ಸುಮಾರು 6-7 ವರ್ಷದ ಮೊದಲು ನನ್ನ ಮನೆಯ ಹತ್ತಿರ ಒಂದು ಬಯಲಾಟ ಆಗಿತ್ತು. ನಾನು ಬಯಲಾಟಕ್ಕೆ ಹೋಗಿ ಇಡೀ ರಾತ್ರಿ ಅಲ್ಲಿ ರಂಗಸ್ಥಳದಲ್ಲಿ ಬರುವಂಥ ಎಲ್ಲ ವೇಷಗಳನ್ನು ನೋಡಿ ಸಂತೋಷಪಟ್ಟೆ. ಇಂತಹ ಕೆಲವು ವೇಷಗಳನ್ನು ನಾನು ಕೂಡ ಧರಿಸಿ ಜನರನ್ನು ಸಂತೋಷಪಡಿಸಬಹುದೆಂದು ಯೋಚಿಸಿದೆ. ಯಾವುದೋ ಒಂದು ಹಾಸ್ಯ ಸಂಭಾಷಣೆಯನ್ನು ಹತ್ತು ವಾಕ್ಯಗಳಲ್ಲಿ ಬರೆದು ಬಾಯಿಪಾಠ ಮಾಡಿದೆ. ಅದೇ ವೇಳೆಗೆ ನಮ್ಮ ಶಾಲೆಯಲ್ಲಿ ವಾರ್ಷಿಕೋತ್ಸವ ಆಗುವುದರಲ್ಲಿತ್ತು. ಎಲ್ಲ ಮಕ್ಕಳು ವಾರ್ಷಿಕೋತ್ಸವಕ್ಕೆ ನೃತ್ಯ, ಸಂಗೀತ, ನಾಟಕ ಅಂತ ತಯಾರು ನಡೆಸುತ್ತಿದ್ದರು. ನಾನು ಯಾರಿಗೂ ತಿಳಿಸದೆ ತಯಾರು ಮಾಡಿದ ಆ ಹತ್ತು ಸಾಲಿನ ಪದಗಳನ್ನು ಚೆನ್ನಾಗಿ ಬಾಯಿಪಾಠ ಮಾಡಿ ವಾರ್ಷಿಕೋತ್ಸವಕ್ಕೆ ಚಿಕ್ಕ ನಟನೆ ಮಾಡುವುದಾಗಿ ಶಾಲಾ ಮುಖ್ಯೋಪಾಧ್ಯಾಯರಲ್ಲಿ ಹೆಸರನ್ನು ಬರೆಸಿಕೊಂಡೆ.
ವಾರ್ಷಿಕೋತ್ಸವದ ದಿನ ಬಂದೇ ಬಿಟ್ಟಿತು. ನಾನು ಗೋಣಿಚೀಲದ ನೂಲಿನಿಂದ ಮೀಸೆಯನ್ನು ಮಾಡಿ ನನ್ನ ಮುಖಕ್ಕೆ ಅಂಟಿಸಿ ನಟಿಸಲು ತಯಾರಾದೆ. ನನ್ನ ಸಹಪಾಠಿ ಮಕ್ಕಳೆಲ್ಲ ಒಂದೊಂದು ವೇಷ ಹಾಕಿ ಅವರ ಸರದಿಗಾಗಿ ಕಾಯುತ್ತಿದ್ದರು. ನನ್ನ ಸರದಿ ಬಂದಾಕ್ಷಣ ನಾನು ವೇದಿಕೆಗೆ ಕಾಲಿಡುತ್ತಲೇ ನನ್ನಲ್ಲಿ ನಡುಕ ಉಂಟಾಗಿ ನನ್ನ ಬಾಯಿಂದ ಬಾಯಿಪಾಠ ಮಾಡಿಕೊಂಡ ಆ ಹಾಸ್ಯದ ವಿಷಯದ ಒಂದು ಪದವೂ ಬರಲಿಲ್ಲ. ಏನು ಮಾಡುವುದೆಂದು ತಿಳಿಯಲಿಲ್ಲ. ವೇದಿಕೆಯ ಮುಂದೆ ಕುಳಿತ ಮಕ್ಕಳು ನನ್ನ ಹೆಸರು ಕರೆದು “”ಓ… ಅಮ್ಮಿ, ಮಾತಾಡೊ. ಯಾಕೋ ಕೋತಿ ಥರ ನಿಂತಿದ್ದಿಯಾ” ಎಂದು ಒಬ್ಬೊಬ್ಬರು ಒಂದೊಂದು ತರ ತಮಾಷೆ ಮಾಡಿದರು.
