Advertisement

ಮೇಲ್ಸೇತುವೆ ಸಮಸ್ಯೆ ಪರಿಹಾರಕ್ಕೆ ಬಿಜೆಪಿ-ಜೆಡಿಎಸ್‌ ಧರಣಿ

01:40 PM Mar 21, 2017 | Team Udayavani |

ದಾವಣಗೆರೆ: ಅಶೋಕ ಚಿತ್ರಮಂದಿರದ ರೈಲ್ವೆ ಗೇಟ್‌ಗೆ ಮೇಲ್ಸೇತುವೆ ನಿರ್ಮಾಣ ವಿಳಂಬ ವಿರೋಧಿಸಿ ಸೋಮವಾರ ಜಿಲ್ಲಾ ಬಿಜೆಪಿ, ಜೆಡಿಎಸ್‌ ಕಾರ್ಯಕರ್ತರು ರೈಲ್ವೆ ಗೇಟ್‌ ಬಳಿ ಪ್ರತ್ಯೇಕವಾಗಿ ಧರಣಿ ನಡೆಸಿದರು. ಕಳೆದ 30-40 ವರ್ಷದಿಂದ ಅಶೋಕ ಚಿತ್ರಮಂದಿರದ ರೈಲ್ವೆ ಗೇಟ್‌ ದಾವಣಗೆರೆಯ ಜ್ವಲಂತ ಸಮಸ್ಯೆಯಾಗಿದೆ.

Advertisement

ಪ್ರತಿ ನಿತ್ಯ 45ಕ್ಕೂ ಹೆಚ್ಚು ರೈಲು ಸಂಚರಿಸುತ್ತವೆ. ಈ ವೇಳೆ ಏನಿಲ್ಲವೆಂದರೂ 30 ನಿಮಿಷ ಟ್ರಾಫಿಕ್‌ ಜಾಮ್‌ ಆಗುತ್ತದೆ. ದ್ವಿಚಕ್ರ, ಆಟೋರಿಕ್ಷಾ ಚಾಲಕರು, ಪ್ರಯಾಣಿಕರು, ಸಾರ್ವಜನಿಕರು ಇನ್ನಿಲ್ಲದ ತೊಂದರೆ ಅನುಭವಿಸಲೇಬೇಕು. ಆದರೆ, ರೈಲ್ವೆ ಗೇಟ್‌ ಸಮಸ್ಯೆ ನಿವಾರಿಸುವ ಹಿನ್ನೆಲೆಯಲ್ಲಿ ಕಳೆದ 3 ವರ್ಷದ ಹಿಂದೆ ಮೇಲ್ಸೇತುವೆಗಾಗಿ 35 ಕೋಟಿ ಅನುದಾನ ಬಿಡುಗಡೆಯಾಗಿದ್ದರೂ ಈ ಕ್ಷಣಕ್ಕೆ  ಕಾಮಗಾರಿ ಪ್ರಾರಂಭವಾಗುತ್ತಿಲ್ಲ.

ಅನೇಕ ಬಾರಿ ಜಿಲ್ಲಾಡಳಿತದ ಗಮನಕ್ಕೆ ತಂದರೂ, ಯಾವುದೇ ಪ್ರಯೋಜನ ವಾಗಿಲ್ಲ ಎಂದು ಉಭಯ ಪಕ್ಷಗಳ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದರು. ಜಿಲ್ಲಾ ಬಿಜೆಪಿ: ರೈಲ್ವೆಗೇಟ್‌ ಬಳಿಯೇ ಧರಣಿ ನಡೆಸಿದ ಭಾರತೀಯ ಜನತಾ ಪಕ್ಷದ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದ  ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ, ಅಶೋಕ ಚಿತ್ರಮಂದಿರದ ರೈಲ್ವೆ ಗೇಟ್‌ ಸಮಸ್ಯೆ ನಿನ್ನೆ ಮೊನ್ನೆಯದ್ದಲ್ಲ.

ಹಲವು ದಶಕಗಳದ್ದು. ಸಂಸದ ಜಿ.ಎಂ. ಸಿದ್ದೇಶ್ವರ್‌ ಅವರು ಮೇಲ್ಸೇತುವೆ ನಿರ್ಮಾಣಕ್ಕೆಂದು ಕೇಂದ್ರದಿಂದ 35 ಕೋಟಿ ಅನುದಾನ ಬಿಡುಗಡೆ ಮಾಡಿಸಿ, 3 ವರ್ಷ ಕಳೆದರೂ ಕಾಮಗಾರಿ ಪ್ರಾರಂಭವಾಗದೇ ಇರಲು ಜಿಲ್ಲಾಡಳಿತದ ಇಚ್ಛಾಶಕ್ತಿ ಕೊರತೆಯೇ ಕಾರಣ. ಯಾವುದೇ ಪಕ್ಷವೇ ಅಧಿಕಾರದಲ್ಲಿ ಇರಲಿ ಆ ಪಕ್ಷದ ಗುಲಾಮನಂತೆ ಜಿಲ್ಲಾಡಳಿತ ಕೆಲಸ ಮಾಡುವುದು ಸರಿಯಲ್ಲ. ನಿಸ್ಪಕ್ಷಪಾತ, ಪಾರದರ್ಶಿಕವಾಗಿ ಕೆಲಸ ಮಾಡಬೇಕು. 

