Advertisement

ಬುಸ್ಸೇರದೊಡ್ಡಿಯಲ್ಲಿ ಸಮಸ್ಯೆಗಳ ಗುಡ್ಡೆ

04:07 PM Jan 16, 2018 | Team Udayavani |

ಹಟ್ಟಿ ಚಿನ್ನದ ಗಣಿ: ಗೌಡೂರು ಗ್ರಾಪಂ ವ್ಯಾಪ್ತಿಯ ಬುಸ್ಸೇರದೊಡ್ಡಿಯಲ್ಲಿ ಶುದ್ಧ ನೀರು, ಉತ್ತಮ ರಸ್ತೆ, ಚರಂಡಿ, ವಿದ್ಯುತ್‌ ಸೇರಿದಂತೆ ಹಲವು ಮೂಲ ಸೌಲಭ್ಯ ಮರೀಚಿಕೆಯಾಗಿದ್ದು, ನಿವಾಸಿಗಳು ಹಲವು ಸಮಸ್ಯೆ ಮಧ್ಯೆಯೇ ಜೀವನ ಸಾಗಿಸುವಂತಾಗಿದೆ.

Advertisement

ಬುಸ್ಸೇರದೊಡ್ಡಿಯಲ್ಲಿ 20ಕ್ಕೂ ಹೆಚ್ಚು ಗುಡಿಸಲುಗಳಿವೆ. ದೊಡ್ಡಿಗೆ ತೆರಳಲು ಉತ್ತಮ ರಸ್ತೆ ಇಲ್ಲ. ಮುಳ್ಳು, ಕಲ್ಲುಗಳಿರುವ ಕಚ್ಚಾ ರಸ್ತೆಯಲ್ಲೇ ದೊಡ್ಡಿಗೆ ಹೋಗಬೇಕು. ನಾರಾಯಣಪುರ ಬಲದಂಡೆ ಮುಖ್ಯ ನಾಲೆಯ 8ನೇ ವಿತರಣಾ ನಾಲೆ ವೀಕ್ಷಣಾ ರಸ್ತೆಯೇ ಇವರಿಗೆ ಉತ್ತಮ ರಸ್ತೆಯಾಗಿದೆ. ಆದರೂ 2 ಕಿ.ಮೀ. ತಗ್ಗುಗಳಿರುವ ರಸ್ತೆಯಲ್ಲಿ ಕಾಲ್ನಡಿಗೆಯಲ್ಲೇ ಸಾಗಬೇಕು. ದಿನ ನಿತ್ಯದ ವಸ್ತುಗಳ ಖರೀದಿಗೆ ಗುರುಗುಂಟಾಕ್ಕೆ ತೆರಳುತ್ತಾರೆ. 

ದೊಡ್ಡಿಯ ಜನರಿಗೆ ಶುದ್ಧ ಕುಡಿಯುವ ನೀರು ಸಿಗುವುದಿಲ್ಲ. ವರ್ತಿ ಅಥವಾ ಗೌಡೂರು ಹಳ್ಳದ ನೀರೇ ಜೀವಜಲವಾಗಿದೆ. ಗ್ರಾಮ ಪಂಚಾಯತಿಯಿಂದ ಕೊರೆಸಿದ ಕೈಪಂಪ್‌ನಲ್ಲಿ ನಿತ್ಯ 8-10 ಕೊಡಗಳಷ್ಟು ಮಾತ್ರ ನೀರು ಬರುತ್ತದೆ. ಹೀಗಾಗಿ ಕುಡಿಯುವ ನೀರಿಗಾಗಿ ಕಿ.ಮೀ.ಗಟ್ಟಲೇ ದೂರ ಅಲೆಯಬೇಕಾಗಿದೆ.

