Advertisement
ನಗರದಲ್ಲಿ ಉತ್ಪತ್ತಿಯಾಗುವ ತ್ಯಾಜ್ಯವನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡುವ ಉದ್ದೇಶದಿಂದ ಪಾಲಿಕೆಯಿಂದ ಏಳು ಕಡೆಗಳಲ್ಲಿ ತ್ಯಾಜ್ಯ ಸಂಸ್ಕರಣೆ ಘಟಕ ಸ್ಥಾಪಿಸಲಾಗಿದೆ. ಆದರೆ, ಆಯಾ ದಿನದ ತ್ಯಾಜ್ಯವನ್ನು ಅದೇ ದಿನ ಸಂಸ್ಕರಿಸದ ಹಿನ್ನೆಲೆಯಲ್ಲಿ ತ್ಯಾಜ್ಯ ಕೊಳೆತು ಅದರಿಂದ ವಿಷಕಾರಿ ರಸ ಉತ್ಪತ್ತಿಯಾಗುತ್ತಿದೆ.
Related Articles
Advertisement
ಎರಡು ಕಡೆಗಳಲ್ಲಿ ಘಟಕ ಸ್ಥಾಪನೆ!: ಪಾಲಿಕೆಯಿಂದ ಈಗಾಗಲೇ ದೊಡ್ಡಬಿದರಕಲ್ಲು ಹಾಗೂ ಬೆಳ್ಳಹಳ್ಳಿ ಭಾಗಗಳಲ್ಲಿ ಲಿಚೆಟ್ ಶುದ್ಧೀಕರಣ ಘಟಕ ಸ್ಥಾಪನೆಗೆ ಉದ್ದೇಶಿಸಲಾಗಿದೆ. ಈಗಾಗಲೇ ಪ್ರಾಥಮಿಕ ಸಿದ್ಧತೆಗಳನ್ನು ಮಾಡಿಕೊಂಡಿರುವ ಗುತ್ತಿಗೆದಾರರು ದೊಡ್ಡಬಿದರಕಲ್ಲು ಭಾಗದಲ್ಲಿ ಘಟಕ ಸ್ಥಾಪನೆ ಕಾರ್ಯವನ್ನು ಕೈಗೆತ್ತಿಕೊಂಡಿದ್ದಾರೆ. ಶೀಘ್ರದಲ್ಲಿಯೇ ಘಟಕ ಆರಂಭವಾಗಲಿದೆ.
ನಿತ್ಯ 25 ಸಾವಿರ ಲೀಟರ್ ಸಂಸ್ಕರಣೆ!: ಎರಡೂ ಭಾಗಗಳಲ್ಲಿ ಆರಂಭವಾಗುತ್ತಿರುವ ಲಿಚೆಟ್ ಶುದ್ಧೀಕರಣ ಘಟಕಗಳು ತಲಾ 25 ಸಾವಿರ ಲೀಟರ್ ಲಿಚೆಟ್ ಶುದ್ಧೀಕರಣ ಸಾಮರ್ಥ್ಯ ಹೊಂದಿರಲಿವೆ. ನಗರದ ಎಲ್ಲ ತ್ಯಾಜ್ಯ ಸಂಸ್ಕರಣೆ ಘಟಕಗಳಿಂದ ನಿತ್ಯ 5-6 ಸಾವಿರ ಲೀಟರ್ ಲಿಚೆಟ್ ಉತ್ಪತ್ತಿಯಾಗುತ್ತಿದೆ. ಈ ಎರಡೂ ಘಟಕಗಳು ಯಶಸ್ವಿಯಾಗಿ ಕಾರ್ಯ ನಿರ್ವಹಿಸಿದರೆ, ಮುಂದಿನ ದಿನಗಳಲ್ಲಿ ಪ್ರತಿ ಘಟಕದ ಬಳಿಯೂ ಕಿರು ಘಟಕಗಳನ್ನು ಸ್ಥಾಪಿಸುವ ಕುರಿತಂತೆ ಪಾಲಿಕೆ ಚಿಂತನೆ ನಡೆಸಿದೆ.
ಟ್ಯಾಂಕರ್ ಮೂಲಕ ರವಾನೆ!: ಪಾಲಿಕೆಯಿಂದ ಸದ್ಯ ದೊಡ್ಡಬಿದರಕಲ್ಲು ಹಾಗೂ ಬೆಳ್ಳಹಳ್ಳಿಯಲ್ಲಿ ಲಿಚೆಟ್ ಶುದ್ಧೀಕರಣ ಘಟಕ ಸ್ಥಾಪಿಸಲು ಯೋಜನೆ ರೂಪಿಸಲಾಗಿದೆ. ಹೀಗಾಗಿ ಆಯಾ ಭಾಗಗಳಲ್ಲಿ ಉತ್ಪತ್ತಿಯಾಗುವ ಲಿಚೆಟ್‌ಅನ್ನು ಅಲ್ಲಿಯೇ ಶುದ್ಧೀಕರಿಸಲಾಗುತ್ತದೆ. ಉಳಿದಂತೆ ಇತರೆ ತ್ಯಾಜ್ಯ ಸಂಸ್ಕರಣೆ ಘಟಕಗಳಲ್ಲಿ ಸೃಷ್ಟಿಯಾಗುವ ಲಿಚೆಟ್‌ಅನ್ನು ಟ್ಯಾಂಕರ್‌ಗಳ ಮೂಲಕ ಎರಡೂ ಘಟಕಗಳಿಗೆ ಸಾಗಿಸಿ ಶುದ್ಧೀಕರಿಸಲಾಗುತ್ತದೆ. ಮುಂದಿನ ದಿನಗಳಲ್ಲಿ ಆಯಾ ಘಟಕದಲ್ಲಿಯೇ ಸಣ್ಣ ಘಟಕ ಸ್ಥಾಪನೆ ಮಾಡುವ ಚಿಂತನೆಯಿದೆ ಎಂದು ಮೂಲಗಳು ತಿಳಿಸಿವೆ.