ಆದರೆ, ದಾವಣಗೆರೆ ಜಿಲ್ಲೆಯಲ್ಲಿ ಅಂತಹ ವಾತಾವರಣ ಇಲ್ಲ. ರೈಲ್ವೆ ಮೇಲ್ಸೇತುವೆ ಕಾಮಗಾರಿಗೆ ವಿನಾ ಕಾರಣ ವಿಳಂಬ ಮಾಡಲಾಗುತ್ತಿದೆ. ಜಿಲ್ಲಾಡಳಿತ ನಿಗದಿತ ಸಮಯದಲ್ಲಿ ಸಭೆ ನಡೆಸಿ, ಕಾಮಗಾರಿ ಪ್ರಾರಂಭಿಸಬೇಕು. ಇಲ್ಲದಿದ್ದಲ್ಲಿ, ಹೋರಾಟ ತೀವ್ರಗೊಳಿಸಲಾಗುವುದು ಎಂದು ಎಚ್ಚರಿಸಿದರು. ಜಿಲ್ಲಾ ಅಧ್ಯಕ್ಷ ಯಶವಂತರಾವ್‌ ಜಾಧವ್‌ ಮಾತನಾಡಿ, ಬಿಜೆಪಿಯವರು ರಾಜಕೀಯ ಪ್ರತಿಷ್ಠೆಗಾಗಿ ಹೋರಾಟ ಮಾಡುತ್ತಿಲ್ಲ. 

Advertisement

ಸಾರ್ವಜನಿಕರಿಗೆ ಪ್ರತಿನಿತ್ಯ ಆಗುತ್ತಿರುವ ತೊಂದರೆ ನಿವಾರಣೆಗೆ ಒತ್ತಾಯಿಸಿ ಹೋರಾಟ ಮಾಡುತ್ತಿದ್ದೇವೆ. ಜೆಡಿಎಸ್‌ನವರು ಹೋರಾಟ ನಡೆಸಿದ ಸಂದರ್ಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು, ಮೇಲ್ಸೆತುವೆ ಕಾಮಗಾರಿಗೆ ಅಭ್ಯಂತರ ಇಲ್ಲ. ಬೇಕಾದಲ್ಲಿ ತಮ್ಮ ಜಾಗ ಕೊಡಲಿಕ್ಕೂ ಸಿದ್ಧ ಎಂದಿದ್ದಾರೆ. ರೈಲ್ವೆ ಮೇಲ್ಸೇತುವೆಗೂ ಅವರ ಜಾಗಕ್ಕೆ ಸಂಬಂಧವೇ ಇಲ್ಲವೆಂದರೆ ದಾನಶೂರ ವೀರಕರ್ಣನಂತೆ ಜಾಗ ಬಿಟ್ಟುಕೊಡುವುದಾಗಿ ಹೇಳಿರುವುದು ಸರಿಯಲ್ಲ.

ಇಂತಹ ಕುತಂತ್ರದ ನಾಟಕ ಆಡುವುದನ್ನು ನಿಲ್ಲಿಸಬೇಕು. ನಗರದ ಎಲ್ಲಾ ಕಡೆ ಅವರ ಮನೆತನದವರ ಹೆಸರು ಇಟ್ಟುಕೊಂಡಿದ್ದಾರೆ. ಪುಣ್ಯಕ್ಕೆ ಸ್ಮಶಾನವೊಂದು ಬಿಟ್ಟಿದ್ದಾರೆ ಎಂದರು. ಎಪಿಎಂಸಿ ಮೇಲ್ಸೇತುವೆ, ಅಶೋಕ ಚಿತ್ರಮಂದಿರ ಬಳಿ ಮೇಲ್ಸೇತುವೆಗೆ ಒಂದೇ ದಿನ ಮಂಜೂರಾತಿ ಸಿಕ್ಕಿದೆ. ಎಪಿಎಂಸಿ ಮೇಲ್ಸೇತುವೆ ಮುಗಿದಿದೆ.

ಆದರೆ, ಅಶೋಕ ಚಿತ್ರಮಂದಿರ ಮೇಲ್ಸೇತುವೆ ಕೆಲಸ ಪ್ರಾರಂಭವೇ ಆಗಿಲ್ಲ. ಇದಕ್ಕೆ ಕಾರಣ ಏನು ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ. ಜಿಲ್ಲಾಡಳಿತ ಯಾವ ಕಾರಣಕ್ಕೆ ಆಗುತ್ತಿಲ್ಲ. ಏನು, ಯಾವ ರೀತಿ, ಯಾರಿಂದ ಒತ್ತಡ ಇದೆ ಎಂಬುದನ್ನು ಸಾರ್ವಜನಿಕರ ಮುಂದೆಯೇ ತಿಳಿಸಬೇಕು ಎಂದು ಒತ್ತಾಯಿಸಿದರು.   

Advertisement

Udayavani is now on Telegram. Click here to join our channel and stay updated with the latest news.

Next