ದೊಡ್ಡಿಯ ಕೇವಲ 3 ಜನರಿಗೆ ಮಾತ್ರ ವಸತಿ ಭಾಗ್ಯಲಭಿಸಿದೆ. ಉಳಿದವರು ಗುಡಿಸಲಿನಲ್ಲೇ ವಾಸಿಸುತ್ತಿದ್ದಾರೆ. ಹಲವು ವರ್ಷಗಳ ಹಿಂದೆ ಇಲ್ಲಿನ ಎರಡು ಗುಡಿಸಲು ಸುಟ್ಟು ಎರಡು ಮಕ್ಕಳು ಸಜೀವ ದಹನಗೊಂಡ ಹೃದಯ ವಿದ್ರಾವಕ ಘಟನೆ ಜರುಗಿತ್ತು. ಶಾಸಕ ಮಾನಪ್ಪ ವಜ್ಜಲ್‌, ತಹಶೀಲ್ದಾರ್‌ ಸೇರಿದಂತೆ ಸ್ಥಳೀಯ ಜನಪ್ರತಿನಿಧಿಗಳು ಭೇಟಿ ನೀಡಿದರೆ
ಹೊರತು ಪರಿಹಾರ ಮಾತ್ರ ಲಭಿಸಲಿಲ್ಲ.

ದೊಡ್ಡಿಯಲ್ಲಿ ವಿದ್ಯುತ್‌ ಸಂಪರ್ಕ ಇಲ್ಲ. ಹೀಗಾಗಿ ಗುಡಿಸಲು ವಾಸಿಗಳಿಗೆ ಚಿಮಣಿ ದೀಪವೇ ಬೆಳಕಿಗೆ ಆಧಾರವಾಗಿವೆ.
ಸೀಮೆಎಣ್ಣೆ ಸಿಗದಿದ್ದರೆ ಕತ್ತಲಲ್ಲಿ ಕಾಲಕಳೆಯುವಂತಾಗುತ್ತದೆ. ದೊಡ್ಡಿಯಲ್ಲಿ ಅಳವಡಿಸಿದ್ದ ಏಕೈಕ ಸೌರವಿದ್ಯುತ್‌ ದೀಪವೂ ಕೆಟ್ಟು ಹೋಗಿದೆ. ಆದರೆ ಗ್ರಾಮ ಪಂಚಾಯತಿ ದುರಸ್ತಿಗೆ ಮುಂದಾಗಿಲ್ಲ.

Advertisement

ದೊಡ್ಡಿಯಲ್ಲಿ 1ರಿಂದ 7ನೇ ತರಗತಿವರೆಗೆ ಒಟ್ಟು 40 ಮಕ್ಕಳಿದ್ದು, ಸಮೀಪದ ಗುರುಗುಂಟಾ ಶಾಲೆಗಳಿಗೆ ಕಾಲ್ನಡಿಗೆಯಲ್ಲಿಯೇ ತೆರಳುತ್ತಾರೆ. ವಿದ್ಯಾರ್ಥಿಗಳು ಮನೆ ಪಾಠವನ್ನು ಚಿಮಣಿ ಬೆಳಕಿನಲ್ಲೇ ಮಾಡುವಂತಾಗಿದೆ. ಇನ್ನು
ದೊಡ್ಡಿಯಲ್ಲಿ ಅಂಗನವಾಡಿ ಕೇಂದ್ರವಿಲ್ಲ. ಅಂಗನವಾಡಿ, ವಿದ್ಯುತ್‌ ಸೌಕರ್ಯ, ಉತ್ತಮ ರಸ್ತೆ ಸೌಲಭ್ಯಕ್ಕಾಗಿ ಶಾಸಕರು, ಸಂಬಂಧಿಸಿದ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ ಎಂದು ಗ್ರಾಪಂ ಸದಸ್ಯ ಯಲ್ಲಪ್ಪ ಪೂಜಾರಿ ಸೇರಿದಂತೆ ದೊಡ್ಡಿ ನಿವಾಸಿಗಳು ದೂರಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next