Advertisement

ಧರಣಿ 16ನೇ ದಿನಕ್ಕೆ ಕಾಲಿಟ್ಟರೂ ಸ್ಪಂದನೆಯಿಲ್ಲ

09:20 PM Feb 10, 2020 | Lakshmi GovindaRaj |

ಪಿರಿಯಾಪಟ್ಟಣ: ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ತಾಲೂಕಿನ ಮುಮ್ಮಡಿ ಕಾವಲು ಗ್ರಾಮಸ್ಥರು ಪಟ್ಟಣದಲ್ಲಿ ನಡೆಸುತ್ತಿರುವ ಧರಣಿ ಸೋಮವಾರ 16ನೇ ದಿನಕ್ಕೆ ಕಾಲಿಟ್ಟಿದೆ. ಇದೀಗ ತಾಲೂಕು ಆಡಳಿತ ಭವನದ ಆವರಣದಲ್ಲಿ ಧರಣಿಗೆ ಅವಕಾಶ ನೀಡಲು ನಿರಾಕರಿಸಿದ್ದರಿಂದ ಆವರಣದ ಹೊರಭಾಗದ ಗೇಟ್‌ ಬಳಿ ಪ್ರತಿಭಟನೆ ನಡೆಸಿದರು. ಈ ಹೋರಾಟಕ್ಕೆ ರಾಜ್ಯ ರೈತ ಸಂಘ ಹಾಗೂ ಸ್ವರಾಜ್‌ ಇಂಡಿಯಾ ಪಕ್ಷ ಬೆಂಬಲ ಸೂಚಿಸಿದೆ.

Advertisement

ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ಮಾತನಾಡಿ, ಪೋಡಿಮುಕ್ತ ಗ್ರಾಮ ಹಾಗೂ ಅಗತ್ಯ ಮೂಲಭೂತ ಸೌಲಭ್ಯಕ್ಕಾಗಿ ಆಗ್ರಹಿಸಿ ಶಾಂತಿಯುತವಾಗಿ ನಡೆಯುತ್ತಿರುವ ಪ್ರತಿಭಟನೆಯನ್ನು ಹತ್ತಿಕ್ಕಲು ಅಧಿಕಾರಿಗಳು ದೌರ್ಜನ್ಯ ನಡೆಸುತ್ತಿರುವುದು ಖಂಡನೀಯ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕಳೆದ 16 ದಿನಗಳಿಂದ ಮುಮ್ಮಡಿ ಕಾವಲು ಗ್ರಾಮಸ್ಥರು ಹಾಗೂ ರೈತರು ಪಟ್ಟಣದ ತಾಲೂಕು ಆಡಳಿತ ಭವನದ ಮುಂಭಾಗ, ಮೂಲಭೂತ ಸೌಲಭ್ಯ ಹಾಗೂ ಪೋಡಿಮುಕ್ತ ಗ್ರಾಮಕ್ಕಾಗಿ ಒತ್ತಾಯಿಸಿ ಶಾಂತಿಯುತವಾಗಿ ನಡೆಸುತ್ತಿದ್ದರು. ಆದರೆ, ಇವರಿಗೆ ನ್ಯಾಯಾ ನೀಡಲು ಸಿದ್ಧವಿಲ್ಲದ ತಾಲೂಕು ಆಡಳಿತವು ಪ್ರತಿಭಟನಾಕಾರರನ್ನು ಕಚೇರಿ ಆವರಣದಿಂದ ಹೊರದಬ್ಬುವ ಮೂಲಕ ದೌರ್ಜನ್ಯ ಎಸಗಿದೆ. ಇದು ನಾಗರಿಕ ಸಮಾಜಕ್ಕೆ ಮಾಡುವ ಅವಮಾನ ಸಂಗತಿ.

ಬಡವರ, ರೈತರ, ನಿರ್ಗತಿಕರ ಪರ ಇರಬೇಕಾದ ಅಧಿಕಾರಿಗಳು ಇಂದು ಬಂಡವಾಳಶಾಹಿಗಳ ಗುಲಾಮರಾಗುತ್ತಿದ್ದಾರೆ ಎಂದು ಕಿಡಿಕಾರಿದರು. ಪ್ರತಿಭಟನೆ ನಡೆಸಲು ರೈತರಿಗೆ ಜಾಗ ನೀಡದೇ ಅವರನ್ನು ಮೋರಿ ಮತ್ತು ಚರಂಡಿಗಳ ಮೇಲೆ ಕೂರುವಂತೆ ಹೊರದಬ್ಬುತ್ತಿರುವುದು ಖಂಡನೀಯ. ಅಧಿಕಾರಿಗಳು ಇತ್ತೀಚಿನ ದಿನಗಳಲ್ಲಿ ಉಳ್ಳವರ ಮತ್ತು ಬಂಡವಾಳಶಾಹಿಗಳ ಪರನಿಂತು ಅವರ ಕಡತಗಳನ್ನು ವಿಧಾನಸೌಧದ ವರೆಗೂ ಕೊಂಡೊಯ್ಯುತ್ತಿರುವ ಅಧಿಕಾರಿಗಳು ಬಡವಪ ಪರ ನಿಲ್ಲುತ್ತಿಲ್ಲ. ಈ ಧೋರಣೆ ಬದಲಾಗಬೇಕಿದೆ ಎಂದು ಆಗ್ರಹಿಸಿದರು.

