ಹುಬ್ಬಳ್ಳಿ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ನಗರಕ್ಕೆ ಆಗಮಿಸಿದ ಹಿನ್ನೆಲೆಯಲ್ಲಿ ಆದರ್ಶ ನಗರದ ನಿವಾಸದಲ್ಲಿ ಸಾಕಷ್ಟು ಜನರು ಮನವಿ ಸಲ್ಲಿಸಲು ಸೇರಿದ್ದರು. ಈ ಸಂದರ್ಭದಲ್ಲಿ ನೂಕುನುಗ್ಗಲು ಉಂಟಾಗಿ ಕೋವಿಡ್ ನಿಯಮಗಳು ಪಾಲನೆಯಾಗಲಿಲ್ಲ. ಸಿಎಂ ಬಸವರಾಜ ಬೊಮ್ಮಾಯಿ ಅವರಿಗೆ ಮನವಿ ಸಲ್ಲಿಸಲು ಬೆಳಗ್ಗೆಯಿಂದಲೇ ಜನರು ಅವರ ನಿವಾಸಗಳ ಮುಂದೆ ಸೇರಿದ್ದರು.
ಆರಂಭದಲ್ಲಿ ಕೆಲವರನ್ನು ಮನೆಯೊಳಗೆ ಕರೆದು ಮನವಿ ಸ್ವೀಕರಿಸಿದರು. ಆದರೆ ಬಹುತೇಕ ಜನರು ಹೊರಗೆ ಕಾಯುತ್ತಿದ್ದರು. ಈ ಸಂದರ್ಭದಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ, ಮಾಸ್ಕ್ ಕಡ್ಡಾಯ ಧರಿಸಬೇಕು ಎಂದು ಪೊಲೀಸರು ತಿಳಿವಳಿಕೆ ನೀಡಿದರು.
ಆದರೆ ಮುಖ್ಯಮಂತ್ರಿ ಬೊಮ್ಮಾಯಿ ಹೊರಬರುತ್ತಿದ್ದಂತೆ ಸಾರ್ವಜನಿಕರಿಗಾಗಿ ಮಾಡಿದ್ದ ಗ್ಯಾಲರಿ ಸೇರಿದಂತೆ ಅವರ ಸುತ್ತಲೂ ಜನರು ಮುಗಿಬಿದ್ದರು. ಈ ಸಂದರ್ಭದಲ್ಲಿ ಒಂದಿಷ್ಟು ನೂಕುನುಗ್ಗಲು ಉಂಟಾಯಿತು. ಇದರಿಂದ ಬೊಮ್ಮಾಯಿ ಸಿಡಿಮಿಡಿಗೊಳ್ಳುತ್ತಿದ್ದಂತೆ ಪೊಲೀಸರು ಜನರನ್ನು ದೂರ ಸರಿಸಿದರು.
ವಿಧಾನ ಪರಿಷತ್ತು ಚುನಾವಣೆ ಹಿನ್ನೆಲೆಯಲ್ಲಿ ಬೆಳಗಾವಿಗೆ ಹೊರಡಬೇಕಾದ ಹಿನ್ನೆಲೆಯಲ್ಲಿ ಗಡಿಬಿಡಿಯಲ್ಲಿ ಕೆಲವರ ಮನವಿ ಸ್ವೀಕರಿಸಲಿಲ್ಲ. ಈ ಸಂದರ್ಭದಲ್ಲಿ ಕೊಂಚ ನೂಕುನುಗ್ಗಲು ಉಂಟಾಯಿತು. ಕೆಲವರು ಕಾರು ಬಳಿ ಹೋಗಿ ಮನವಿ ನೀಡಲು ಮುಂದಾದರು. ಈ ಸಂದರ್ಭದಲ್ಲಂತೂ ಸಾಮಾಜಿಕ ಅಂತರ ಪಾಲನೆಯಾಗಲಿಲ್ಲ.
ಆದರೆ ಕೊನೆಗೂ ಕೆಲವರು ಮನವಿ ನೀಡಲು ಸಾಧ್ಯವಾಗಲಿಲ್ಲ. ಇದರಿಂದ ಬೆಳಗ್ಗಿನಿಂದ ಕಾಯುತ್ತಿದ್ದ ಜನರಿಗೆ ನಿರಾಸೆಯಾಯಿತು. ತಮ್ಮ ಮನವಿಗೆ ಯಾವುದೇ ಸ್ಪಂದನೆ ದೊರೆಯಲಿಲ್ಲ ಎನ್ನುವ ಕಾರಣಕ್ಕೆ ಕೆಲವರು ಮುಖ್ಯಮಂತ್ರಿಗಳ ಆಪ್ತ ಸಹಾಯಕರನ್ನು ಭೇಟಿಯಾಗಿ ಮನವಿ ಸಲ್ಲಿಸಿದರು.