ಮಕ್ಕಳು ಭೇದಭಾವಗಳ ಹಂಗಿಲ್ಲದೆ, ಮೇಲು ಕೀಳಿನ ರಂಗಿಲ್ಲದೆ ಇರುವ ಒಂದೇ ಒಂದು ಸ್ಥಳವೆಂದರೆ ಶಾಲೆ. ಅಲ್ಲಿ ಯಾರು ಬುದ್ಧಿವಂತನೋ ಅವನಿಗೆ ಪಟ್ಟ. ಅವನಿಗೆ ಸಮ್ಮಾನ, ಅವನಿಗೆ ಬಹುಮಾನ. ಇಲ್ಲೂ ಆದದ್ದು ಅದೇ… ಊರ ಬಡ ಕುಟುಂಬದ ಹುಡುಗ ಬುದ್ಧಿವಂತ. ಅವನು ಭಾಷಣ ಸ್ಪರ್ಧೆಯಲ್ಲಿ ಮೊದಲ ಸ್ಥಾನಿ. ಗಾಂಧೀ ಜಯಂತಿಯ ದಿನ ಅವನಿಗೆ ಶಾಲೆಯಲ್ಲಿ ಗಣ್ಯರೆದುರಿಗೆ ಬಹುಮಾನ ಪಡೆಯುವ ಸುಸಂದರ್ಭವೊಂದು ಒದಗುತ್ತದೆ. ಆದರೆ, ಆ ದಿನ ಹಾಕಲೇ ಬೇಕಾದ, ಹಾಕದಿದ್ದರೆ ಶಿಕ್ಷೆಗೆ ಗುರಿಯಾಗುವಂತಿದ್ದ ಗಾಂಧೀ ಟೋಪಿಯ ದೆಸೆಯಿಂದ ಆ ಅವಕಾಶ ತಪ್ಪಿ ಹೋಗುತ್ತದೆ.
ಆದರೆ ಅವನಿಗೆ ಸಲ್ಲಬೇಕಾದ ಬಹುಮಾನವನ್ನು ಅವನ ಬದಲಾಗಿ ಇನ್ನೊಬ್ಬ ಪಡೆದು ಕಾರ್ಯಕ್ರಮ ಯಶಸ್ವಿಗೊಳಿಸಬೇಕಾದದ್ದು ಅನಿವಾರ್ಯ. ಆದ ಕಾರಣ ಊರಿನ ಹಣವಂತರ ಮಗ ಬಹುಮಾನವನ್ನು ಪಡೆಯುತ್ತಾನೆ. ಆದರೆ ಅದನ್ನು ಬುದ್ಧಿವಂತ ಬಡಹುಡುಗನ ಕೈಗೆ ಒಪ್ಪಿಸದೇ ತಾನೇ ಇಟ್ಟುಕೊಳ್ಳುತ್ತಾನೆ.
ಅದನ್ನು ಕೇಳಲೆಂದು ತನ್ನಜ್ಜಿಯನ್ನು ಹಿಂದಿಟ್ಟುಕೊಂಡು ಹೋಗುವ ಬಡ ಹುಡುಗ ಶ್ರೀಮಂತ ಹುಡುಗನ ಮನೆಯ ವೈಭವಕ್ಕೆ ಬೆದರುತ್ತಾನೆ. ಬಹುಮಾನವನ್ನು ತನಗೊಪ್ಪಿಸಬೇಕಾದರೆ ಅದೇ ಭಾಷಣವನ್ನು ಮತ್ತೆ ಹೇಳಬೇಕಾದ ಪರೀಕ್ಷೆಯಲ್ಲಿ ಸೋಲುತ್ತಾನೆ. ಬಡ ಹುಡುಗನ ಸೋಲಿನಿಂದ ಅಹಂಕಾರ ಮತ್ತನಾದ ಶ್ರೀಮಂತ ಹುಡುಗನ ತಂದೆ ಧನಿ ಬಡ ಹುಡುಗನನ್ನು ಓಡಲು ಹೇಳಿ ತನ್ನ ನಾಯಿಗಳನ್ನು ಛೂ ಬಿಡುತ್ತಾನೆ. ಆದರೆ ತನ್ನ ಮಗನೇ ಆ ನಾಯಿಗಳಿಂದ ಕಡಿಸಿಕೊಂಡು ಬಡ ಹುಡುಗನನ್ನು ಪಾರು ಮಾಡಿದ್ದನ್ನು ಕಂಡು ಅವನ ಅಹಂಕಾರ ಕರಗುತ್ತದೆ. ಇಂಥ ಸಾಮಾನ್ಯ ಕಥಾ ಹಂದರವನ್ನೊಳಗೊಂಡ ಈ ನಾಟಕವನ್ನು ನೋಡುವಂತೆ ಮಾಡಿದ್ದು ಅದರಲ್ಲಿ ಭಾಗವಹಿಸಿದ ಕಲಾವಿದರ ಚುರುಕುತನ, ಲವಲವಿಕೆಗಳೇ.
