Advertisement

ದ.ಕ.:ಪ್ರಸ್ತುತ ನೀರಿದೆ; ಸಮಸ್ಯೆ ಎದುರಾಗದಂತೆ ಕ್ರಮಕ್ಕೆ ಸೂಚನೆ

03:45 AM Feb 18, 2017 | Team Udayavani |

ಮಂಗಳೂರು: ದ.ಕ. ಜಿಲ್ಲೆಯಲ್ಲಿ ಪ್ರಸ್ತುತ ನೀರಿನ ಸಮಸ್ಯೆ ಎದುರಾಗಿಲ್ಲವಾದರೂ ಮುಂಬರುವ ದಿನದಲ್ಲಿ ಯಾವುದೇ ಸಮಸ್ಯೆ ಉದ್ಭವಿಸದ ಹಾಗೆ ಮುನ್ನೆಚ್ಚರಿಕೆ ಕ್ರಮಗಳನ್ನು ದ.ಕ. ಜಿಲ್ಲಾಡಳಿತ ಕೈಗೊಳ್ಳಬೇಕು ಹಾಗೂ ಕುಡಿಯುವ ನೀರಿಗಾಗಿ ಹೊಸದಾಗಿ ಕೈಗೊಳ್ಳುವ ಎಲ್ಲ ರೀತಿಯ ಕಾಮಗಾರಿಗಳನ್ನು ತುರ್ತು ನೆಲೆಯಲ್ಲಿ ಹಮ್ಮಿಕೊಳ್ಳಬೇಕು ಎಂದು ಸಚಿವ ಬಿ. ರಮಾನಾಥ ರೈ ಅಧಿಕಾರಿಗಳಿಗೆ ಸೂಚಿಸಿದ್ದಾರೆ. 

Advertisement

ಮಂಗಳೂರು ಹಾಗೂ ಬಂಟ್ವಾಳ ತಾಲೂಕು ಬರಪೀಡಿತ ತಾಲೂಕು ಎಂದು ಘೋಷಣೆಯಾದ ಹಿನ್ನೆಲೆಯಲ್ಲಿ ಅಲ್ಲಿ ಕೈಗೊಳ್ಳಬೇಕಾದ ಕಾಮಗಾರಿಗಳ ಕುರಿತು ಶುಕ್ರವಾರ ದ.ಕ. ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಪ್ರಗತಿ ಪರಿಶೀಲನ ಸಭೆಯಲ್ಲಿ ಭಾಗವಹಿಸಿ ಅವರು ಅಧಿಕಾರಿಗಳಿಗೆ ಸಲಹೆ, ಸೂಚನೆ ನೀಡಿದರು. 

ಯಾವುದೇ ವರ್ಷದಲ್ಲಿ ಕಂಡುಕೇಳರಿಯದ ರೀತಿ ದ.ಕ. ಜಿಲ್ಲೆಯ ಎರಡು ತಾಲೂಕುಗಳು ಬರಪೀಡಿತ ಎಂದು ಘೋಷಣೆಯಾಗಿದೆ. ಹೀಗಾಗಿ ಈ ಎರಡು ತಾಲೂಕು ಮತ್ತು ಅದರ ಜತೆಗೆ ಉಳಿದ ತಾಲೂಕುಗಳಲ್ಲಿ ಕುಡಿಯುವ ನೀರು ಹಾಗೂ ಇತರ ವ್ಯವಸ್ಥೆಗಳನ್ನು ಅಧಿಕಾರಿಗಳು ತುರ್ತು ನೆಲೆಯಲ್ಲಿ  ಕೈಗೊಳ್ಳಬೇಕು. ಇದರಲ್ಲಿ ಯಾವುದೇ ಲೋಪಗಳಾಗಬಾರದು ಎಂದರು.

