Advertisement

ಮಂಗಳೂರು ವಿವಿ ಸಮಸ್ಯೆ ರಾಜೀನಾಮೆಗೆ ಆಗ್ರಹಿಸಿ ಪ್ರತಿಭಟನೆ

03:45 AM Feb 12, 2017 | Team Udayavani |

ಮಂಗಳೂರು: ಮಂಗಳೂರು ವಿಶ್ವವಿದ್ಯಾಲಯದ ಸಮಸ್ಯೆ ಬಗೆಹರಿಸಲು ಮತ್ತು ಸಮಸ್ಯೆಗೆ ಸಂಬಂಧಪಟ್ಟವರ ರಾಜೀನಾಮೆಗೆ ಆಗ್ರಹಿಸಿ ಅಖೀಲ ಭಾರತೀಯ ವಿದ್ಯಾರ್ಥಿ ಪರಿಷತ್‌ ಮಂಗಳೂರು ನೇತೃತ್ವದಲ್ಲಿ ಶನಿವಾರ ನಗರದ ಪಿವಿಎಸ್‌ ವೃತ್ತದ ಬಳಿ ವಿದ್ಯಾರ್ಥಿಗಳಿಂದ ಪ್ರತಿಭಟನೆ ನಡೆಯಿತು.

Advertisement

ಪ್ರತಿಭಟನಕಾರರನ್ನು ಉದ್ದೇಶಿಸಿ ಶೀತಲ್‌ ಕುಮಾರ್‌ ಮಾತನಾಡಿ, ವಿವಿಯ ಪ್ರಾಥಮಿಕ ಕಾರ್ಯಗಳಾದ ಶಿಕ್ಷಣ, ಪರೀಕ್ಷೆ ಮತ್ತು ಫಲಿತಾಂಶ, ಅಂಕಪಟ್ಟಿ ನೀಡುವುದು ಪ್ರಮುಖವಾಗಿದೆ. ಆದರೆ ವಿಶ್ವವಿದ್ಯಾಲಯ ಪ್ರಮುಖವಾದ ಕೆಲಸಗಳನ್ನೇ ಮರೆತು ಅವ್ಯವಹಾರದ ಹಾದಿಗೆ ಸಾಗಿದೆ ಎಂದು ಆರೋಪಿಸಿದರು.

ಕಾರ್ಯಕರ್ತರಾದ ಕೀರ್ತನ ಮಾತನಾಡಿ, ವಿಶ್ವವಿದ್ಯಾಲಯವು ಸಮಾಜದಲ್ಲಿ ಸಮಸ್ಯೆಗಳು ಎದುರಾದಾಗ ಪರಿಹರಿಸುವ ದಾರಿಯನ್ನು ತೋರಿಸುವಂತಹ ಶಿಕ್ಷಣದ ನಿರೀಕ್ಷೆಯಲ್ಲಿ ನಾವೆಲ್ಲಾ ಕಾಲೇಜುಗಳಲ್ಲಿ ವಿದ್ಯಾರ್ಜನೆ ಮಾಡುತ್ತಿದ್ದೇವೆ. ಆದರೆ, ವಿವಿಯು ಸಮಸ್ಯೆಗಳ ಆಲಯವಾಗಿದೆ ಎಂದು ಆರೋಪಿಸಿದರು.

ಹಾಸ್ಟೆಲ್‌ ಪ್ರಮುಖ್‌ ರಾಕೇಶ್‌ ಮಾತನಾಡಿ, ವಿಶ್ವವಿದ್ಯಾಲಯದ ಆಡಳಿತ ಮಂಡಳಿ ಸಮಸ್ಯೆಗಳನ್ನು ಪರಿಹರಿಸಲಾಗದೆ ಸಮಸ್ಯೆಗಳ ಮರೆಮಾಚುವಿಕೆ ಮತ್ತು ವಿಷಯಗಳ ತಿರುಚುವಿಕೆಯಿಂದ ವಿಶ್ವವಿದ್ಯಾಲಯದ ಘನತೆಯನ್ನು ಹಾಳುಮಾಡುತ್ತಿರುವ ಸಂಗತಿ ಜಗಜ್ಜಾಹೀರಾತಾಗಿರುವುದು ಕಂಡುಬರುತ್ತಿದೆ. ಈ ಹಿಂದೆ ಅನೇಕ ಹೋರಾಟಗಳು ಮತ್ತು ಪತ್ರಿಕಾಗೋಷ್ಠಿಯಲ್ಲಿ ನೀಡಿರುವ ಬೇಡಿಕೆಗಳನ್ನು ಈಡೇರಿಸಬೇಕೆಂದು ಆಗ್ರಹಿಸಿದರು. 

ಪ್ರತಿಭಟನೆಯಲ್ಲಿ ವಿಭಾಗ ಸಹ ಸಂಚಾಲಕ್‌ ಚೇತನ್‌, ಜಿಲ್ಲಾ ಸಹ ಸಂಚಾಲಕ್‌ ಪದ್ಮ ಕುಮಾರ್‌, ನಗರ ಕಾರ್ಯದರ್ಶಿ ಜೀವನ್‌ ಮರೋಳಿ, ಅಭಿಷೇಕ್‌, ಶರೋಲ್‌. ಮನೋಜ್‌, ಸ್ವಾಗತ್‌, ವಿದ್ಯಾ ಮತ್ತಿತರರು ಉಪಸ್ಥಿತರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next