Advertisement

ಶುದ್ಧ ಕುಡಿಯುವ ನೀರಿನ ಸಮಸ್ಯೆ

09:14 AM May 21, 2020 | Suhan S |

ಧಾರವಾಡ: ನವಲಗುಂದ ತಾಲೂಕಿನ ಮೊರಬ, ಶಿರಕೋಳ ಗ್ರಾಪಂ ವ್ಯಾಪ್ತಿಯ ಮೊರಬ, ಶಿರಕೋಳ, ತಲೆಮೊರಬ, ಹಣಸಿ ಹಾಗೂ ಬ್ಯಾಲ್ಯಾಳ ಗ್ರಾಮಗಳಲ್ಲಿ ಉಂಟಾಗಿರುವ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸುವಂತೆ ಮಾಜಿ ಶಾಸಕ ಎನ್‌.ಎಚ್‌. ಕೋನರೆಡ್ಡಿ ನೇತೃತ್ವದ ನಿಯೋಗ ಬುಧವಾರ ಮನವಿ ಸಲ್ಲಿಸಿತು.

Advertisement

ನಗರದ ಡಿಸಿ ಕಚೇರಿಯಲ್ಲಿ ಡಿಸಿ ದೀಪಾ ಚೋಳನ್‌ ಹಾಗೂ ಜಿಪಂ ಸಿಇಒ ಡಾ|ಸತೀಶ ಅವರಿಗೆ ಪ್ರತ್ಯೇಕವಾಗಿ ಮನವಿ ಸಲ್ಲಿಸಿದ ನಿಯೋಗ ಮೊರಬ ಹಾಗೂ ಶಿರಕೋಳ ಗ್ರಾಮಗಳು ಅತೀ ದೊಡ್ಡ ಗ್ರಾಮಗಳಾಗಿವೆ. ತೆಲೆಮೊರಬ, ಹಣಸಿ, ಬ್ಯಾಲ್ಯಾಳ ಗ್ರಾಮಗಳಲ್ಲಿ ಶುದ್ಧ ಕುಡಿಯುವ ನೀರಿನ ಸಮಸ್ಯೆ ಎದುರಾಗಿದೆ. ಕೆರೆಗಳಲ್ಲಿ ನೀರಿನ ಸಂಗ್ರಹ ಅತ್ಯಲ್ಪ ಮಟ್ಟಕ್ಕೆ ಕುಸಿದಿದೆ. ಶಿರಕೋಳದಲ್ಲಿ ಕೇವಲ 8-10 ದಿನಗಳಿಗೆ ಮಾತ್ರ ನೀರು ಸಂಗ್ರಹ ಇದ್ದು, ಅದು ತಳಮಟ್ಟಕ್ಕೆ ತಲುಪಿದೆ. ಸಾರ್ವಜನಿಕರು ನೀರು ಕುಡಿದರೆ ಹೊಟ್ಟೆನೋವು, ಇತರೆ ಕಾಯಿಲೆಗಳು ಹರಡುತ್ತಿವೆ ಎಂದು ದೂರಲಾಯಿತು.

ಮೊರಬ ಗ್ರಾಮದವರು ಗುಮ್ಮಗೋಳ ಗ್ರಾಮದಿಂದ ಶುದ್ಧ ಕುಡಿಯುವ ನೀರು ತಂದು ಕುಡಿಯುತ್ತಿದ್ದಾರೆ. ಹೀಗಾಗಿ ಒಂದು ಕಡೆ ಕೋವಿಡ್ ತಡೆಯಲು ಸಮಸ್ಯೆ ಎದುರಿಸುತ್ತಿದ್ದರೆ ಇನ್ನೊಂದು ಕಡೆ ಕುಡಿಯುವ ನೀರಿನ ಸಮಸ್ಯೆ ಎದುರಿಸುವಂತಾಗಿದೆ. ಗ್ರಾಮದ ಯುವಕರು ಪ್ರತಿ ದಿನ ಸಾಮಾಜಿಕ ಜಾಲತಾಣ ಮೂಲಕ ಗ್ರಾಪಂ ಮತ್ತು ಸರ್ಕಾರದ ಬಗ್ಗೆ ಟೀಕೆ ಟಿಪ್ಪಣೆ ಮಾಡುತ್ತಿದ್ದಾರೆ. ತಕ್ಷಣ ಈ ವಿಚಾರವಾಗಿ ಕ್ರಮ ಕೈಗೊಳ್ಳಲು ಸಂಬಂಧಪಟ್ಟವರ ಸಭೆ ಕರೆದು ಕುಡಿಯುವ ನೀರು ಪೂರೈಸಲು ಆದೇಶಿಸಬೇಕೆಂದು ಮನವಿಯಲ್ಲಿ ಆಗ್ರಹಿಸಲಾಗಿದೆ.

ಮೊರಬ ಗ್ರಾಪಂ ಅಧ್ಯಕ್ಷೆ ಕಗದಾಳ, ಶಿರಕೋಳ ಗ್ರಾಪಂ ಅಧ್ಯಕ್ಷ ಪರಪ್ಪ ಗಾಣಿಗೇರ, ಹಿರಿಯರಾದ ಎಮ್‌.ಎಸ್‌. ರೋಣದ, ಅಡಿವೆಪ್ಪ ಗಾಣಿಗೇರ, ಸಂಗನಗೌಡ ಹಣಸಿ, ಚಂದ್ರು ಗಾಣಿಗೇರ, ಕುಮಾರ ಮಂಕಣಿ, ಗಿರೀಶ ಮಾಸ್ತಿ, ಕಲ್ಲಪ್ಪ ಬಸಿಡೋಣಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next