Advertisement

ಪ್ರತಿಭಟನೆಗಳು ಎಸ್ಐಟಿ ತನಿಖೆಯ ಮೇಲೆ ಯಾವುದೇ ಪ್ರಭಾವ ಬೀರುವುದಿಲ್ಲ: ಬಸವರಾಜ ಬೊಮ್ಮಾಯಿ

03:28 PM Mar 28, 2021 | Team Udayavani |

ಬೆಂಗಳೂರು: ರಮೇಶ ಜಾರಕಿಹೊಳಿ ಸಿಡಿ ವಿಚಾರಕ್ಕೆ ಸಂಬಂಧಿಸಿದಂತೆ ವಿವಿಧೆಡೆ ನಡೆಯುತ್ತಿರುವ ಪ್ರತಿಭಟನೆಗಳು ಎಸ್ಐಟಿ ತನಿಖೆಯ ಮೇಲೆ ಯಾವುದೇ ರೀತಿಯ ಪ್ರಭಾವ ಬೀರುವುದಿಲ್ಲ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದರು.

Advertisement

ಭಾನುವಾರ ಬೆಂಗಳೂರಿನಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ಪ್ರತಿಭಟನೆಗಳು ಅಲ್ಲಲ್ಲಿ‌ ನಡೆಯುತ್ತವೆ. ಅವುಗಳನ್ನು ಸ್ಥಳೀಯ ಪೊಲೀಸರು ನೋಡಿಕೊಳ್ಳುತ್ತಾರೆ. ನಮ್ಮ ತನಿಖೆ ಕ್ರಮಬದ್ಧವಾಗಿ, ವೈಜ್ಞಾನಿಕವಾಗಿ ನಡೆಯಲಿದೆ. ಎಸ್ಐಟಿಗೆ ನಾವು ಫ್ರೀ ಹ್ಯಾಂಡ್ ಕೊಟ್ಟಿದ್ದೇವೆ. ಸತ್ಯಾಸತ್ಯತೆ ತನಿಖೆಯಿಂದ ಹೊರ ಬರುತ್ತದೆ. ಹೊರಗೆ ನಡೆಯುತ್ತಿರುವ ಪ್ರತಿಭಟನೆಗಳು ಎಸ್ಐಟಿ ಮೇಲೆ ಪ್ರಭಾವ ಬೀರುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ಇದನ್ನೂ ಓದಿ:ಆಕೆಯೇನು ವಿಜಯ ಮಲ್ಯನೋ ಇಲ್ಲವೇ ನೀರವ್ ಮೋದಿಯೋ? ಪೊಲೀಸರ ವೈಫಲ್ಯಕ್ಕೆ ಸಿದ್ದರಾಮಯ್ಯ ಕಿಡಿ

ಮಾಜಿ ಸಿಎಂ ಸಿದ್ದರಾಮಯ್ಯಯವರಿಗೆ ನೆನಪಿನ ಶಕ್ತಿ ಕಡಿಮೆ ಇದೆ. ಅವರು ಸಿಎಂ ಆಗಿದ್ದಾಗ ಅಂದಿನ ಸಚಿವ ಎಚ್ ವೈ ಮೇಟಿ ಸಿಡಿ ಪ್ರಕರಣದಲ್ಲಿ ಏನು ಮಾಡಿದರು ಎನ್ನವುದು ಎಲ್ಲರಿಗೂ ಗೊತ್ತಿದೆ. ಪ್ರಕರಣವನ್ಮು ಸಿಐಡಿಗೆ ಕೊಟ್ಟು ಮೇಟಿ ಪ್ರಕರಣ ಮುಚ್ಚಿ ಹಾಕಿದರು. ಯುವತಿ ದೂರು ನೀಡಿದರೂ ಪ್ರಕರಣ ದಾಖಲಿಸಲಿಲ್ಲ.   ಒಬ್ಬ ಅಧಿಕಾರಿಯೇ ವಿಚಾರಣೆ ಮಾಡಿ ಮೇಟಿ ಅವರಿಗೆ ಕ್ಲೀನ್ ಚಿಟ್ ನೀಡಿದರು. ಇದೇ ವಿಷಯವನ್ನು ಅಧಿವೇಶನದಲ್ಲಿ ಹೇಳಿದ್ದೇನೆ ಎಂದರು.

ಇದನ್ನೂ ಓದಿ: ಮಂದಿರ ಕಟ್ಟುವ ವರ್ಷದಲ್ಲೇ ಹೆಣ್ಣಿನ ಮೇಲೆ ದೌರ್ಜನ್ಯ; ರಾಮರಾಜ್ಯವೋ, ರಾವಣರಾಜ್ಯವೋ?: ಉಗ್ರಪ್ಪ

Advertisement

ಸಿಡಿ ಯುವತಿಗೆ ರಕ್ಷಣೆ ನೀಡಲು ನಾವು ಈಗಲೂ ಬದ್ಧ. ಈಗಾಗಲೇ ಯುವತಿಗೆ ಐದು ಬಾರಿ ನೋಟೀಸ್ ನೀಡಿದ್ದೇವೆ. ಯುವತಿ ಇರುವ ಕಡೆಗೇ ಹೋಗಿ ರಕ್ಷಣೆ ನೀಡುತ್ತೇವೆ. ಅವರ ಕುಟುಂಬ ಸದಸ್ಯರಿಗೆ ರಕ್ಷಣೆ ನೀಡಲಾಗಿದೆ ಎಂದು ಅವರು ತಿಳಿಸಿದರು.

ಯಾರೇ ಆಗಲಿ ಪೊಲೀಸರ ನೈತಿಕತೆಯನ್ನು ಕುಗ್ಗಿಸುವ ಕೆಲಸ ಮಾಡಬಾರದು. ಎಸ್ಐಟಿ ತಂಡ ಕ್ರಮಬದ್ಧವಾಗಿ ಸರಿ ಹಾದಿಯಲ್ಲಿ ತನಿಖೆ ನಡೆಸುತ್ತಿದ್ದಾರೆ. ತನಿಖೆಯಿಂದ ಸತ್ಯ ಹೊರ ಬರಲಿದೆ ಎಂದು ಬಸವರಾಜ ಬೊಮ್ಮಾಯಿ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next