Advertisement

ಬಗೆಹರಿಯಬೇಕಿದೆ “ಡೀಮ್ಡ್ ‘, ನಿವೇಶನ ರಹಿತರ ಸಮಸ್ಯೆ

12:27 PM Sep 16, 2022 | Team Udayavani |

ಹಳ್ಳಿಹೊಳೆ: ಗ್ರಾಮದ 200 ಕುಟುಂಬಗಳು ಡೀಮ್ಡ್ ಫಾರೆಸ್ಟ್‌ ಸಮಸ್ಯೆಯಿಂದ ಹೈರಾಣಾಗಿದ್ದರೆ, 30ಕ್ಕೂ ಅಧಿಕ ಮಂದಿ ನಿವೇಶನ ರಹಿತರಿದ್ದಾರೆ. ಗ್ರಾಮೀಣ ರಸ್ತೆಗಳು ಅಭಿವೃದ್ಧಿ ನಿರೀಕ್ಷೆಯಲ್ಲಿವೆ. ಗ್ರಾಮದ ಬಹುಭಾಗ ಇನ್ನು ಸಹ ನೆಟ್‌ವರ್ಕ್‌ ಸಂಪರ್ಕದಿಂದ ವಂಚಿತವಾಗಿದೆ.

Advertisement

ಇದು ಸೆ. 17ರಂದು ಉಡುಪಿ ಜಿಲ್ಲಾಧಿಕಾರಿ ಕೂರ್ಮಾರಾವ್‌ ಎಂ. ಅವರು ವಾಸ್ತವ್ಯ ಹೂಡಲಿರುವ ಹಳ್ಳಿಹೊಳೆ ಗ್ರಾಮದ ಜನರ ಪ್ರಮುಖ ಅಹವಾಲುಗಳು.

200 ಕುಟುಂಬಕ್ಕೆ ಸಮಸ್ಯೆ

ಹೈಕೋರ್ಟ್‌ ಡೀಮ್ಡ್ ಫಾರೆಸ್ಟ್‌ ಅನ್ನುವ ಪದವೇ ಅಪ್ರಯೋಜಕ ಎಂದರೂ, ಹಳ್ಳಿಹೊಳೆ ಗ್ರಾಮದ 200 ಕುಟುಂಬಗಳಿಗೆ ಮಾತ್ರ ಡೀಮ್ಡ್ ಫಾರೆಸ್ಟ್‌ ಎನ್ನುವ ಸಮಸ್ಯೆಯಿಂದ ಮಾತ್ರ ಈವರೆಗೆ ಮುಕ್ತಿ ಸಿಕ್ಕಿಲ್ಲ. ಈ ಕುಟುಂಬಗಳಿಗೆ ಪಡಿತರವೊಂದು ಹೊರತುಪಡಿಸಿ, 20-30 ವರ್ಷಗಳಿಂದ ವಾಸಿಸುತ್ತಿದ್ದರೂ, ಬೇರೆ ಯಾವುದೇ ಸರಕಾರಿ ಸೌಲಭ್ಯಗಳು ಸಿಗುತ್ತಿಲ್ಲ. ಕಿಸಾನ್‌ ಸಮ್ಮಾನ್‌, ಬ್ಯಾಂಕ್‌ ಸಾಲ ಸೌಲಭ್ಯಗಳಿಂದ ವಂಚಿತರಾಗಿದ್ದಾರೆ.

Advertisement

ನಿವೇಶನ ರಹಿತರು

ಗ್ರಾಮದಲ್ಲಿ 638 ಕುಟುಂಬಗಳಿದ್ದು, ಇನ್ನು 30 ಮಂದಿ ನಿವೇಶನ ರಹಿತರಿದ್ದು, ಅವರಿಗೆ ಜಾಗ ಕೊಡಲು ಸರಕಾರಿ ಜಮೀನೇ ಇಲ್ಲದ ಸ್ಥಿತಿಯಿದೆ. ಅನೇಕ ವರ್ಷಗಳಿಂದ ಈ ಕುಟುಂಬಗಳು ನಿವೇಶನಕ್ಕಾಗಿ ಅರ್ಜಿ ಸಲ್ಲಿಸುತ್ತಲೇ ಇದ್ದಾರೆ.

