ನ್ಯಾಮತಿ: ರೈತರು ಯಾವುದೇ ಸಾಲ, ಸಮಸ್ಯೆಗಳಿಗೆ ಹೆದರುವ ಆಗತ್ಯವಿಲ್ಲ. ಆತ್ಮಸ್ಥೈರ್ಯದಿಂದ ಬದುಕಬೇಕು. ನಿಮ್ಮೊಂದಿಗೆ ನಾವಿದ್ದೇವೆ ಎಂದು ಹರಿಹರ ಶಾಸಕ ಎಚ್.ಎಸ್. ಶಿವಶಂಕರ ಹೇಳಿದರು. ಸಮೀಪದ ದೊಡ್ಡೆತ್ತಿನಹಳ್ಳಿ ಗ್ರಾಮದ ಮೃತ ರೈತ ಬನ್ನಿಕೆರೆ ರುದ್ರಪ್ಪ ಅವರ ನಿವಾಸದ ಎದುರು ರೈತ ಸಾಂತ್ವನ ಪಾದಯಾತ್ರೆ ಸಮಾರಂಭಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಪ್ರಕೃತಿ ವಿಕೋಪ ಮನುಷ್ಯ ನಿರ್ಮಿತ ಸಮಸ್ಯೆಯಲ್ಲ. ರೈತರ ಬದುಕನ್ನು ಹಸನು ಮಾಡಬೇಕೆಂಬುದು ನಮ್ಮ ಅಭಿಲಾಷೆ. ಸಾಲ ತೀರಿಸಲು ಸಮಯ ಕೊಡಿ ಎಂಬುದು ನಮ್ಮ ಹೇಳಕೆಯಾಗಿದ್ದು, ಸಾಲ ವಸೂಲಾತಿಗೆಯಾವ ಬ್ಯಾಂಕ್‌ನವರು ಬರುವುದಿಲ್ಲ. ರೈತರು ಆತಂಕಪಡುವುದು ಬೇಡ ಎಂದರು.
ದಾವಣಗೆರೆ ಜಿಲ್ಲಾ ಜೆಡಿಎಸ್ ಮಹಿಳಾ ಘಟಕದ ಅಧ್ಯಕ್ಷೆ ಶೀಲಾಕುಮಾರ ಮಾತನಾಡಿ, ನಾನು ರೈತರ ಮಗಳಾಗಿದ್ದು, ಅವರ ಸಮಸ್ಯೆಗಳ ಅರಿವಿದೆ. ಹೆಂಡತಿ ಮಕ್ಕಳಿಗೆ ನೋವು ಕೊಡುವ ಕೆಲಸವನ್ನು ಯಜಮಾನರು ಮಾಡಬಾರದು. ಎಷ್ಟೇ ಕೋಟಿ ಸಾಲವಿದ್ದರೂ ಶಾಸಕರ ಬಳಿ ಹೋಗಿ ಪರಿಹಾರದ ದಾರಿ ಕಂಡುಕೊಳ್ಳಬೇಕು ಎಂದರು.
ಮಲೆಬೆನ್ನೂರು ಪುರಸಭಾ ಅಧ್ಯಕ್ಷ ವಿಜಯಕುಮಾರ, ದಾವಣಗೆರೆ ಜಿಲ್ಲಾಜೆಡಿಎಸ್ ಅಧ್ಯಕ್ಷ ಬಿ. ಚಿದಾನಂದಪ್ಪ, ಗುರುಪಾದಯ್ಯ ಮಠದ್ ಮಾತನಾಡಿದರು. ಹೊನ್ನಾಳಿ ತಾಲೂಕು ಜೆಡಿಎಸ್ ಅಧ್ಯಕ್ಷ ರಮೇಶ ದೇವರ ಹೊನ್ನಾಳಿ ಅಧ್ಯಕ್ಷತೆ ವಹಿಸಿದ್ದರು. ಮೃತರ ಪತ್ನಿ ಸರೋಜಮ್ಮ ಅವರಿಗೆ ಸಾಂತ್ವನ ಹೇಳಿದರು.
ಆರಂಭದಲ್ಲಿ ಮೃತರ ಆತ್ಮಕ್ಕೆ ಶಾಂತಿ ಕೋರಿ ಮೌನಾಚರಿಸಲಾಯಿತು.ಮೂರು ದಿನಗಳ ಪಾದಯಾತ್ರೆಗೆ ಮೃತ ರುದ್ರಪ್ಪ ಅವರ ಮಗ ಹಾಲೇಶ ಡೋಲು ಬಾರಿಸಿ ಚಾಲನೆ ನೀಡಿದರು. ನೂರಾರು ಕಾರ್ಯಕರ್ತರು ಪಾದಾಯಾತ್ರೆಯಲ್ಲಿ ಪಾಲ್ಗೊಂಡಿದ್ದರು.