ಕೆ.ಆರ್.ನಗರ: ಪ್ರೌಢಶಾಲೆ ಹಾಗೂ ಪದವಿ ಪೂರ್ವ ಕಾಲೇಜಿನ ತರಗತಿಗಳು ಒಂದೇ ಕಟ್ಟಡದಲ್ಲಿ ನಡೆಯುತ್ತಿದ್ದು, ಕೊಠಡಿಗಳ ಕೊರತೆಯಿಂದ ಈವರೆಗೆ ಪಿಯುಸಿ ವಿದ್ಯಾರ್ಥಿನಿಯರ ತರಗತಿಗಳನ್ನು ಬೆಳಗ್ಗೆ 8ರಿಂದ 11.30ವರೆಗೆ ಮಾತ್ರ ನಡೆಸಲಾಗುತ್ತಿತ್ತು. ಇದೀಗ ಕೊಠಡಿಗಳನ್ನು ನಿರ್ಮಿಸಿದ್ದು, ಇನ್ನು ಮುಂದೆ ಪೂರ್ಣಾವಧಿ ತರಗತಿಗಳು ನಡೆಯಲಿವೆ ಎಂದು ಶಾಸಕ ಸಾ.ರಾ.ಮಹೇಶ್ ಹೇಳಿದರು.
ಪಟ್ಟಣದ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನ ನೂತನ ಕಟ್ಟಡವನ್ನು ಉದ್ಘಾಟಿಸಿ ಮಾತನಾಡಿದ ಅವರು, ಇನ್ನು ಮುಂದೆ ಪದವಿ ಪೂರ್ವ ಶಿಕ್ಷಣಕ್ಕೆ ಬೇರೆ ಕಟ್ಟಡವಿರುವುದರಿಂದ ಬೆಳಗ್ಗೆ 9.30ರಿಂದ ಮಧ್ಯಾಹ್ನ 3.30ರವರೆಗೆ ಕಾಲೇಜಿನ ತರಗತಿಗಳನ್ನು ನಡೆಸಬೇಕು. ಹಳೆಯ ಕಟ್ಟಡದಲ್ಲಿ ಪ್ರೌಢಶಾಲಾ ತರಗತಿಗಳನ್ನು ಮಾತ್ರ ನಡೆಸಬೇಕು ಎಂದು ಸೂಚಿಸಿದರು.
ಕೋಟಿ ವೆಚ್ಚದ ಕೊಠಡಿ: ಒಂದು ಕೋಟಿ ರೂ. ವೆಚ್ಚದಲ್ಲಿ ನೆಲ ಅಂತಸ್ತಿನಲ್ಲಿ 8 ಕೊಠಡಿಗಳು, ಮೊದಲ ಮೇಲಂತಸ್ತಿನಲ್ಲಿ 6 ಕೊಠಡಿಗಳು ಮತ್ತು ಶೌಚಾಲಯ ನಿರ್ಮಿಸಲಾಗಿದ್ದು, ಅವಶ್ಯಕತೆ ಇದ್ದರೆ ಹೆಚ್ಚುವರಿ ಕೊಠಡಿಗಳ ನಿರ್ಮಾಣ ಕಾಮಗಾರಿಗೆ ಅನುದಾನ ನೀಡಲಾಗುವುದು. ಉಪನ್ಯಾಸಕರು ಗುಣಮಟ್ಟದ ಶಿಕ್ಷಣ ನೀಡಬೇಕು ಎಂದು ಸಲಹೆ ನೀಡಿದರು.
