ಬಂಟ್ವಾಳ: ಪಡಿತರ ಅಕ್ಕಿ ಅಕ್ರಮ ಸಾಗಾಟದ ಲಾರಿ ಮತ್ತು ಟೆಂಪೋವನ್ನು ಬಂಟ್ವಾಳ ಡಿವೈಎಸ್‌ಪಿ ಅರುಣ್ ಕುಮಾರ್
ಅವರ ನೇತೃತ್ವದ ಪೊಲೀಸರು ನ. 24ರಂದು ವಶಕ್ಕೆ ಪಡೆದಿದ್ದಾರೆ.
ವಶಪಡಿಸಿಕೊಂಡ ತಲಾ 50 ಕೆ.ಜಿ. ತೂಕದ 200 ಗೋಣಿ ಚೀಲಗಳಲ್ಲಿದ್ದ 10 ಸಾವಿರ ಕೆ.ಜಿ. ಅಕ್ಕಿಯ ಮೌಲ್ಯವನ್ನು 2.60 ಲ.ರೂ. ಎಂದು ಅಂದಾಜಿಸಲಾಗಿದೆ.ಅಕ್ಕಿಯನ್ನು ಒಂದು ವಾಹನದಿಂದ ಇನ್ನೊಂದು ವಾಹನಕ್ಕೆ ಸ್ಥಳಾಂತರ ಮಾಡುತ್ತಿದ್ದ ಸಂದರ್ಭ ಖಚಿತ ಮಾಹಿತಿ ಪಡೆದ ಪೊಲೀಸರು ಕಾರ್ಯಾಚರಣೆ ನಡೆಸಿದ್ದರು. ಆದರೆ ಆರೋಪಿಗಳು ಪರಾರಿಯಾಗಿದ್ದಾರೆ.
ಕಂದಾಯ ಇಲಾಖೆಯ ಆಹಾರ ನಿರೀಕ್ಷಕ ಶ್ರೀನಿವಾಸ್ ಅಕ್ಕಿಯ ಸ್ಯಾಂಪಲ್ ತರಿಸಿಕೊಂಡು ಪರೀಕ್ಷೆ ನಡೆಸಿದ್ದು, ಅಕ್ಕಿಯು ಪಡಿತರ ಉಪಯೋಗಕ್ಕೆ ಬಳಸುವಂತಹದ್ದು ಎಂದು ಖಚಿತ ಪಡಿಸಿದ್ದಾರೆ. ಅದರಂತೆ ಲಾರಿ ಚಾಲಕ ಕೇರಳ ರಾಜ್ಯ ಕಾಸರಗೋಡು ನಿವಾಸಿ ವೇಲಾಯುಧನ್ ಮೇಲೆ ಪ್ರಕರಣ ದಾಖಲಿಸಿ ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ.
ಬಂಟ್ವಾಳ ತಹಶೀಲ್ದಾರ್ ಪುರಂದರ ಹೆಗ್ಡೆ ಅವರ ನಿರ್ದೇಶನದಂತೆ ಬಂಟ್ವಾಳ ನಗರ ಠಾಣೆಯಲ್ಲಿ ಎಸ್‌ಐ ಚಂದ್ರಶೇಖರ್ ಪ್ರಕರಣ ದಾಖಲಿಸಿದ್ದಾರೆ. ತನಿಖೆಯಲ್ಲಿ ಆಹಾರ ಶಿರಸ್ತೇದಾರ್ ವಾಸು ಶೆಟ್ಟಿ ಸಹಕರಿಸಿದ್ದರು.