Advertisement

ಸಮಸ್ಯೆ ಬಗೆಹರಿದಿದೆ:ಪಕ್ಷ ತೊರೆಯುವುದಿಲ್ಲ: ರಮೇಶ್‌ ಜಾರಕಿಹೊಳಿ

06:50 AM Sep 20, 2018 | |

ಬೆಂಗಳೂರು: ಕೆಲವು ವಿಷಯಗಳಲ್ಲಿ ಸಮಸ್ಯೆ ಹಾಗೂ ಸಿಟ್ಟು ಎರಡೂ ಇತ್ತು. ಮುಖ್ಯಮಂತ್ರಿ ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿದ ನಂತರ ಎಲ್ಲವೂ ಬಗೆ ಹರಿದಿದೆ ಎಂದು ಪೌರಾಡಳಿತ ಸಚಿವ ರಮೇಶ್‌ ಜಾರಕಿಹೊಳಿ ಹೇಳಿದ್ದಾರೆ.

Advertisement

ಎರಡು ದಿನಗಳಿಂದ ನಡೆದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಮುಖ್ಯಮಂತ್ರಿ ಕುಮಾರಸ್ವಾಮಿ ಅವರೊಂದಿಗಿನ ಪ್ರತ್ಯೇಕ ಸಭೆಯ ಬಳಿಕ ಬುಧವಾರ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ಅವರು, ಅಧಿಕಾರಿಗಳ ವರ್ಗಾವಣೆ ಬಗ್ಗೆ ತಲೆ ಕೆಡಿಸಿಕೊಳ್ಳುವ ಕುಟುಂಬ ನಮ್ಮದಲ್ಲ. ಪರಿಶಿಷ್ಟ ವರ್ಗದ ಮೀಸಲಾತಿ ಪ್ರಮಾಣವನ್ನು ಶೇಕಡಾ 7 ಕ್ಕೆ ಹೆಚ್ಚಿಸುವಂತೆ ಮುಖ್ಯಮಂತ್ರಿಗೆ ಮನವಿ ಮಾಡಿದ್ದೇವೆ. ನವೆಂಬರ್‌ ತಿಂಗಳಲ್ಲಿ ಖಾಲಿಯಾಗುವ ಕೆಪಿಎಸ್‌ಸಿ ಸದಸ್ಯ ಸ್ಥಾನವನ್ನು ವಾಲ್ಮೀಕಿ ಸಮುದಾಯಕ್ಕೆ ನೀಡುವಂತೆ ಮನವಿ ಮಾಡಿದ್ದೇವೆ. ಹಾಗೂ ವಿಧಾನ ಪರಿಷತ್‌ನ ಖಾಲಿ ಇರುವ ಆರು ಸ್ಥಾನಗಳಲ್ಲಿ ಒಂದು ಸ್ಥಾನವನ್ನು ವಾಲ್ಮೀಕಿ ಸಮುದಾಯಕ್ಕೆ ನೀಡಬೇಕೆಂದು ಕೇಳಿಕೊಂಡಿದ್ದೇವೆ ಎಂದು ಹೇಳಿದರು.

ಶಾಸಕಿ ಲಕ್ಷ್ಮೀ ಹೆಬ್ಟಾಳ್ಕರ್‌ ಬಗ್ಗೆ ಮಾತನಾಡಲು ನಿರಾಕರಿಸಿದ ಅವರು, ಕೆಲವೊಂದು ಆಂತರಿಕ ವಿಷಯಗಳ ಬಗ್ಗೆ ಚರ್ಚೆ ಮಾಡಿದ್ದೇವೆ. ಅದೆಲ್ಲವನ್ನು ಬಹಿರಂಗ ಪಡಿಸಲು ಆಗುವುದಿಲ್ಲ. ನಾನು ಯಾವುದೇ ಕಾರಣಕ್ಕೂ ಬಿಜೆಪಿಗೆ ಹೋಗುವುದಿಲ್ಲ. ನನ್ನಿಂದ ಸಮ್ಮಿಶ್ರ ಸರ್ಕಾರಕ್ಕೆ ಯಾವುದೇ ತೊಂದರೆಯಿಲ್ಲ ಎಂದು ಹೇಳಿದರು.

ನಮ್ಮ ಸಮುದಾಯ ಅಷ್ಟೇ ಅಲ್ಲದೇ ಅಹಿಂದ ಸಮುದಾಯದ ಪರ ನಾವು ಕೆಲಸ ಮಾಡಿದ್ದೇವೆ. ಅಹಿಂದ ನಾಯಕರು ಬಂದು ನಮ್ಮನ್ನು ಭೇಟಿಯಾಗಿದ್ದಾರೆ. ಅವರ ಬೇಡಿಕೆಗಳ ಬಗ್ಗೆ ಚರ್ಚಿಸಿದ್ದಾರೆ. ಅದನ್ನೂ ಮುಖ್ಯಮಂತ್ರಿಗಳ ಗಮನಕ್ಕೆ ತಂದು ಪರಿಹರಿಸುತ್ತೇನೆ ಎಂದು ಹೇಳಿದರು.

ಸ್ವಾಮೀಜಿ ಸಲಹೆ
ಇದಕ್ಕೂ ಮೊದಲು ವಾಲ್ಮೀಕಿ ಪೀಠದ ಪ್ರಸನ್ನಾನಂದ ಸ್ವಾಮೀಜಿ ಹಾಗೂ ರಮೇಶ್‌ ಅವರ ಕಿರಿಯ ಸಹೋದರ ಲಖನ್‌ ಜಾರಕಿಹೊಳಿ ಮಾತುಕತೆ ನಡೆಸಿ, ಕಾಂಗ್ರೆಸ್‌ ತೊರೆಯದಂತೆ ಸಲಹೆ ನೀಡಿದರು ಎಂದು ತಿಳಿದು ಬಂದಿದೆ. ಬಿಜೆಪಿಯವರು ಅಧಿಕಾರಕ್ಕಾಗಿ ತಮ್ಮನ್ನು ಬಳಸಿಕೊಳ್ಳುತ್ತಾರೆ. ಸತೀಶ್‌ ಹಾಗೂ ನೀನು ಇಬ್ಬರೂ ಒಟ್ಟಾಗಿದ್ದರೆ, ಪಕ್ಷದಲ್ಲಿ ಹೆಚ್ಚಿನ ಬಲ ಇರುತ್ತದೆ ಎಂದು ಸ್ವಾಮೀಜಿ ಸಲಹೆ ನೀಡಿದರು ಎಂದು ತಿಳಿದು ಬಂದಿದೆ.

Advertisement

ಸಹೋದರರ ನಡುವೆ ಕೆಲವು ಭಿನ್ನಾಭಿಪ್ರಾಯಗಳಿದ್ದವು. ಅದನ್ನು ಸರಿಪಡಿಸಿದ್ದೇನೆ. ಅವರು ಬಿಜೆಪಿಗೆ ಹೋಗುವುದು ಅಥವಾ ಕಾಂಗ್ರೆಸ್‌ನಲ್ಲಿಯೇ ಉಳಿಯುವ ಬಗ್ಗೆ ಚರ್ಚಿಸಲು ಬಂದಿಲ್ಲ. ಇದೊಂದು ಸೌಜನ್ಯದ ಭೇಟಿ.
ಪ್ರಸನ್ನಾನಂದ ಸ್ವಾಮೀಜಿ, ವಾಲ್ಮೀಕಿ ಮಠದ ಪೀಠಾಧ್ಯಕ್ಷರು.

Advertisement

Udayavani is now on Telegram. Click here to join our channel and stay updated with the latest news.

Next