುವುದು ಗೊತ್ತಾಯಿತು.
ತನ್ನ ಸ್ನೇಹಿತ ರಾಮು ಎಂಬಾತನ ಮೇಲೆ ಈ ಹಿಂದೆ ಜಯಂತ್ ಹಲ್ಲೆ ನಡೆಸಿದ್ದು, ಇದಕ್ಕೆ ಪ್ರತೀಕಾರವಾಗಿ ಆತನ ಕೊಲೆ ಮಾಡಿರುವುದಾಗಿ ಪವನ್ ಹೇಳಿಕೆ ನೀಡಿದ್ದಾನೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.