ಹಾನಗಲ್ಲ: ಬಾಳಂಬೀಡ ಹಾಗೂ ಹಿರೇಕಾಂಶಿ ಏತನೀರಾವರಿ ಯೋಜನೆಗಳಿಗೆ ಸಚಿವ ಸಂಪುಟದ ಅನುಮೋದನೆ ದೊರೆತಿದ್ದು ಸ್ವಾಗತಾರ್ಹವಾದರೂ, ಯೋಜನೆ ಕಾಮಗಾರಿಗೆ ಜನಪ್ರತಿನಿಧಿಗಳು ಇಚ್ಛಾಶಕ್ತಿ ತೋರಿದಾಗ ಮಾತ್ರ ಇದರ ಫಲ ದೊರೆಯಬಲ್ಲದು ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ತಾಲೂಕು ಘಟಕದ ಅಧ್ಯಕ್ಷ ಮರಿಗೌಡ ಪಾಟೀಲ ಎಚ್ಚರಿಸಿದರು.
ಶುಕ್ರವಾರ ಪಟ್ಟಣದ ಮಹಾತ್ಮಾಗಾಂಧಿ ವೃತ್ತದಲ್ಲಿ ಸಚಿವ ಸಂಪುಟದ ತೀರ್ಮಾನಕ್ಕೆ ವಿಜಯೋತ್ಸವ ನಡೆಸಿದ ನಂತರ ಮಾತನಾಡಿದ ಅವರು, ಡಿಸಿಸಿ ಬ್ಯಾಂಕ್ ಹಾವೇರಿ ಜಿಲ್ಲೆಗೆ ಪ್ರತ್ಯೇಕ ಆಡಳಿತಕ್ಕೆ ಸಚಿವ ಸಂಪುಟದ ತೀರ್ಮಾನವಾಗಿತ್ತು. ಆದರೆ ಅದು ಇನ್ನೂ ಜಾರಿಗೆ ಬಂದಿಲ್ಲ. ಇದಕ್ಕೆಲ್ಲ ಜನಪ್ರತಿನಿಧಿಗಳ ಇಚ್ಛಾಶಕ್ತಿ ಕೊರತೆಯೇ
ಕಾರಣವಾಗಿದೆ. ಆದರೆ ಬಾಳಂಬೀಡ ಏತ ನೀರಾವರಿ ಯೋಜನೆ ಜಾರಿಗೆ ಎರಡು ದಶಕಗಳಿಂದ ನಡೆದ ಹೋರಾಟದ ಫಲ ಇದಾಗಿದೆ. ಹಾನಗಲ್ಲ ತಾಲೂಕು ಶಾಸಕ ಸಿ.ಎಂ. ಉದಾಸಿ ಅವರು ಹಾಗೂ ಇದೇ ತಾಲೂಕಿನವರಾದ ಸಂಸದ ಶಿವಕುಮಾರ ಉದಾಸಿ ಅವರು ಹೆಚ್ಚು ಕಾಳಜಿ ವಹಿಸಿ ಈ ಯೋಜನೆ ಶೀಘ್ರ ಕಾಮಗಾರಿ ಆರಂಭವಾಗಲಿ ಎಂದರು.
ನೆರೆ ಪರಿಹಾರದ ಸಂದರ್ಭದಲ್ಲಿ ಕಳೆದ ತಿಂಗಳು ಹಾನಗಲ್ಲ ತಾಲೂಕಿನಗೊಂದಿಗೆ ಮುಖ್ಯ ಮಂತ್ರಿ ಬಿ.ಎಸ್.ಯಡಿಯೂರಪ್ಪ ಆಗಮಿಸಿದ್ದಾಗ ಈ ಕ್ಷೇತ್ರದ ಶಾಸಕ ಸಿ.ಎಂ. ಉದಾಸಿಯವನ್ನೊಳಗೊಂಡು ಬಾಳಂಬೀಡ ಏತ ನೀರಾವರಿ ಯೋಜನೆ ಜಾರಿಗೊಳಿಸುವಂತೆ ಮಾಡಿದ ಮನವಿಗೆ ಸ್ಪಂದಿಸಿದ ಮುಖ್ಯಮಂತ್ರಿಗಳಿಗೆ ಕೃತಜ್ಞತೆ ಸಲ್ಲಿಸಿದ ಅವರು, ರೈತಪರ ಮುಖ್ಯಮಂತ್ರಿ ಎಂಬುದನ್ನು ಈ ಯೋಜನೆ ಕಾಮಗಾರಿ ಆರಂಭಿಸುವ ಮೂಲಕ ಪ್ರದರ್ಶಿಸಲಿ ಎಂದುಮರಿಗೌಡ ಪಾಟೀಲ ತಿಳಿಸಿದರು.
ಮನವಿ: ಇದೇ ವೇಳ ತಹಶೀಲ್ದಾರ್ ಎಂ.ಗಂಗಪ್ಪ ಅವರಿಗೆ ಮನವಿ ಸಲ್ಲಿಸಿದ ಸಂಘಟನೆ ಪದಾಧಿ ಕಾರಿಗಳು, ಹಳೇಕೋಟಿ ಗ್ರಾಮದ ಹದ್ದಿನಲ್ಲಿ ರೈತರ ಜಮೀನುಗಳಿಗೆ ನಕಾಶೆಯಲ್ಲಿ ಕಾಲು ದಾರಿ ಇದ್ದು, ಇದನ್ನು ನಮ್ಮ ಹೊಲ ನಮ್ಮ ರಸ್ತೆ ಯೋಜನೆಯಲ್ಲಿ ರಸ್ತೆಯಾಗಿ ಪರಿವರ್ತಿಸಿ ಕೊಡಬೇಕು. ಇದು ಹಾನಗಲ್ಲ-ದರ್ಗಾ- ಬೈಚವಳ್ಳಿ ರಸ್ತೆಯ ನಾಗರೊಳ್ಳಿ ಕೆರೆ ಹತ್ತಿರ ಇದೆ.