Advertisement

ಕೊರತೆ ನೀರಿನದ್ದಲ್ಲ-ಸಮಸ್ಯೆ ಕೊಳೆತ ನೀರಿನದ್ದು

04:32 PM Mar 22, 2017 | |

ವಾಡಿ: ತಿನ್ನುವ ಆಹಾರ ಹಳಸಿದರೆ ಅದು ಕಸ-ಮುಸುರೆ ಎನ್ನಿಸಿಕೊಳ್ಳುತ್ತದೆ. ಹಾಗೆಯೇ ಕುಡಿಯುವ ನೀರು ಹಳಸಿದರೆ ಕೊಳೆ ನೀರು ಎನ್ನಿಸಿಕೊಳ್ಳುತ್ತದೆ. ಇಂತಹ ಕಲುಷಿತ ಹೊಳೆ ನೀರು ಕುಡಿದ ಜನರ ದೇಹ ಅಕ್ಷರಶಃ ರೋಗದ ಗೂಡಾಗುತ್ತದೆ. ಭೀಮಾ ಮತ್ತು ಕಾಗಿಣಾ ನದಿಗಳ ಹರಿವಿನ ಭಾಗ್ಯ ಪಡೆದಿರುವ ಚಿತ್ತಾಪುರ ತಾಲೂಕಿನ ಜನಕ್ಕೆ ನೀರಿನ ಕೊರೆತೆಯಿಲ್ಲ.

Advertisement

ಆದರೆ ಕೊಳೆತ ನೀರಿನ ಸಮಸ್ಯೆಯಿಂದ ಮಾತ್ರ ಇವರು ಮುಕ್ತರಾಗಿಲ್ಲ. ತಲಾ ಒಂದು ಸಿಮೆಂಟ್‌ ಕಂಪನಿ ಹೊಂದಿರುವ ವಾಡಿ, ಶಹಾಬಾದ, ಚಿತ್ತಾಪುರ ನಗರಗಳು ಶುದ್ಧ ಗಾಳಿಯಿಂದ ವಂಚಿತಗೊಂಡು ಹಲವು ದಶಕಗಳೇ ಉರುಳಿವೆ. ಈಗ ಅಶುದ್ಧ ನೀರಿನ ಉರುಳು ಜನರ ಕೊರಳು ಸುತ್ತಿಕೊಂಡಿದೆ. 

ಭೀಮಾ ನದಿಯ ತಟದಲ್ಲಿರುವ ವಾಡಿ ಪಟ್ಟಣಕ್ಕೆ ಕಳೆದ ಮೂರ್‍ನಾಲ್ಕು ತಿಂಗಳಿಂದ ಹಸಿರುಪಾಚಿಯಿಂದ ಕೂಡಿದ ದುರ್ಗಂಧದ ನೀರು ಸರಬರಾಜು ಆಗುತ್ತಿದೆ. ಕೋಟ್ಯಂತರ ರೂ. ವೆಚ್ಚದ ನೀರು ಶುದ್ಧೀಕರಣ ಘಟಕ ಸ್ಥಾಪನೆಯಾಗಿದ್ದರೂ ಇಲ್ಲಿನ ಜನರು ಶುದ್ಧ ಕುಡಿಯುವ ನೀರಿಗಾಗಿ ದಿನವೂ ಪರಿತಪಿಸುತ್ತಿದ್ದಾರೆ. 

ಸನ್ನತಿ ಬ್ಯಾರೇಜ್‌ನಿಂದ ತಡೆಹಿಡಿಯಲಾದ ನಾಲ್ಕು ಮೀಟರ್‌ ಎತ್ತರದ ಭೀಮಾ ನದಿ ಹಿನ್ನೀರು, ಸುಮಾರು 20 ಕಿ.ಮೀ. ಅಂತರದ ಕುಂದನೂರಿನ ವರೆಗೂ ಹರಡಿ ನಿಂತಿದೆ. ಶಹಬಾದ ಬಳಿ ಕಾಗಿಣಾ ನದಿಗೆ ನಿರ್ಮಿಸಲಾದ ಬ್ಯಾರೇಜ್‌ನಿಂದ ಅತ್ಯಧಿಕ ಪ್ರಮಾಣ ನೀರು ಸಂಗ್ರಹಗೊಂಡಿದೆ.

