ಕಮಲನಗರ: ಮರಾಠಿ ಹಾಗೂ ಕನ್ನಡ ಭಾಷೆಗಳ ಸಂಘರ್ಷದಲ್ಲಿರುವ ಈ ಭಾಗಕ್ಕೆ ಕನ್ನಡದ ಸಮಗ್ರ ಅಭಿವೃದ್ಧಿಗೆ ಕಂಕಣ ಕಟ್ಟಿ ನಿಂತಿರುವ ಚವ್ಹಾಣ ಕಾರ್ಯ ಮೆಚ್ಚುವಂತಹದು ಎಂದು ಗಡಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ| ಎಸ್. ಸೋಮಶೇಖರ್ ಹೇಳಿದರು.
ಕಮಲನಗರ ತಾಲೂಕಿನ ಚೊಂಡಿಮುಖೇಡ್ ಗ್ರಾಮದಲ್ಲಿ ಕರ್ನಾಟಕ ಗಡಿ ಅಭಿವೃದ್ಧಿ ಪ್ರಾಧಿಕಾರ ಹಾಗೂ ಬಿದರಿ ಬೀದರ ಜಿಲ್ಲಾ ಸಾಂಸ್ಕೃತಿಕ ವೇದಿಕೆ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಗಡಿನಾಡ ಉತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪ್ರಾಧಿಕಾರ ಸೇರಿದಂತೆ ಈ ಭಾಗದ ಜನಪ್ರತಿನಿಧಿಗಳು ಸೇರಿ ಸಿಎಂ ಅವರನ್ನು ಭೇಟಿ ಮಾಡಿ ಚೊಂಡಿಮುಖೇಡ್ ಗ್ರಾಮದ ಸಮಸ್ಯೆ ಮೇಲೆ ಬೆಳಕು ಚೆಲ್ಲೋಣ. ಈ ಭಾಗದ ಸಮಸ್ಯೆ ಬಗ್ಗೆ ವರದಿ ತಯಾರಿಸಿ ಪ್ರಾಧಿಕಾರದ ಪರವಾಗಿ ಅನುಷ್ಠಾನಕ್ಕೆ ಪ್ರಮಾಣಿಕ ಪ್ರಯತ್ನ ಮಾಡುವುದಾಗಿ ಭರವಸೆ ನೀಡಿದರು.
ಕೆಎಸ್‌ಐಐಡಿಸಿ ಅಧ್ಯಕ್ಷ ಡಾ| ಶೈಲೇಂದ್ರ ಬೆಲ್ದಾಳೆ ಮಾತನಾಡಿ, ಈ ಗ್ರಾಮದ ಶಾಲೆಯಲ್ಲಿ ಇ-ಗ್ರಂಥಾಲಯಕ್ಕೆ ಮಂಡಳಿಯಿಂದ 5 ಲಕ್ಷ ರೂ. ಅನುದಾನ ನೀಡುವ ಭರವಸೆ ನೀಡಿದರಲ್ಲದೆ ಮುಂದೆಯು ಮತ್ತಷ್ಟು ಸಹಕಾರ ನೀಡುವೆ ಎಂದರು.
ಉತ್ಸವಕ್ಕೆ ಚಾಲನೆ ನೀಡಿ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವ್ಹಾಣ, ಚೊಂಡಿಮುಖೇಡ್ ಗ್ರಾಮಕ್ಕೆ ಶಾಶ್ವತ ನೀರಿನ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಜಲ ಜೀವನ ಮೀಷನ್ ಯೋಜನೆ ಅನುಷ್ಠಾನ ಮಾಡಲಾಗುತ್ತಿದೆ. ಗ್ರಾಮಸ್ಥರ ಬೇಡಿಕೆಯಂತೆ 2008ರಿಂದ ಇಲ್ಲಿವರೆಗೆ ಸುಮಾರು 12 ಕೋಟಿ ಅಭಿವೃದ್ಧಿ ಕಾಮಗಾರಿ ನಡೆಸಲಾಗಿದ್ದು, ಮುಂದೆಯೂ ಮತ್ತಷ್ಟು ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲಾಗುವುದು. ಗ್ರಾಮದಲ್ಲಿ 2 ಬ್ಯಾರೇಜ್ ನಿರ್ಮಾಣ ಮಾಡಲಾಗಿದ್ದು, ಶೀಘ್ರವೇ ಬ್ಯಾರೇಜ್ ದುರುಸ್ತಿ ಮಾಡಿಸಿ ನೀರು ನಿಲ್ಲುವಂತೆ ಮಾಡುತ್ತೇನೆ ಎಂದು ಭರವಸೆ ನೀಡಿದರು.
ಗ್ರಾಪಂ ಅಧ್ಯಕ್ಷೆ ಸತ್ಯಕಲಾ ರಕ್ಷಾಳೆ, ಬಿದರಿ ವೇದಿಕೆಯ ಅಧ್ಯಕ್ಷೆ ರೇಖಾ ಸೌದಿ, ಕಾರ್ಯದರ್ಶಿ ಅಪ್ಪಾರಾವ ಸೌದಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಸಿದ್ರಾಮ ಸಿಂಧೆ, ಗುತ್ತಿಗೆದಾರ ಗುರುನಾಥ ಕೊಳ್ಳೂರ್, ಕ.ಕ ಕಲಾವಿದರ ಒಕ್ಕೂಟದ ಅಧ್ಯಕ್ಷ ವಿಜಯಕುಮಾರ ಸೋನಾರೆ, ಜನಪದ ಬುಡಕಟ್ಟು ಕಲಾ ಪರಿಷತ್ ಕಾರ್ಯದರ್ಶಿ ಡಾ| ರಾಜಕುಮಾರ ಹೆಬ್ಟಾಳೆ, ಕರುನಾಡು ವೇದಿಕೆ ಗೌರವಾಧ್ಯಕ್ಷ ಡಾ| ಸಂಜೀವಕುಮಾರ್ ಅತಿವಾಳೆ, ತಹಶೀಲ್ದಾರ್ ರಮೇಶ ಪೆದ್ದೆ, ತಾಪಂ ಇಒ ಫಜಲ್, ಮಾಣಿಕರಾವ ಪಾಟೀಲ, ಬಿಇಒ ಎಚ್. ಎಸ್. ನಗನೂರ್, ಶಿವಕುಮಾರ ಘಾಟೆ, ಗ್ರಾಮದ ಹಿರಿಯರಾದ ಪಂಡಿತರಾವ್ ಪಾಟೀಲ, ಶಿವಾಜಿರಾವ್ ಪಾಟೀಕ ಇದ್ದರು. ಈ ವೇಳೆ ಹಿರಿಯ ಸಾಧಕರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮಕ್ಕೂ ಮುನ್ನ ಗ್ರಾಮದಲ್ಲಿ ನಡೆದ ಗ್ರಾಮೀಣ ಸೊಗಡಿನ ಭವ್ಯ ಮೆರವಣಿಗೆಗೆ ಪ್ರಾಧಿಕಾರದ ಅಧ್ಯಕ್ಷ ಡಾ| ಸಿ. ಸೋಮಶೇಖರ ಚಾಲನೆ ನೀಡಿದರು. ವಿವಿಧ ಕಲಾ ತಂಡಗಳ ಕಲೆ ಮೆರಗು ಹೆಚ್ಚಿಸಿತು.