ಬೆಳಗಾವಿ: ದಕ್ಷಿಣ ಕನ್ನಡ ಜಿಲ್ಲಾ ವ್ಯಾಪ್ತಿಯ ಪಟ್ಟಣಗಳಲ್ಲಿ ಭೂ ಪರಿ ವರ್ತನೆ ಸಂಬಂಧಿಸಿದ ಸಮಸ್ಯೆಯನ್ನು ಸರಿಪಡಿಸ ಲಾಗುವುದು ಎಂದು ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜ ಹೇಳಿದರು.
ಗಮನ ಸೆಳೆಯುವ ಸೂಚನೆಯಡಿ ಮೂಡುಬಿದಿರೆ ಶಾಸಕ ಉಮಾನಾಥ್ ಎ. ಕೋಟ್ಯಾನ್ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಮಹಾನಗರ ಯೋಜನೆಯ ನಕ್ಷೆ ಸಿದ್ಧವಾಗುತ್ತಿದೆ, ಹೀಗಿ ಭೂ ಪರಿವರ್ತನೆ ಪ್ರಕ್ರಿಯೆಯಲ್ಲಿ ಸ್ವಲ್ಪ ಸಮಸ್ಯೆಯಾಗಿದೆ. ನಕ್ಷೆ ಸಿದ್ಧಪಡಿಸುವ ಕಾರ್ಯ ಪೂರ್ಣಗೊಂಡ ಬಳಿಕ ಭೂ ಪರಿವರ್ತನೆ ಕಾರ್ಯ ಸರಾಗವಾಗಲಿದೆ ಎಂದರು.
ಉಮಾನಾಥ ಕೋಟ್ಯಾನ್ ಮಾತನಾಡಿ, ದ.ಕ. ಜಿಲ್ಲೆಯ ಮೂಡುಬಿದರೆ, ಬಂಟ್ವಾಳ, ಸುಳ್ಯ, ಬೆಳ್ತಂಗಡಿ, ವಿಟ್ಲ ಮೊದಲಾದ ಕಡೆಗಳಲ್ಲಿ ಭೂ ಪರಿವರ್ತನೆ ಸಾಧ್ಯವಾಗುತ್ತಿಲ್ಲ. ಅದಕ್ಕೆ ಬೇಕಾದ ನಿರಾಪೇಕ್ಷಣ ಪತ್ರವೂ ಸಿಗುತ್ತಿಲ್ಲ. ಇದರಿಂದ ಅಭಿವೃದ್ಧಿ ಕಾರ್ಯವೂ ಸ್ಥಗಿತಗೊಂಡಿದೆ ಹಾಗೂ ಭೂಮಿ ಪರಭಾರೆಯೂ ಕಷ್ಟವಾಗಿ ಜನರು ತೀವ್ರ ಸಂಕಷ್ಟ ಎದುರಿಸುತ್ತಿದ್ದಾರೆ.
ಇದನ್ನೂ ಓದಿ:ಪ್ರವಾಹ ಪರಿಹಾರ ನೀಡುವಲ್ಲಿ ಸರ್ಕಾರ ವಿಫಲ: ಸಿದ್ದರಾಮಯ್ಯ
ಮಹಾನಗರ ಯೋಜನೆಗೆ ಆಯ್ಕೆಯಾಗದ ಪಟ್ಟಣಗಳಲ್ಲಿಯಾದರೂ ಭೂ ಪರಿವರ್ತನೆಗೆ ಅವಕಾಶ ನೀಡಬೇಕು. ಮಹಾನಗರ ಯೋಜನೆಗೆ ಆಯ್ಕೆಯಾದ ಬಳಿಕ ನಕ್ಷೆ ಸಿದ್ಧಪಡಿಸುವುದು ಸಹಿತ ಈ ಪ್ರಕ್ರಿಯೆಗೆ ಎರಡು ಮೂರು ವರ್ಷ ಬೇಕಾಗುತ್ತದೆ. ಇಷ್ಟು ವಿಳಂಬವಾದರೆ ಜನರಿಗೆ ಕಷ್ಟವಾಗುವ ಜತೆಗೆ ಸರಕಾರದ ಆದಾಯವೂ ಕುಂಠಿತವಾಗಲಿದೆ ಎಂದರು.
ಸಚಿವ ಬೈರತಿ ಬಸವರಾಜ ಪ್ರತಿಕ್ರಿಯಿಸಿ, ಈ ಬಗ್ಗೆ ಸ್ಥಳೀಯ ಶಾಸಕರೊಂದಿಗೆ ಈಗಾಗಲೇ ಸಭೆ ನಡೆಸಿದ್ದೇನೆ. ಇನ್ನೊಮ್ಮೆ ಸಭೆ ನಡೆಸಿ, ಚರ್ಚಿಸಲಾಗುವುದು ಎಂದು ಹೇಳಿದರು.