ಶುದ್ಧೀಕರಿಸಿದ ನೀರು ಉದ್ಯಾನಗಳಿಗೆ!: ಪಾಲಿಕೆಯ ಲಿಚೆಟ್ ಶುದ್ಧೀಕರಣ ಘಟಕಗಳಲ್ಲಿ ರಿವರ್ಸ್ ಆಸ್ಮೋಸಿಸ್ ಕ್ರಿಯೆ ಮೂಲಕ ದ್ರಾವಣವನ್ನು ಶುದ್ಧೀಕರಿಸಲಾಗುತ್ತದೆ. ಹೀಗೆ ಶುದ್ಧೀಕರಿಸಿದ ಬಳಿಕ ಘಟಕದ ಸುತ್ತಮುತ್ತಲಿನ ಭಾಗಗಳಲ್ಲಿನ ಉದ್ಯಾನಗಳಿಗೆ ಪೂರೈಸಲಾಗುತ್ತದೆ. ಉದ್ಯಾನಗಳಿಗೆ ಪೂರೈಕೆ ಮಾಡಿದ ನಂತರವೂ ಉಳಿಯುವ ನೀರನ್ನು ಮಳೆ ನೀರು ಕಾಲುವೆಗಳಿಗೆ ಹರಿಸಲು ನಿರ್ಧರಿಸಲಾಗಿದೆ.
ದೇಶದ ಮೊದಲ ಘಟಕ!: ಸದ್ಯ ದೊಡ್ಡಬಿದರಕಲ್ಲು ಬಳಿ ಪಾಲಿಕೆಯಿಂದ ಆರಂಭಿಸುತ್ತಿರುವ ಲಿಚೆಟ್ ಶುದ್ಧೀಕರಣ ಘಟಕ ದೇಶದಲ್ಲೇ ಪ್ರಥಮ ಎನಿಸಲಿದೆ. ಈ ಘಟಕಗಳಿಂದಾಗಿ ತ್ಯಾಜ್ಯ ಸಂಸ್ಕರಣೆ ವೇಳೆಯಲ್ಲಿ ಬರುತ್ತಿದ್ದ ದುರ್ವಾಸನೆ ಹಂತ ಹಂತವಾಗಿ ಕಡಿಮೆಯಾಗಲಿದೆ. ತ್ಯಾಜ್ಯ ಸಂಸ್ಕರಣೆ ಘಟಕಗಳ ಕಾರ್ಯಾಚರಣೆಗೆ ಯಾವುದೇ ತೊಂದರೆಯಾಗುವುದಿಲ್ಲ ಎಂದು ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ತ್ಯಾಜ್ಯ ಸಂಸ್ಕರಿಸುವಾಗ ಉತ್ಪತ್ತಿಯಾಗುವ ಲಿಚೆಟ್ ಎಂಬ ದ್ರವ ದುರ್ವಾಸನೆಯಿಂದ ಕೂಡಿರುತ್ತದೆ. ಹೀಗಾಗಿ ಪಾಲಿಕೆಯಿಂದ ಎರಡು ಭಾಗಗಳಲ್ಲಿ ಲಿಚೆಟ್ ಶುದ್ಧೀಕರಣ ಘಟಕ ಆರಂಭಿಸಲಾಗುತ್ತಿದೆ. ಈಗಾಗಲೇ ದೊಡ್ಡಬಿದರಕಲ್ಲು ಭಾಗದಲ್ಲಿ ಘಟಕ ಸ್ಥಾಪನೆ ಕಾರ್ಯ ಆರಂಭವಾಗಿದೆ. ಇದರೊಂದಿಗೆ ಶೀಘ್ರದಲ್ಲಿಯೇ ಬೆಳ್ಳಹಳ್ಳಿ ಭಾಗದಲ್ಲಿ ಘಟಕ ನಿರ್ಮಾಣಕ್ಕೆ ಅಗತ್ಯ ಕ್ರಮಕೈಗೊಳ್ಳಲಾಗುವುದು.– ಸಫರಾಜ್ ಖಾನ್, ಜಂಟಿ ಆಯುಕ್ತ, ಬಿಬಿಎಂಪಿ ಘನತ್ಯಾಜ್ಯ * ವೆಂ.ಸುನೀಲ್‌ಕುಮಾರ್