ಸದ್ಯಕ್ಕೆ ಮಂಗಳೂರಿಗೆ ನೀರಿನ ಕೊರತೆಯಿಲ್ಲ ದ.ಕ. ಜಿಲ್ಲಾಧಿಕಾರಿ ಡಾ| ಕೆ.ಜಿ. ಜಗದೀಶ್‌ ಮಾತನಾಡಿ, ಮಂಗಳೂರು ಮಹಾನಗರ ಪಾಲಿಕೆಗೆ ಸರಬರಾಜಾಗುವ ತುಂಬೆ ಡ್ಯಾಂನಲ್ಲಿ ಈಗ 5 ಮೀಟರ್‌ ನೀರು ನಿಲುಗಡೆ ಆದ ಕಾರಣ 7.65 ಎಂಸಿಎಂ ಒಟ್ಟು ಲಭ್ಯತೆ ಇದೆ. ಒಳಹರಿವು ಕೂಡ ಇದೆ. ಪ್ರತೀ ದಿನ ಇಲ್ಲಿಂದ 160 ಎಂಎಲ್‌ಡಿ ನೀರು ಪಂಪಿಂಗ್‌ ಮಾಡಧಿಲಾಗುತ್ತಿದೆ. ಈಗಿನ ಅಂದಾಜಿನ ಪ್ರಕಾರ ಸದ್ಯಕ್ಕೆ ನೀರಿನ ಕೊರತೆ ಎದುರಾಗದು. ಆದರೆ ಒಳಹರಿವು ಕಡಿಮೆ ಆದರೆ ಮುಂದೆ ಎಚ್ಚರಿಕೆ ವಹಿಸಬೇಕಾಗುತ್ತದೆ. ಉಳಿದಂತೆ ಎರಡು ತಾಲೂಕುಗಳ ಇತರ ಭಾಗದಲ್ಲಿ ನೀರಿನ ಸಮಸ್ಯೆ ಎದುರಾಗಿಲ್ಲ ಎಂದರು.

ಬೇಸಗೆ ಕಾಲದಲ್ಲಿ ನೀರಿನ ಸಮಸ್ಯೆ ಎದುರಾಗಬಹುದಾದ ಮಂಗಳೂರು, ಬಂಟ್ವಾಳದ ಸ್ಥಳಗಳನ್ನು ಈಗಾಗಲೇ ಜಿಲ್ಲಾಡಳಿತ ಗುರುತಿಸಿದೆ. ಇದರಂತೆ ಮಂಗಳೂರು ಪಾಲಿಕೆಯ 3 ವಾರ್ಡ್‌ಗಳ 10ರಿಂದ 15 ಮನೆಗಳು, ಉಳ್ಳಾಲ ನಗರಸಭೆಯ 12 ವಾರ್ಡ್‌ಗಳು, ಬಂಟ್ವಾಳ ಪುರಸಭೆಯ 9, ಮೂಲ್ಕಿ ನಗರಸಭೆಯ 17, ಕೋಟೆಕಾರು ನ.ಪಂ.ನ 11 ಹಾಗೂ ವಿಟ್ಲ ನ.ಪಂ.ನ 16(ಭಾಗಶಃ) ವಾರ್ಡ್‌ಗಳನ್ನು ಗುರುತಿಸಲಾಗಿದೆ ಎಂದರು. 

Advertisement

ಅಪರ ಜಿಲ್ಲಾಧಿಕಾರಿ ಕುಮಾರ್‌ ಮಾತನಾಡಿ, ಕುಡಿಯುವ ನೀರಿನ ಸಮಸ್ಯೆ ಉಂಟಾದಲ್ಲಿ ಟ್ಯಾಂಕರ್‌ ಮೂಲಕ ಪೂರೈಸಲು ಪ್ರತೀ ತಾಲೂಕು ಪಂಚಾಯತ್‌ಗೆ 10 ಲಕ್ಷ ರೂ. ಹಾಗೂ ನಗರ ಸ್ಥಳೀಯ ಸಂಸ್ಥೆಗಳಿಗೆ 5 ಲಕ್ಷ ರೂ. ಬಿಡುಗಡೆ ಮಾಡಲಾಗಿದೆ. ಶಾಸಕ ಮೊದಿನ್‌ ಬಾವ ಉಪಸ್ಥಿತರಿದ್ದರು.

ಕುಡಿಯುವ ನೀರು: 933 ಹೊಸ ಕಾಮಗಾರಿ- 19 ಕೋ.ರೂ. ಪ್ರಸ್ತಾವನೆ
ಡಾ| ಎಂ.ಆರ್‌. ರವಿ ಮಾತನಾಡಿ, ಕುಡಿಯುವ ನೀರಿಗೆ ಸಂಬಂಧಪಟ್ಟು ಜಿಲ್ಲೆಯಲ್ಲಿ 933 ಹೊಸ ಕಾಮಗಾರಿಗಳನ್ನು ಮಾಡಲು ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಅದರಂತೆ ಮಂಗಳೂರಿನಲ್ಲಿ 280, ಬಂಟ್ವಾಳ 348, ಪುತ್ತೂರು 79, ಸುಳ್ಯ 87 ಹಾಗೂ ಬೆಳ್ತಂಗಡಿಯಲ್ಲಿ 139 ಕಾಮಗಾರಿ ಕೈಗೊಳ್ಳಬಹುದು. ಇದಕ್ಕಾಗಿ ಒಟ್ಟು 19 ಕೋ. ರೂ. ಪ್ರಸ್ತಾವನೆ ಸಿದ್ಧಪಡಿಸಿ ಸರಕಾರಕ್ಕೆ ಕಳುಹಿಸಲಾಗುವುದು. ಬರಪೀಡಿತ ಮಂಗಳೂರು ತಾಲೂಕಿನ 19 ಕೆರೆ ಹಾಗೂ ಬಂಟ್ವಾಳ ತಾಲೂಕಿನ 42 ಕೆರೆಗಳನ್ನು ಒಟ್ಟು 13 ಲಕ್ಷ ರೂ.ಗಳಲ್ಲಿ ಪುನಶ್ಚೇತನ ಕೈಗೊಳ್ಳಲು ನಿರ್ಧರಿಸಧಿಲಾಗಿದೆ ಎಂದರು.