ಗ್ರಾಮೀಣ ರಸ್ತೆಗಳ ಪಾಡು

ಗ್ರಾಮದ ಇನ್ನೊಂದು ಪ್ರಮುಖ ಸಮಸ್ಯೆಯೆಂದರೆ ಗ್ರಾಮೀಣ ರಸ್ತೆಗಳ ಪಾಡು. ಈಗಾಗಲೇ ಸಂಸದ ಬಿ.ವೈ. ರಾಘವೇಂದ್ರ ಹಾಗೂ ಶಾಸಕ ಬಿ.ಎಂ. ಸುಕುಮಾರ್‌ ಶೆಟ್ಟಿ ಮುತುವರ್ಜಿಯಲ್ಲಿ ಗ್ರಾಮದ ಸಾಕಷ್ಟು ರಸ್ತೆ ಅಭಿವೃದ್ಧಿಯಾಗಿದ್ದರೂ, ಇನ್ನು ಕೆಲವು ಪ್ರಮುಖ ರಸ್ತೆಗಳ ಅಭಿವೃದ್ಧಿಗೆ ಡೀಮ್ಡ್ ಫಾರೆಸ್ಟ್‌ ನಿಯಮ ಅಡ್ಡಿಯಾಗಿದೆ. ಪ್ರಮುಖವಾಗಿ ವಾಟೆಬಚ್ಚಲು – ಶೆಟ್ಟಿಪಾಲು ರಸ್ತೆ ಅಭಿವೃದ್ಧಿ, ಕಮಲ ಶಿಲೆ – ಹಳ್ಳಿಹೊಳೆ -ಪಾರೆ ಮುಖ್ಯ ರಸ್ತೆ ವಿಸ್ತರಣೆಗೂ ಅರಣ್ಯ ಇಲಾಖೆಯೇ ತೊಡಕಾಗಿ ಪರಿಣಮಿಸಿದೆ.

ದೇವರಬಾಳು ರಸ್ತೆ

ಬಾಚುಗುಳಿ – ದೇವರಬಾಳು ರಸ್ತೆಯು ಹದಗೆಟ್ಟು ಅನೇಕ ವರ್ಷಗಳೇ ಕಳೆದಿವೆ. 8 ಕಿ.ಮೀ. ದೂರದ ಈ ರಸ್ತೆಯ ಸುಮಾರು 1 ಕಿ.ಮೀ.ದೂರದವರೆಗೆ ಮಾತ್ರ ಅಭಿವೃದ್ಧಿಯಾಗಿದೆ. ಬಾಕಿ ಉಳಿದ ರಸ್ತೆಯಲ್ಲಿ ಮಳೆಗಾಲದಲ್ಲಿ ಹೊಂಡ-ಗುಂಡಿಮಯವಾಗಿದ್ದು, ಸಂಚರಿಸಲು ಸಾಧ್ಯವಿಲ್ಲದ ಪರಿಸ್ಥಿತಿಯಿದೆ. ಅನೇಕ ಮಂದಿ ದ್ವಿಚಕ್ರ ವಾಹನ ಸವಾರರು ಬಿದ್ದ ನಿದರ್ಶನವೂ ಇದೆ. ಸುಮಾರು 50 ಕ್ಕೂ ಮಿಕ್ಕಿ ಕುಟುಂಬಗಳು ಈ ರಸ್ತೆಯನ್ನು ಆಶ್ರಯಿಸಿವೆ. ದೇವರಬಾಳು ರಸ್ತೆ ಹಾಗೂ ವಾಟೆಬಚ್ಚಲು ರಸ್ತೆ ಆದಷ್ಟು ಬೇಗ ಅಭಿವೃದ್ಧಿಯಾಗಬೇಕಿದೆ. ವಾಟೆಬಚ್ಚಲು- ಕಟ್ಟಿನಮನೆಯಲ್ಲಿ ತಾತ್ಕಾಲಿಕ ಮರದ ಕಿರು ಸೇತುವೆ ಮಳೆಗೆ ಕೊಚ್ಚಿಕೊಂಡು ಹೋಗಿದ್ದು, ಕಾಲು ಸಂಕ ಬೇಡಿಕೆಯಿದೆ ಎನ್ನುವುದಾಗಿ ಗ್ರಾ.ಪಂ. ಸದಸ್ಯ ಪ್ರಭಾಕರ ನಾಯ್ಕ ಒತ್ತಾಯಿಸಿದ್ದಾರೆ.