ಉತ್ತಮ ರಂಗಸಜ್ಜಿಕೆ, ಬೆಳಕು ನಾಟಕವನ್ನು ಉತ್ತಮಗೊಳಿಸುವಲ್ಲಿ ಸಹಕರಿಸಿದ್ದವು. ಬಸವಣ್ಣೆಪ್ಪಾ ಕಂಬಾರ ರಚಿಸಿದ ನಾಟಕದ ನಿರ್ದೇಶನದ ಹೊಣೆ ಹೊತ್ತವರು ಕೆ. ಸಿ. ಕುಮಾರ್. ನೂಜಿಬೈಲು ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ ವಠಾರದಲ್ಲಿ ನಡೆದ ಬಿ. ವಿ. ಕಾರಂತ ನೆನಪಿನ ಮಂಚಿ ನಾಟಕೋತ್ಸವದ ಸಂಭ್ರಮದ ಕೊನೆಯ ದಿನ ಪ್ರದರ್ಶನಗೊಂಡ “ಬಹುಮಾನ’ ನಾಟಕ, ನಾಟಕವೊಂದು ಭಿನ್ನ ಸ್ತರದಲ್ಲಿ ನಿಂತು ಜನರಿಂದ ದೂರವಾಗಿ ಕೇವಲ ವಿಮಶಾìಕಾರರು ಮಾತ್ರ ನೋಡುವ ವಸ್ತುವಾಗಿ ಉಳಿಯದಿರಲು ನಿರ್ಧರಿಸಿತ್ತು. ಸಹಜ, ಸುಲಭ ಸಂಭಾಷಣೆಗಳಿಂದ ಪುಟ್ಟವರಿಗೂ ಅರ್ಥವಾಗುವಂತಿದ್ದುದೇ ಇದರ ಹಿರಿಮೆ ಎಂದರೂ ಸುಳ್ಳಲ್ಲ. ಬೆಳ್ಳೇಕೆರೆಯ ಜೈ ಕರ್ನಾಟಕ ಸಂಘ ತಂಡದ ಸದಸ್ಯರು ಕೊನೆಯ ದಿನದ ಈ ನಾಟಕವನ್ನು ನೆನಪಿನಲ್ಲಿ ಉಳಿಯುವಂತೆ ಪ್ರದರ್ಶಿಸಿ ಎಲ್ಲರ ಮೆಚ್ಚುಗೆಗೆ ಪಾತ್ರರಾದರು. ಒಂಬತ್ತನೆಯ ವರ್ಷದ ಬಿ. ವಿ. ಕಾರಂತ ನೆನಪಿನೋತ್ಸವ ಮುಗಿದಿದೆ, ಎಲ್ಲರೂ ದಶಮಾನೋತ್ಸವದ ಹಾರೈಕೆಯೊಂದಿಗೆ ಅದಕ್ಕಾಗಿ ಕಾಯುತ್ತಿದ್ದಾರೆ ಎನ್ನುವುದೇ ನಾಟಕೋತ್ಸವದ ಗೆಲುವು. ಇದು ಬಿ. ವಿ. ಕಾರಂತರ ನೆನಪಿಗೆ ಸಂದ ಗೌರವವೂ ಹೌದು.
ಅನಿತಾ ನರೇಶ್ ಮಂಚಿ