ಪ್ರತಿಭಟನೆ ನೇತೃತ್ವ ವಹಿಸಿರುವ ದಲಿತ ಮುಖಂಡ ದೊಡ್ಡಯ್ಯ ಮಾತನಾಡಿ, ಮುಮ್ಮಡಿ ಕಾವಲು ಗ್ರಾಮದಲ್ಲಿ ಜಮೀನು ಮತ್ತಿತರ ಸಮಸ್ಯೆಗಳು ಅನೇಕ ವರ್ಷದಿಂದ ಇತ್ಯರ್ಥವಾಗದೇ ನನೆಗುದ್ದಿಗೆ ಬಿದ್ದಿವೆ. ರೈತರು, ದಲಿತರು ಹಾಗೂ ಹಿಂದುಳಿದ ವರ್ಗದ ಜನರಿಗೆ ತೊಂದರೆ ಆಗುತ್ತಿದೆ. ತಾಲೂಕಿನ ಸಮೀಪವಿರುವ ಈ ಗ್ರಾಮವು ಮೂಲಭೂತ ಸೌಕರ್ಯಗಳಿಂದ ವಂಚಿತವಾಗಿದೆ.

Advertisement

ಹಲವು ಬಾರಿ ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳಿಗೆ ಅರ್ಜಿ ಸಲ್ಲಿಸಿದರೂ ಸಹ ಯಾವುದೇ ಪ್ರಯೋಜನವಾಗಿಲ್ಲ. ಸರ್ವೆ ಇಲಾಖೆ ಭ್ರಷ್ಟ ಅಧಿಕಾರಿಗಳಿಂದ ತುಂಬಿದ್ದು, ಕಳೆದ ಐದು ವರ್ಷದಿಂದ ಯಾವುದೇ ಭೂಮಿ ಸಮಸ್ಯೆಯನ್ನು ಬಗೆಹರಿಸಿಲ್ಲ, ಜಮೀನು ಪೋಡಿ ಮಾಡಿಲ್ಲ ಎಂದು ಕಿಡಿಕಾರಿದರು. ಉತ್ತನಹಳ್ಳಿ ವೆಂಕಟೇಶ್‌, ಜವರಯ್ಯ, ಸಣ್ಣಮ್ಮ ಎಂಬುವರ ಜಮೀನಿನ ಜಾಗವನ್ನು ಗುರುತಿಸಿ ಅವರಿಗೆ ಸೇರಿದ್ದಾಗಿದೆ ಎಂದು ಹುಣಸೂರು ಉಪವಿಭಾಗಾಧಿಕಾರಿ ಹೇಳಿದರೂ ಕಂದಾಯ ಇಲಾಖೆ ಅಧಿಕಾರಿಗಳು ಸಬೂಬು ಹೇಳಿ ಕಾಲ ಕಳೆಯುತ್ತಿದ್ದಾರೆ. ಕೂಡಲೇ ಗ್ರಾಮಸ್ಥರ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ದಲಿತ ಮುಖಂಡರಾದ ಉತ್ತೇನಹಳ್ಳಿ ವೆಂಕಟೇಶ್‌, ಸ್ವರಾಜ್‌ ಇಂಡಿಯಾ ಪಕ್ಷದ ಪ್ರಧಾನ ಕಾರ್ಯದರ್ಶಿ ಅಭಿರುಚಿ ಗಣೇಶ್‌, ಉಪಾಧ್ಯಕ್ಷ ಎಚ್‌.ಎನ್‌. ನಂಜುಂಡಸ್ವಾಮಿ, ಕಾರ್ಯಕಾರಣಿ ಸದಸ್ಯ ಜಿ.ಕರುಣಾಕರ್‌, ದಸಂಸ ಮುಖಂಡ ಆರ್‌.ಎಸ್‌.ದೊಡ್ಡಣ್ಣ, ಸಿ.ಎಸ್‌.ಜಗದೀಶ್‌, ಭೀಮ ಆರ್ಮಿ ತಾಲೂಕು ಅಧ್ಯಕ್ಷ ವಾಲೆ ಗಿರೀಶ್‌, ಗ್ರಾಮಸ್ಥರಾದ ರಾಮು, ಕಾಳಯ್ಯ, ಮಲ್ಲೇಶ್‌, ತಿಮ್ಮಯ್ಯ, ನಾರಾಯಣ, ಉತ್ತೇನಹಳ್ಳಿ ವೆಂಕಟೇಶ್‌, ಮಂಜು, ಜಯಣ್ಣ, ಶಿವಯ್ಯ, ಕುಮಾರ, ಗಿರಿಜಾ, ರೇಣುಕಾ, ಆನಂದ, ಕರಿಯಯ್ಯ, ಮುದಿರಯ್ಯ, ಕೃಷ್ಣಮೂರ್ತಿ, ನವೀನ, ದೇವರಾಜ್‌ ಮತ್ತಿತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next