ಪ್ರೌಢಶಾಲೆ ಬೇಡಿಕೆ

ಹಳ್ಳಿಹೊಳೆ ಗ್ರಾಮದ ದೇವರಬಾಳು, ವಾಟೆಬಚ್ಚಲು 2 ಕಿ.ಪ್ರಾ. ಶಾಲೆ, ಹಳ್ಳಿಹೊಳೆ ಶೆಟ್ಟಿಪಾಲು, ಚಕ್ರಾ ಮೈದಾನ, ಹೊಸಬಾಳು, ಇರಿಗೆಯಲ್ಲಿ 4 ಹಿ.ಪ್ರಾ. ಶಾಲೆಗಳು ಸೇರಿ ಒಟ್ಟು 6 ಶಾಲೆಗಳಿವೆ. ದೇವರಬಾಳು, ಕಟ್ಟಿನಾಡಿ, ಕಬ್ಬಿನಾಲೆ, ಇರಿಗೆ ಕಲ್ಸಂಕ, ವಾಟೆಬಚ್ಚಲುವಿನಿಂದ ಸರಕಾರಿ ಪ್ರೌಢಶಾಲೆಗೆ ಹೋಗಬೇಕಾದರೆ ಸುಮಾರು 20 ಕಿ.ಮೀ. ದೂರದ ಸಿದ್ದಾಪುರಕ್ಕೆ ಬರಬೇಕು. 5 ಕಿ.ಮೀ. ದೂರದ ಕಮಶಿಲೆಯಲ್ಲಿ ಅನುದಾನಿತ ಪ್ರೌಢಶಾಲೆಯೊಂದಿದೆ. ಕಳೆದ 10 ವರ್ಷಗಳಲ್ಲಿ ಈವರೆಗೆ ಕನಿಷ್ಠವೆಂದರೂ 100ಕ್ಕೂ ಹೆಚ್ಚು ಮಂದಿ ಅನಿವಾರ್ಯವಾಗಿ ಪ್ರಾಥಮಿಕ ಶಾಲೆಗೆ ಶಿಕ್ಷಣವನ್ನು ಮೊಟಕುಗೊಳಿಸಿದ್ದಾರೆ.

ಉದಯವಾಣಿ ವರದಿ

ಕಳೆದ ವರ್ಷ “ಉದಯವಾಣಿ’ಯು ಗ್ರಾಮಭಾರತ ಸರಣಿಯಲ್ಲಿ ಹಳ್ಳಿಹೊಳೆ ಗ್ರಾಮದ ಸಮಸ್ಯೆಗಳ ಕುರಿತಂತೆ ಸಮಗ್ರ ವರದಿ ಪ್ರಕಟಿಸಿ, ಗಮನಸೆಳೆದಿತ್ತು. ಆ ಬಳಿಕ ಕಬ್ಬಿನಾಲೆಗೆ ಸೇತುವೆ, ಖಾಯಂ ಗ್ರಾಮಕರಣಿಕರು, ಬಸ್‌ ಸೌಕರ್ಯ, ಒಂದು ಕಡೆ ಟವರ್‌ ಮಂಜೂರಾಗಿದೆ. ಎರಡು ಕಡೆ ರಸ್ತೆ ಅಭಿವೃದ್ಧಿಗೆ ಅನುದಾನ ಮಂಜೂರಾಗಿದೆ.

ನೆಟ್‌ವರ್ಕ್‌ ಸಮಸ್ಯೆ

ಹಳ್ಳಿಹೊಳೆ ಗ್ರಾಮದ ಇರಿಗೆ ಕಲ್ಸಂಕ, ಕಬ್ಬಿನಾಲೆ, ದೇವರಬಾಳು, ಕಟ್ಟಿನಾಡಿ, ರಾಮನಹಕ್ಲು, ಕಾರೇಬೈಲು ಭಾಗದಲ್ಲಿ ಎಲ್ಲಿಯೂ ಸಹ ಸರಿಯಾದ ನೆಟ್‌ವರ್ಕ್‌ ಇಲ್ಲ. ನೆಟ್‌ವರ್ಕ್‌ ಇರುವ ಕಡೆಗಳಲ್ಲಿಯೂ ವಿದ್ಯುತ್‌ ಕೈಕೊಟ್ಟರೆ ಅಲ್ಲಿಗೂ ನೆಟ್‌ ವರ್ಕ್‌ ಇರಲ್ಲ.

ಅನೇಕ ಬೇಡಿಕೆ: ಜಿಲ್ಲಾಧಿಕಾರಿಗಳು ಗ್ರಾಮಕ್ಕೆ ಬರುತ್ತಿದ್ದು, ಇಲ್ಲಿನ ಡೀಮ್ಡ್ ಫಾರೆಸ್ಟ್‌, ನಿವೇಶನ ರಹಿತರ ಸಮಸ್ಯೆ, ರಸ್ತೆ ಅಭಿವೃದ್ಧಿ, ನೆಟ್‌ವರ್ಕ್‌ ಸಮಸ್ಯೆ ಕುರಿತಂತೆ ಅವರಿಗೆ ಮನವಿ ಸಲ್ಲಿಸಲಾಗುವುದು. ಮುಖ್ಯವಾಗಿ ಡೀಮ್ಡ್ ಫಾರೆಸ್ಟ್‌ ಸಮಸ್ಯೆ ಇತ್ಯರ್ಥಗೊಳ್ಳಬೇಕಿದೆ. –ಪ್ರದೀಪ್‌ ಕೆ., ಅಧ್ಯಕ್ಷರು, ಹಳ್ಳಿಹೊಳೆ ಗ್ರಾ.ಪಂ., ಮಂಜುನಾಥ ಶೆಟ್ಟಿ, ಉಪಾಧ್ಯಕ್ಷರು

-ಪ್ರಶಾಂತ್‌ ಪಾದೆ

 

Advertisement

Udayavani is now on Telegram. Click here to join our channel and stay updated with the latest news.

Next