ಕಲಬುರಗಿ: ಪ್ರಸ್ತುತ 2021-22ನೇ ಶೈಕ್ಷಣಿಕ ಸಾಲಿನಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಸಹ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿರುವವರಿಗೆ ಪ್ರಾಧ್ಯಾಪಕ ಹುದ್ದೆಗೆ ಬಡ್ತಿ ನೀಡಲು ನಿಗದಿಗೊಳಿಸಿರುವ ನಿಯಮಗಳನ್ನು ಉಲ್ಲಂಘಿಸಿ ಪಟ್ಟಿ ಸಿದ್ಧಪಡಿಸಿ ಅವಸರದಲ್ಲಿ ಪ್ರಕಟಿಸಿರುವುದನ್ನು ಸರಿಪಡಿಸುವಂತೆ ಹೈದ್ರಾಬಾದ್ ಕರ್ನಾಟಕ ಸರಕಾರಿ ಕಾಲೇಜು ಅಧ್ಯಾಪಕರ ಸಂಘ ಒತ್ತಾಯಿಸಿದೆ.
ಸಹ ಪ್ರಾಧ್ಯಾಪಕರಿಗೆ ಬಡ್ತಿ ನೀಡಲು ಅನುಸರಿಸಿದ ಮಾನದಂಡ ಅವೈಜ್ಞಾನಿಕವಾಗಿದ್ದು, ತಕ್ಷಣವೇ ಪರಿಷ್ಕೃರಿಸಬೇಕೆಂದು ಅಧ್ಯಾಪಕರ ಸಂಘವು ಉನ್ನತ ಶಿಕ್ಷಣ ಸಚಿವರಿಗೆ ಹಾಗೂ ಕಾಲೇಜು ಶಿಕ್ಷಣ ಜಂಟಿ ನಿರ್ದೇಶಕರಿಗೆ ಮನವಿ ಸಲ್ಲಿಸಿದೆ.
ಇದನ್ನೂ ಓದಿ: ಕಣ್ಣಿಗೆ ಬಟ್ಟೆಕಟ್ಟಿ ನೇತ್ರಾವತಿ ನದಿಗೆ ಹಾರಿದ ವ್ಯಕ್ತಿ
ಸಂವಿಧಾನದ 371ನೇ (ಜೆ)ಕಲಂ ಕಾಯ್ದೆ ಅಡಿಯಲ್ಲಿ ಪ್ರಾಧ್ಯಾಪಕರ ಹುದ್ದೆಗಳಿಗೆ ಬಡ್ತಿ ನೀಡುವಾಗ ವಿಶೇಷ ಮೀಸಲಾತಿ ನೀಡಬೇಕೆಂಬ ನಿಯಮಾವಳಿಗಳನ್ನು ಉಲ್ಲಂಘಿಸಿರುವುದು ಉನ್ನತ ಶಿಕ್ಷಣ ವಿರೋಧಿ ಕ್ರಮವಾಗಿದೆ. ಪ್ರಮುಖವಾಗಿ ಪ್ರಾಧ್ಯಾಪಕರ ಬಡ್ತಿಯಲ್ಲಿ ಕಲ್ಯಾಣ ಕರ್ನಾಟಕ ಭಾಗದಲ್ಲಿ ಕಾರ್ಯನಿರ್ವಹಿಸುತ್ತಿರುವ ಅಧ್ಯಾಪಕರನ್ನು ಕಡೆಗಣಿಸಿರುವುದು ಸರ್ಕಾರದ ಪ್ರಜಾತಾಂತ್ರಿಕ ವಿರೋಧಿ ಕ್ರಮವಾಗಿದೆ. ಕಲ್ಯಾಣ ಕರ್ನಾಟಕದ ಸಹ ಪ್ರಾಧ್ಯಾಪಕರು ಪ್ರಾಧ್ಯಾಪಕರ ಹುದ್ದೆಗಳಿಗೆ ಆನ್‌ಲೈನ್‌ನಲ್ಲಿ ಭರ್ತಿಮಾಡಿದ ಗೂಗಲ್ ಫಾರಂಗಳನ್ನು ಪರಿಪೂರ್ಣವಾಗಿ ಪರಿಶೀಲಿಸದೇ ಮತ್ತು ಸೇವಾ ಹಿರಿತನ ಪರಿಗಣಿಸದೇ ಇರುವುದು ಸರಿಯಲ್ಲ ಎಂದು ಸಂಘದ ಪದಾಧಿಕಾರಿಗಳು ಮನವಿಯಲ್ಲಿ ತಿಳಿಸಿದ್ದಾರೆ.
ಅಧ್ಯಾಪಕರ ಸಂಘದ ವಿಭಾಗೀಯ ಅಧ್ಯಕ್ಷ ಡಾ| ಶರಣಪ್ಪ ಸೈದಾಪುರ, ಪದಾಧಿಕಾರಿಗಳಾದ ಡಾ| ಅನಿಲಕುಮಾರ ಹಾಲು, ಡಾ| ಮಲ್ಲಿಕಾರ್ಜುನ ಶೆಟ್ಟಿ, ಡಾ| ಚಿನ್ನಾ ಆಶಪ್ಪ, ಡಾ| ಶರಣಪ್ಪ ಗುಂಡಗುರ್ತಿ, ಪ್ರೊ| ಚಿತ್ಕಲಾ ಮಠಪತಿ, ಪ್ರೊ| ಸಂತೋಷ ಹಂಪಿÛ, ಡಾ| ಕಲ್ಯಾಣರಾವ್ ಪಾಟೀಲ, ಡಾ| ದೇವಿದಾಸ ರಾಠೊಡ, ಡಾ| ಶಂಕರ ರಾಠೊಡ, ಚನ್ನಬಸಯ್ಯ ಹಿರೇಮಠ, ಡಾ| ಶರಣಬಸಪ್ಪ ಚಿಕ್ಕಳ್ಳಿ ಇನ್ನಿತರರು ಇದ್ದರು