ಇಂಗಳಗಿ ಸಮೀಪದ ಕಾಗಿಣಾ ನದಿಗೆ ಎಸಿಸಿ ಬ್ಯಾರೇಜ್‌ನಿಂದಲೂ ನೀರಿಗೆ ತಡೆಯೊಡ್ಡಲಾಗಿದೆ. ಕಳೆದ ವರ್ಷದ ಮಾರ್ಚ್‌ನಲ್ಲಿ ಉಂಟಾಗಿದ್ದ ಜಲಕ್ಷಾಮದ ಭೀಕರತೆ ಈ ವರ್ಷವಿಲ್ಲ. ಎಚ್ಚೆತ್ತುಕೊಂಡಿರುವ ಅಧಿಕಾರಿಗಳು, ಜನಪ್ರತಿನಿಧಿಧಿಗಳು ಎರಡೂ ನದಿಗಳಲ್ಲಿ ಸಾಕಷ್ಟು ನೀರು ಸಂಗ್ರಹಕ್ಕೆ ಕ್ರಮಕೈಗೊಂಡಿದ್ದರಿಂದ ಜನರು ನಿಟ್ಟುಸಿರು ಬಿಡುವಂತಾಗಿದೆ. 

Advertisement

ಆದರೆ, ಸಮಸ್ಯೆ ಇದಲ್ಲ. ಈ ಎರಡೂ ನದಿಗಳಲ್ಲಿ ಶೇಖರಣೆಯಾಗಿರುವ ಹಿನ್ನೀರು ಸಂಪೂರ್ಣ ಕೊಳೆಯಾಗಿದೆ. ಹಸಿರು, ಹಳದಿ ಬಣ್ಣಗಳಿಂದ ಮೈದಳೆದು ಹುಳು, ಹುಪ್ಪಡಿ ಹುಟ್ಟಿಕೊಂಡಿವೆ. ಶುದ್ಧೀಕರಣಗೊಳ್ಳದ ದುರ್ವಾಸನೆ ಭರಿತ ಕೊಳೆತ ಹಿನ್ನೀರನ್ನು ಕುಡಿದು ಜನರು ರೋಗಗಳಿಗೆ ತುತ್ತಾಗುತ್ತಿದ್ದಾರೆ. ಅಗತ್ಯ ರಸಾಯನಿಕಗಳ ಕೊರತೆಯಿಂದ ಬಳಲುತ್ತಿರುವ ಪಟ್ಟಣದ ನೀರು ಶುದ್ಧೀಕರಣ ಘಟಕ ಇದ್ದೂ ಇಲ್ಲದಂತಿದೆ.

ಸತ್ತ ಜಲಚರಗಳು ನಳದ ನೀರಿನೊಂದಿಗೆ ಮನೆಗಳಿಗೆ ಬರುತ್ತಿದ್ದರೂ ಯಾರೂ ಕೇಳದಂತಾಗಿದೆ ಎಂದು ಸಾರ್ವಜನಿಕರು ದೂರಿದ್ದಾರೆ. ಕುಡಿಯುವ ನೀರನ್ನು ಪುರಸಭೆ ಕೂಡಲೇ ಪರೀಕ್ಷೆಗೆ ಒಳಪಡಿಸದಿದ್ದರೆ ಸಾಂಕ್ರಾಮಿಕ ರೋಗ ಹರಡುವ ಸಾಧ್ಯತೆ ತಳ್ಳಿಹಾಕುವಂತಿಲ್ಲ. 

* ಮಡಿವಾಳಪ್ಪ ಹೇರೂರ 

Advertisement

Udayavani is now on Telegram. Click here to join our channel and stay updated with the latest news.

Next