ವಾಷಿಂಗ್ಟನ್: ಇಲಿಗಳೂ ಕನ್ನಡಕ ಧರಿಸಿ ಓಡಾಡುವ ಸಮಯ ಬಂದಿದೆ! ಅಚ್ಚರಿ ಪಡಬೇಕಾಗಿಲ್ಲ. ಇಲಿಗಳ ಮೆದುಳಿನ ಚಟುವಟಿಕೆಗಳನ್ನು ಅರಿತುಕೊಳ್ಳುವುದಕ್ಕಾಗಿ ವಿಜ್ಞಾನಿಗಳು ಅವುಗಳಿಗೆಂದೇ ಪುಟ್ಟದಾದ ವರ್ಚುವಲ್ ರಿಯಾಲಿಟಿ ಕನ್ನಡಕವನ್ನು ಅಭಿವೃದ್ಧಿಪಡಿಸಿದ್ದಾರೆ.
ಈ ಕನ್ನಡಕ ಧರಿಸಿಕೊಂಡು ಇಲಿಗಳು ಓಡಾಡುತ್ತಿದ್ದರೆ, ಕಣ್ಣಿಗೆ ಕಾಣುವ ವರ್ಚುವಲ್ ಜಗತ್ತು, ವೈವಿಧ್ಯಮಯ ಸನ್ನಿವೇಶಗಳನ್ನು ಅವುಗಳ ಮೆದುಳು ಹೇಗೆ ಗ್ರಹಿಸುತ್ತದೆ ಎನ್ನುವುದನ್ನು ಅಧ್ಯಯನ ಮಾಡುವುದೇ ಇದರ ಉದ್ದೇಶ. ಇದು ಮೆದುಳಿನ ಕಾರ್ಯನಿರ್ವಹಣೆಯ ಅಧ್ಯಯನದಲ್ಲಿ ದೊಡ್ಡ ಮೈಲುಗಲ್ಲನ್ನು ಸಾಧಿಸಲು ನೆರವಾಗಲಿದೆ ಎನ್ನುವುದು ವಿಜ್ಞಾನಿಗಳ ಅಭಿಮತ.
ಅಮೆರಿಕದ ನಾರ್ತ್‌ವೆಸ್ಟರ್ನ್ ವಿ.ವಿ.ಯ ಸಂಶೋಧಕರಾದ ಡೇನಿಯಲ್ ಡೋಮ್‌ಬೆಕ್ ನೇತೃತ್ವದ ತಂಡವು 20 ವರ್ಷಗಳಿಂದ ರುಡಿಮೆಂಟರಿ ವರ್ಚುವಲ್ ರಿಯಾಲಿಟಿಯನ್ನು ಬಳಸಿಕೊಂಡು ಇಲಿಗಳ ಮೆದುಳಿನ ಕಾರ್ಯನಿರ್ವಹಣೆ ಬಗ್ಗೆ ಅಧ್ಯಯನ ನಡೆಸುತ್ತಿದೆ. ಆದರೆ ಇಲಿಗಳ ಮೆದುಳಿನ ರಚನೆಯನ್ನು ಅವಲೋಕಿಸಲು ಬಳಸುವ ಯಂತ್ರಗಳು ದೊಡ್ಡ
ಗಾತ್ರದಾದ ಕಾರಣ ಅವುಗಳನ್ನು ಇಲಿಗಳಿಗೆ ಅಳವಡಿಸಲು ಸಾಧ್ಯವಾಗುತ್ತಿರಲಿಲ್ಲ. ಈಗ ಅಭಿವೃದ್ಧಿಪಡಿಸಿರುವ ಕನ್ನಡಕಗಳು ಈ ಸಮಸ್ಯೆಗೆ ಮುಕ್ತಿ ಹಾಡಿವೆ. ಇದನ್ನು ಇಲಿಗಳಿಗೆ ಅಳವಡಿಸಿದಾಗ ಅವುಗಳ ಕಣ್ಣ ಮುಂದೆ ವರ್ಚುವಲ್ ಜಗತ್ತು ತೆರೆದುಕೊಳ್ಳುತ್ತದೆ. ತನ್ನೆದುರು ಕಾಣುತ್ತಿರುವುದು ಭ್ರಮಾಲೋಕ ಎಂಬ ಅರಿವಿಲ್ಲದೆ ಇಲಿಗಳು ಸಹಜವಾಗಿ ವರ್ತಿಸುತ್ತವೆ. ಆಗ ಅವುಗಳ ಮೆದುಳಿನ ಚಟುವಟಿಕೆಯನ್ನು ಸೂಕ್ಷ್ಮವಾಗಿ ಮತ್ತು ಆಳವಾಗಿ ಅರಿಯಲು ಸಾಧ್ಯವಾಗುತ್ತದೆ ಎನ್ನುತ್ತಾರೆ ಸಂಶೋಧಕರು.ರಿಯಾಲಿಟಿ ಕನ್ನಡಕ