ಪಣಜಿ: ವಿಕಲಚೇತನರಿಗಾಗಿ ಮುಂದಿನ ವರ್ಷ ಜನವರಿ 6 ರಿಂದ 8 ರವರೆಗೆ ಮೂರು ದಿನಗಳ ‘ದಿ ಪರ್ಪಲ್ ಫೆಸ್ಟ್’ ನಲ್ಲಿ ಸುಮಾರು ಐದು ಸಾವಿರ ಜನರು ಭಾಗವಹಿಸಲಿದ್ದಾರೆ. ಈ ಉತ್ಸವದಲ್ಲಿ ಭಾಗವಹಿಸಲು ಪ್ರವೇಶ ಪ್ರಕ್ರಿಯೆ ಆರಂಭವಾಗಿದ್ದು, ಈ ಪ್ರಕ್ರಿಯೆ ಆನ್‍ಲೈನ್‍ನಲ್ಲಿ ನಡೆಯಲಿದೆ. ಇದರಿಂದಾಗಿ ವಿಕಲಚೇತನರು ಸೇರಿದಂತೆ ಇತರರು ಈ ಉತ್ಸವದಲ್ಲಿ ಪಾಲ್ಗೊಳ್ಳಲು ಸಾಧ್ಯವಾಗಲಿದೆ ಎಂದು ಸಮಾಜ ಕಲ್ಯಾಣ ಸಚಿವ ಸುಭಾಷ್ ಫಳದೇಸಾಯಿ ಪಣಜಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಪರ್ವರಿಯ ಸಚಿವಾಲಯದಲ್ಲಿ ನಡೆದ ಸುದ್ಧಿಗೋಷ್ಠಿಯಲ್ಲಿ ರಾಜ್ಯ ವಿಕಲಚೇತನ ಆಯುಕ್ತ ಗುರುಪ್ರಸಾದ್ ಪಾವಸ್ಕರ್, ರಾಜ್ಯ ವಿಕಲಚೇತನರ ಆಯುಕ್ತರ ಕಚೇರಿ ಕಾರ್ಯದರ್ಶಿ ತಾಹಾ ಹಾಜಿಕ್ ಮತ್ತು ಸಮಾಜ ಕಲ್ಯಾಣ ನಿರ್ದೇಶನಾಲಯದ ನಿರ್ದೇಶಕಿ ಸಂಧ್ಯಾ ಕಾಮತ್ ಉಪಸ್ಥಿತರಿದ್ದರು.
ಗೋವಾದ ಪ್ರತಿನಿಧಿಗಳು, ಪ್ರದರ್ಶಕರು, ದೇಶಾದ್ಯಂತದ ಮಾಧ್ಯಮಗಳು ಮತ್ತು ವಿಕಲಚೇತನ ವಿದ್ಯಾರ್ಥಿಗಳಿಗೆ ಕಾರ್ಯಕ್ರಮವು ಉಚಿತವಾಗಿದೆ ಎಂದು ಫಳದೇಸಾಯಿ ಹೇಳಿದರು. ದೇಶಾದ್ಯಂತ ಇತರ ಪ್ರತಿನಿಧಿಗಳು ಮತ್ತು ಪ್ರದರ್ಶಕರಿಗೆ ಪ್ರವೇಶ ಶುಲ್ಕ ವಿಧಿಸಲಾಗುತ್ತದೆ.
ಅಂಗವಿಕಲರ ಸೇವಾ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ಸರ್ಕಾರೇತರ ಸಂಸ್ಥೆಗಳು ಅಥವಾ ಇತರ ಸಂಸ್ಥೆಗಳಿಗೆ ಈ ಶುಲ್ಕದಲ್ಲಿ ಶೇಕಡಾ 50 ರಷ್ಟು ರಿಯಾಯಿತಿ ನೀಡಲಾಗುತ್ತದೆ. ಅದಕ್ಕಾಗಿ ಹತ್ತಕ್ಕೂ ಹೆಚ್ಚು ಸದಸ್ಯರು ಭಾಗವಹಿಸುವುದು ಕಡ್ಡಾಯ. ‘ಪರ್ಪಲ್ ಫೆಸ್ಟ್’ ನ ನೋಂದಣಿ ಲಿಂಕ್ ಅನ್ನು ರಾಜ್ಯ ಅಂಗವಿಕಲರ ಆಯೋಗದ ಸಾಮಾಜಿಕ ಮಾಧ್ಯಮ ವೆಬ್‍ಸೈಟ್ ಮತ್ತು ಆಯೋಗದ ವೆಬ್‍ಸೈಟ್‍ನಲ್ಲಿ ಪ್ರಸಾರ ಮಾಡಲಾಗುತ್ತದೆ ಎಂದು ಶಾಸಕ ಫಳದೇಸಾಯಿ ಮಾಹಿತಿ ನೀಡಿದರು.