ಬೆಂಗಳೂರು: ಕೋವಿಡ್ 19 ಹಿನ್ನೆಲೆಯಲ್ಲಿ ಜಾರಿಯಲ್ಲಿರುವ ಲಾಕ್‌ಡೌನ್ ಎ. 14ರ ಬಳಿಕವೂ ರಾಜ್ಯದಲ್ಲಿ ಮುಂದುವರಿಯಬೇಕೇ ಬೇಡವೇ ಎಂಬ ಬಗ್ಗೆ ಸರಕಾರದ ಮಟ್ಟದಲ್ಲಿ ಚರ್ಚೆಗಳು ನಡೆಯುತ್ತಿವೆ.
ಸಿಎಂ ಯಡಿಯೂರಪ್ಪ ಈ ಕುರಿತು ಸಚಿವ ಸಂಪುಟದ ಹಿರಿಯ ಸಚಿವರು ಮತ್ತು ಹಿರಿಯ ಅಧಿಕಾರಿಗಳ ಜತೆ ಸಮಾಲೋಚನೆ ನಡೆಸಿದ್ದಾರೆ.
ಕೇಂದ್ರ ಸರಕಾರವು ಎ.14ರ ಅನಂತರ ಲಾಕ್‌ಡೌನ್ ಮುಂದುವರಿಸುವ ವಿಚಾರ ವಾಗಿ ರಾಜ್ಯ ಸರಕಾರಗಳಿಗೆ ಅಧಿಕಾರ ನೀಡುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಯಾವ ಕ್ರಮ ಕೈಗೊಳ್ಳಬಹುದು ಎಂಬ ಬಗ್ಗೆ ಮಾಹಿತಿ ಸಂಗ್ರಹಿಸಲಾಗುತ್ತಿದೆ.
ಪರಿಸ್ಥಿತಿ ಆಧರಿಸಿ ಹಾಟ್‌ಸ್ಪಾಟ್ ಮತ್ತು ಬಫರ್ ಝೋನ್ ಪ್ರದೇಶ ವ್ಯಾಪ್ತಿಗೆ ಮಾತ್ರ ಲಾಕ್‌ಡೌನ್ ಸೀಮಿತಗೊಳಿಸಿ ಉಳಿದಂತೆ ರಾಜ್ಯಾದ್ಯಂತ ಸಾಮಾಜಿಕ ಅಂತರ ಕಾಯ್ದುಕೊಂಡು ಸಡಿಲಗೊಳಿಸಬಹುದೇ ಎಂಬ ಬಗ್ಗೆ ಅಭಿಪ್ರಾಯ ನೀಡುವಂತೆ ಸಿಎಂ ಅವರು ಆರೋಗ್ಯ ತಜ್ಞರನ್ನು ಕೇಳಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಮತ್ತೂಂದು ಮೂಲದ ಪ್ರಕಾರ, ಎಸಿ ಹೋಟೆಲ್ ರೆಸ್ಟೋರೆಂಟ್, ಚಿತ್ರಮಂದಿರ, ಮಾಲ್ ಸಹಿತ ಜನಜಂಗುಳಿ ಸೇರುವ ಜಾಗಗಳನ್ನು ಹೊರತುಪಡಿಸಿ ಇತರ ವಹಿವಾಟಿಗೆ ಅನುಮತಿ ಕೊಡುವುದರ ಬಗ್ಗೆಯೂ ಚಿಂತನೆ ನಡೆದಿದೆ.
ಹಣ್ಣು -ತರಕಾರಿ ಸಾಗಾಟ ಮತ್ತು ಮಾರಾಟ, ಕೃಷಿ ಚಟುವಟಿಕೆಗೆ ಅಗತ್ಯ ಪರಿಕರಗಳ ಮಾರಾಟ, ಕೋಳಿ, ಮೀನು,ಕುರಿ, ಮೇಕೆ, ಬೇಕರಿ ಪದಾರ್ಥಗಳ ಮಾರಾಟಕ್ಕೆ ಈಗಾಗಲೇ ವಿನಾಯಿತಿ ನೀಡಲಾಗಿದೆ. ಅಗತ್ಯ ವಸ್ತುಗಳ ಅಡಿ ಯಲ್ಲಿ ಮತ್ತಷ್ಟು ವಸ್ತುಗಳ ಮಾರಾಟಕ್ಕೆ ವಿನಾಯಿತಿ ನೀಡುವ ಸಾಧ್ಯತೆ ಇದೆ.
ಪ್ರಧಾನಿ ಮೋದಿ ಈ ವಾರ ಮತ್ತೂಮ್ಮೆ ಸಿಎಂಗಳ ಜತೆ ವಿಡಿಯೋ ಸಂವಾದ ನಡೆಸುವ ಸಾಧ್ಯತೆಯಿದ್ದು, ಆಗ ಲಾಕ್‌ಡೌನ್ ನಿರ್ಧಾರಕ್ಕೆ ಬರುವ ಸಾಧ್ಯತೆ ಇದೆ.