ಮತ್ತಷ್ಟು ಕೋರ್ಸ್ ಆರಂಭ: ವಿದ್ಯಾರ್ಥಿಗಳು ಪದವಿ ಪೂರ್ವ, ಪದವಿ ಮತ್ತು ಸ್ನಾತಕೋತ್ತರ ಪದವಿ ಶಿಕ್ಷಣ ಪಡೆಯಲು ಬೇರೆ ಕಾಲೇಜುಗಳಿಗೆ ದಾಖಲಾಗದೆ ತಾಲೂಕಿನವರಿಗೋಸ್ಕರ ಮಂಜೂರು ಮಾಡಿಸಿರುವ ಪಟ್ಟಣದ ಕಾಲೇಜುಗಳಲ್ಲಿಯೇ ವ್ಯಾಸಂಗ ಮಾಡಬೇಕು ಎಂದು ಮನವಿ ಮಾಡಿದ ಸಾ.ರಾ.ಮಹೇಶ್, ಮುಂದಿನ ದಿನಗಳಲ್ಲಿ ಮತ್ತಷ್ಟು ಕೋರ್ಸ್‌ಗಳನ್ನು ಆರಂಭಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
ಅಧ್ಯಯನ, ಸಂಸ್ಕಾರ: ವಿದ್ಯಾರ್ಥಿಗಳು ಜ್ಯಾತ್ಯತೀತ ಮನೋಭಾವ ಬೆಳೆಸಿಕೊಳ್ಳುವುದರ ಜತೆಗೆ ಸ್ನೇಹಿತರು ಸೇರಿದಂತೆ ಯಾರ ನಂಬಿಕೆಗೂ ದ್ರೋಹ ಮಾಡದಂತೆ ಎಚ್ಚರಿಕೆಯಿಂದ ನಡೆದುಕೊಳ್ಳಬೇಕು. ಕಾಲೇಜು ವ್ಯಾಸಂಗದ ದಿನಗಳಲ್ಲಿ ಅಧ್ಯಯನಕ್ಕೆ ಹೆಚ್ಚಿನ ಆದ್ಯತೆಯನ್ನು ನೀಡುವುದರ ಜೊತೆಗೆ ಉತ್ತಮ ಸಂಸ್ಕಾರ ಕಲಿಯಬೇಕು. ಇದರಿಂದ ದೇಶದ ಸಂಸ್ಕೃತಿ ಉಳಿದು ಅಭಿವೃದ್ಧಿª ಹೊಂದಲು ಸಹಕಾರಿಯಾಗಲಿದೆ ಎಂದು ಕಿವಿಮಾತು ಹೇಳಿದರು.
ಜೇಟ್ಲಿ ನಿಧನಕ್ಕೆ ಸಂತಾಪ: ಇದೇ ಸಂದರ್ಭದಲ್ಲಿ ಕೇಂದ್ರದ ಮಾಜಿ ಸಚಿವ ಅರುಣ್‌ಜೇಟ್ಲಿ ಅವರ ನಿಧನಕ್ಕೆ ಸಂತಾಪ ಸೂಚಿಸಿ ಕಾರ್ಯಕ್ರಮವನ್ನು ಸರಳವಾಗಿ ಆಚರಿಸಲಾಯಿತು. ಈ ವೇಳೆ ಕಾಲೇಜು ಪ್ರಾಂಶುಪಾಲ ಡಿ.ಜಿ.ಗೋಪಾಲ್, ಸಿಡಿಸಿ ಸದಸ್ಯರಾದ ಭಾನುಮತಿ ಹರೀಶ್, ಶ್ರೀನಿವಾಸ್, ಕೆ.ಸಿ.ಲೋಕೇಶ್, ಕೃಷ್ಣಶೆಟ್ಟಿ, ಎಂ.ಕೆ.ಮಹದೇವ್, ಪುರಸಭೆ ಸದಸ್ಯರಾದ ಸಂತೋಷ್‌ಗೌಡ, ಸಿ.ಉಮೇಶ್, ಮಾಜಿ ಸದಸ್ಯರಾದ ಜಯಕುಮಾರ್, ಸೈಯದ್ ಅಸ್ಲಾಂ, ಕೆ.ಬಿ.ಸುಬ್ರಹ್ಮಣ್ಯ, ತಾಪಂ ಮಾಜಿ ಸದಸ್ಯ ನಾಗಣ್ಣ, ಜಿಪಂ ಎಇಇ ಮಂಜುನಾಥ್, ಮುಖಂಡರಾದ ಎಚ್.ಆರ್.ಮಧುಚಂದ್ರ, ಕಾಂತರಾಜು, ಎಂ.ಎಸ್.ಕಿಶೋರ್, ಜಗದೀಶ್, ಕೇಬಲ್‌ವುಂಜು, ಕೆ.ಎಸ್.ಮಲ್ಲಪ್ಪ, ಸಿ.ಜೆ.ಆನಂದ್, ಎಚ್.ಪಿ.ಹರೀಶ್, ಕೆ.ಎಲ್.ಆದರ್ಶ ಮತ್ತಿತರರು ಹಾಜರಿದ್ದರು.