Advertisement
ಎರಡು ಪ್ರಮುಖ ಪಕ್ಷಗಳಾದ ಬಿಜೆಪಿ ಹಾಗೂ ಕಾಂಗ್ರೆಸ್‌ನ ಅಭ್ಯರ್ಥಿ ಗಳು ಈವರೆಗೆ ಎರಡು ಬಾರಿ ಕ್ಷೇತ್ರದ ಕೆಲವು ಪ್ರದೇಶಗಳಿಗೆ ಭೇಟಿ ನೀಡಿ, ಸಭೆಗಳಲ್ಲಿ ಪಾಲ್ಗೊಂಡು ಪ್ರಚಾರ ನಡೆಸಿದ್ದಾರೆ. ಉಳಿದಂತೆ ಸಣ್ಣ-ಪುಟ್ಟ ಸಭೆಗಳು ನಡೆಯುತ್ತಿವೆಯೇ ಹೊರತು ಸುಳ್ಯ ವಿಧಾನಸಭಾ ಕ್ಷೇತ್ರದ ಎಲ್ಲೂ ಜೋರು ಪ್ರಚಾರ ಕಂಡಿಲ್ಲ.
ಸುಳ್ಯ ಕ್ಷೇತ್ರದಲ್ಲಿ ಪಕ್ಷದ ಅಭ್ಯರ್ಥಿ ಗಳು ಪ್ರಮುಖ ಕಡೆಗಳಲ್ಲಿ ಸಭೆ, ಭೇಟಿ ನೀಡಿ ಮತಯಾಚಿಸಿದ್ದನ್ನು ಹೊರತು ಪಡಿಸಿದಂತೆ ಬೃಹತ್ ಸಭೆ, ಸಮಾವೇಶ ನಡೆದಿಲ್ಲ. ಚುನಾವಣೆ ದಿನದಂದು ನಾವು ತಪ್ಪದೆ ಮತ ಚಲಾಯಿಸುತ್ತೇವೆ ಎನ್ನುತ್ತಾರೆ ಹಲವರು. ಪ್ರಚಾರದ ಬಗ್ಗೆ ನಮಗೂ ಅಷ್ಟಾಗಿ ಆಸಕ್ತಿ ಇಲ್ಲ ಎಂದು ಕೆಲವರು ಉತ್ತರಿಸಿದರೆ, ಮತ್ತೆ ಕೆಲವರು ರಾಜಕೀಯ ಪಕ್ಷಗಳ, ನಾಯಕರ ವರ್ತನೆಗೆ ತೀವ್ರ ಅಸಮಾಧಾನ ವ್ಯಕ್ತಪಡಿಸುತ್ತಾರೆ. ಪತ್ರಿಕಾಗೋಷ್ಠಿ ಭರಾಟೆ
ಚುನಾವಣೆ ಘೋಷಣೆಯಾದ ದಿನದಿಂದ ರಾಜಕೀಯ ಪಕ್ಷಗಳ ನಾಯಕರು, ವಿವಿಧ ಸಂಘಟನೆಗಳು ಪತ್ರಿಕಾಗೋಷ್ಠಿ, ಸಭೆ ನಡೆಸಿ ಕ್ಷೇತ್ರದಲ್ಲಿನ ಸಮಸ್ಯೆಗಳು, ಜನರ ಬೇಡಿಕೆಗಳ ಬಗ್ಗೆ ಧ್ವನಿ ಎತ್ತುತ್ತಲೇ ಬಂದಿದ್ದಾರೆ. ರಾಜಕೀಯ ಪಕ್ಷಗಳು ತಮ್ಮ ಅಭ್ಯರ್ಥಿ ಪರ ಮಾತನಾಡಿ, ಇನ್ನೊಂದು ಪಕ್ಷಗಳನ್ನು ದೂರುತ್ತಿದ್ದಾರೆ. ಸಂಘಟನೆಗಳು ತಮ್ಮ ಬೇಡಿಕೆ ಈಡೇರಿಸಲು ಆಗ್ರಹಿಸುತ್ತಿದ್ದಾರೆ. ಇವೆಲ್ಲದರ ನಡುವೆ ಒಂದೆರಡು ಕಡೆ ಮತದಾನ ಬಹಿಷ್ಕಾರದ ಮಾತು ಕೇಳಿಬರುತ್ತಿದೆಯಾದರೂ ಅದು ಅಷ್ಟೊಂದು ತೀವ್ರತೆಯನ್ನು ಹೊಂದಿಲ್ಲ. ಕ್ಷೇತ್ರದ ಕೆಲವೆಡೆ ಸ್ಥಳೀಯ ರಾಜಕೀಯ ಮುಖಂಡರು ಮತ್ತು ಕಾರ್ಯಕರ್ತರ ಪಕ್ಷಾಂತರ ಪರ್ವ ಕೂಡ ನಡೆದಿದೆ.
Related Articles
Advertisement
ವಿವಿಧ ಪಕ್ಷಗಳ ಅಭ್ಯರ್ಥಿಗಳು ಕ್ಷೇತ್ರದ ಧಾರ್ಮಿಕ ಕೇಂದ್ರಗಳನ್ನು ಸಂದರ್ಶಿಸಿ, ಪ್ರಾರ್ಥನೆ ಸಲ್ಲಿಸುವ ಕೆಲಸವೂ ನಡೆಯುತ್ತಿದೆ. ನಾಗರಿಕರು ತಮ್ಮ ಸಮಸ್ಯೆಯನ್ನು ಅಭ್ಯರ್ಥಿಗಳಿಗೆ ಮನವರಿಕೆ ಮಾಡಲು ಇದನ್ನೇ ಅವಕಾಶವನ್ನಾಗಿ ಬಳಸುತ್ತಿದ್ದಾರೆ.
ಮತದಾನಕ್ಕೆ ಬೆರಳೆಣಿಕೆಯ ದಿನಗ ಳಷ್ಟೇ ಬಾಕಿ ಇದ್ದು, ಪಕ್ಷದವರು ಮನೆ ಮನೆ ಭೇಟಿ ಯೋಜಿಸಿದ್ದಾರೆ. ಆದರೆ ಬಹುತೇಕ ಮಂದಿ ತಮ್ಮದೇ ಕಾರಣಗಳೊಂದಿಗೆ ಯಾರಿಗೆ ಮತ ಹಾಕಬೇಕೆಂದು ನಿರ್ಧರಿಸಿರುವಂತೆ ತೋರುತ್ತಿದ್ದು, ಪ್ರಚಾರದ ಬಗ್ಗೆ ಯೋಚಿಸುತ್ತಿಲ್ಲ ಎಂಬ ಅಭಿಪ್ರಾಯವಿದೆ. ಸಾಮಾಜಿಕ ಜಾಲ ತಾಣಗಳ ಮೂಲಕವೂ ಮತದಾರರನ್ನು ಸಂಪರ್ಕಿಸುವ ಅಭ್ಯರ್ಥಿಗಳ ಪ್ರಯತ್ನವೂ ಚಾಲ್ತಿಯಲ್ಲಿದೆ.
- ದಯಾನಂದ ಕಲ್ನಾರ್