ಅಫಜಲಪುರ: ತಾಲೂಕಿನಲ್ಲಿ ನಿರಂತರ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಹೊಲ ಗದ್ದೆಗಳಲ್ಲಿ ಸಾಕಷ್ಟು ಹುಲ್ಲು ಬೆಳೆದು ನಿಂತಿದೆ. ಹೀಗಾಗಿ ಬೆಳೆ ಯಾವುದು, ಹುಲ್ಲು ಯಾವುದೆಂದು ತಿಳಿಯದಂತಾಗಿದೆ. ಅಲ್ಲದೇ ಕೂಲಿ ಆಳುಗಳ ಸಮಸ್ಯೆ ಹೆಚ್ಚಿದ್ದು, ರೈತರು ಹುಲ್ಲು ತೆಗೆಯಲು ಕಳೆನಾಶಕಗಳ ಮೊರೆ ಹೋಗುತ್ತಿದ್ದಾರೆ.
ತಾಲೂಕಿನಾದ್ಯಂತ ಮುಂಗಾರು ಬಿತ್ತನೆ ಆಗಿದ್ದು, ಮಳೆ ಉತ್ತಮ ರೀತಿಯಲ್ಲಿ ಆಗುತ್ತಿರುವುದರಿಂದ ಬೆಳೆ ಜತೆ ಹುಲ್ಲು ಬೆಳೆಯುತ್ತಿದೆ. ಈ ಹುಲ್ಲು ತೆಗೆಯಲು ಹರಸಾಹಸ ಪಡುವಂತಾಗಿದೆ.
ಕೂಲಿ ಕಾರ್ಮಿಕರ ಸಮಸ್ಯೆ: ಬೆಳೆಗಿಂತ ಹುಲ್ಲೇ ಹೆಚ್ಚಾಗಿ ಬೆಳೆಯುತ್ತಿರುವುದರಿಂದ ರೈತರು ಚಿಂತೆಗೀಡಾಗಿದ್ದಾರೆ. ಇಂತಹ ಸಮಯದಲ್ಲಿ ಕಡಿಮೆ ಕೂಲಿಗೆ ಆಳುಗಳು ಸಿಗುತ್ತಿಲ್ಲ. ಹೀಗಾಗಿ ಕಳೆನಾಶಕದ ಮೊರೆ ಹೋಗುತ್ತಿದ್ದಾರೆ. ಆದರೆ ಭವಿಷ್ಯದಲ್ಲಿ ಹೆಚ್ಚು ಕಳೆ ನಾಶಕಗಳ ಬಳಕೆಯಿಂದ ಭೂಮಿ ತನ್ನ ಫಲವತ್ತತೆ ಕಳೆದುಕೊಳ್ಳುತ್ತದೆ ಎನ್ನುವ ಆತಂಕವೂ ರೈತರಲ್ಲಿದೆ.
ಕೂಲಿಗಳೇ ಸಿಗ್ತಿಲ್ಲ: ದಿನಾ ಓಣಿ ಓಣಿ ತಿರಗ್ಯಾಡಿದ್ರು ಒಬ್ರು ಕೆಲಸಕ್ ಬರಾಂಗಿಲ್ಲ. ಹಿಂಗಾಗಿ ಹೊಲದಾಗ್ ಹೋಗಿ ನಿಂತ್ರ ಬೆಳಿಗಿಂತ ಹುಲ್ಲೆ ಹೆಚ್ ಕಾಣಲಿಕ್ಕತ್ತಾದ್ರಿ. ಹಿಂಗಾಗಿ ಎಣ್ಣಿ ಹೊಡಿಲಿಕತ್ತಿವ್ರಿ ಎನ್ನುತ್ತಾರೆ ರೈತರಾದ ಮರೆಪ್ಪ ಸಿಂಗೆ, ಚಂದ್ರಕಾಂತ ಕಲ್ಲೂರ, ಮಡಿವಾಳ ಗಂಗಾ ಹಾಗೂ ಇನ್ನಿತರರು.
-ಮಲ್ಲಿಕಾರ್ಜುನ ಹಿರೇಮಠ