ತುಂಬೆ 6 ಮೀ. ನೀರು ನಿಲುಗಡೆ; ಬಜೆಟ್‌ನಲ್ಲಿ  ಅನುದಾನ ನಿರೀಕ್ಷೆ
ಸಚಿವ ರಮಾನಾಥ ರೈ ಮಾತನಾಡಿ, ತುಂಬೆ ವೆಂಟೆಡ್‌ ಡ್ಯಾಂನಲ್ಲಿ ಈಗಾಗಲೇ 5 ಮೀಟರ್‌ ನೀರು ನಿಲ್ಲಿಸಲಾಗಿದ್ದು, 8 ಮೀಟರ್‌ ವರೆಗೆ ನೀರು ನಿಲ್ಲಿಸಲು ಅವಕಾಶವಿದೆ. ಆದರೆ ನಮ್ಮ ಅಗತ್ಯಕ್ಕೆ ಅನುಗುಣವಾಗಿ 6 ಮೀಟರ್‌ನಷ್ಟು ನೀರು ನಿಲುಗಡೆ ಮಾಡಲು ನಿರ್ಧರಿಸಲಾಗಿದೆ. ಇದರಿಂದ ಮತ್ತೆ ಭೂಮಿ ಮುಳುಗಡೆಯಾಗುವುದರಿಂದ ಮುಂದಿನ ಬಜೆಟ್‌ನಲ್ಲಿ ಇದಕ್ಕಾಗಿ 32 ಕೋ. ರೂ. ಅನುದಾನ ಸಿಗುವ ಸಾಧ್ಯತೆ ಇದೆ. ಇದರ ಪ್ರಕಟನೆ ಆದ ಬಳಿಕ 6 ಮೀಟರ್‌ ನೀರು ನಿಲುಗಡೆಗೆ ಕ್ರಮ ಕೈಗೊಳ್ಳಲಾಗುವುದು ಎಂದರು. 

ಗ್ರಾಮಕ್ಕೊಂದು ವೆಂಟೆಡ್‌ ಡ್ಯಾಂ…!
ದ.ಕ. ಜಿ. ಪಂ. ಸಿಇಒ ಡಾ| ಎಂ.ಆರ್‌. ರವಿ ಮಾತನಾಡಿ, 1 ಗ್ರಾಮಕ್ಕೆ ಕನಿಷ್ಠ 1 ವೆಂಟೆಡ್‌ ಡ್ಯಾಂ ಸೌಲಭ್ಯ ನೀಡುವ ಮೂಲಕ ಆ ಗ್ರಾಮದಲ್ಲಿ ನೀರಿನ ಸಂಗ್ರಹಕ್ಕೆ ಒತ್ತು ನೀಡುವ ಹೊಸ ಪ್ರಸ್ತಾವನೆ ಸಿದ್ಧಪಡಿಸಲಾಗಿದೆ. ಗ್ರಾಮದಲ್ಲಿ ಗರಿಷ್ಠ 5 ವೆಂಟೆಡ್‌ ಡ್ಯಾಂ ಕಟ್ಟಬಹುದು. ನರೇಗಾ ಯೋಜನೆಯಡಿ ಇದರ ಕಾಮಗಾರಿ ನಡೆಸಬೇಕು. 1 ಡ್ಯಾಂಗೆ 2.30 ಲಕ್ಷ ರೂ. ವೆಚ್ಚ ಎಂದು ಮಾದರಿ ಕ್ರಿಯಾಯೋಜನೆಯಲ್ಲಿ ಅಂದಾಜಿಸಲಾಗಿದೆ. ಇದನ್ನು ಸರಕಾರದ ಒಪ್ಪಿಗೆಗಾಗಿ ಕಳುಹಿಸಲಾಗಿದೆ ಎಂದು ಅವರು ತಿಳಿಸಿದರು. 

Advertisement

Udayavani is now on Telegram. Click here to join our channel and stay updated with the latest news.

Next