ನಾಚಿಕೆಯ ಜೊತೆ ಭಯದಿಂದ ಮೈಯೆಲ್ಲ ಬೆವರಿ ಅಂಟಿಸಿದ ಮೀಸೆಯೂ ಕೆಳಗೆ ಬಿತ್ತು. ನಾನು ಕೈಯಾಡಿ ಸಿ ಮೂಕನಂತೆ ನಟಿಸುತ್ತ ಒಮ್ಮೆ ವೇದಿಕೆಯಲ್ಲಿ ಆ ಕಡೆಯಿಂದ ಈಕಡೆಗೆ, ಈ ಕಡೆಯಿಂದ ಆ ಕಡೆಗೆ ಹೋಗುತ್ತ ಭಯ ವ ನ್ನು ತಡೆಯಲಾಗದೆ ಸಪ್ಪೆ ಮುಖಮಾಡಿಕೊಂಡು ಹೊರಗೆ ಹೋಗಿ ಒಂದು ಮೂಲೆಯಲ್ಲಿ ಕುಳಿತುಬಿಟ್ಟೆ. ಮುಂದೆ ಎಲ್ಲಾ ಕಾರ್ಯಕ್ರಮಗಳು ಮುಗಿಯುತ್ತ ಬಹುಮಾನ ವಿತರಣೆ ಮಾಡುವ ಸಮಯದಲ್ಲಿ ಎಲ್ಲರಿಗೂ ಒಂದೊಂದು ಬಹುಮಾನ ಕೊಡುತ್ತಿದ್ದರು. ಅಂತಿಮವಾಗಿ ನನ್ನ ಹೆಸರು ಕರೆದರು. ನಾನು ನಾಚಿಕೆಪಡುತ್ತ ಬಹುಮಾನ ತೆಗೆದುಕೊಳ್ಳಲು ಹೋಗಿನಿಂತೆ. ಅಷ್ಟರಲ್ಲಿ ನಮ್ಮ ಮುಖ್ಯೋಪಾಧ್ಯಾಯರು ನನ್ನ ಕೈಗೆ ಒಂದು ಚಿಕ್ಕ ಬಹುಮಾನ ನೀಡುತ್ತ, “”ನಮ್ಮ ಶಾಲೆಯ ವಿದ್ಯಾರ್ಥಿನಿ ಮೂಕನ ನಟನೆ ಮಾಡಿದ್ದಾಳೆ. ಇನ್ನು ಮುಂದಕ್ಕೆ ಒಳ್ಳೆಯ ಹಾಸ್ಯ ನಟಿ ಆಗುವುದರಲ್ಲಿ ಸಂದೇಹವಿಲ್ಲ” ಎಂದು ನನ್ನ ಬೆಟ್ಟು ತಟ್ಟಿ ಹೇಳಿದರು.
ನಾನು ವೇದಿಕೆಯಲ್ಲಿ ಏನೂ ನಟಿಸದಿದ್ದರೂ ಮುಖ್ಯೋಪಾಧಾಯಯರು ಹೀಗೆ ಯಾಕೆ ಹೇಳಿದರು ಎಂದು ತುಂಬ ಯೋಚನೆ ಮಾಡಿದೆ. ನಂತರ ನನಗೆ ತಿಳಿಯಿತು, ಇದು ನನ್ನ ಒಳ್ಳೆಯತನಕ್ಕೆ ಹೇಳಿದ ಮಾತೆಂದು. ನಂತರ ನಾನು ವೇದಿಕೆಯಲ್ಲಿ ಚೆನ್ನಾಗಿ ನಟನೆ ಮಾಡುವುದನ್ನು ಕಲಿತೆ. ಹಲವಾರು ನಾಟಕಗಳಲ್ಲಿ ನಟಿಸಿದೆ. ಎಲ್ಲರ ಮನಸ್ಸನ್ನು ಗೆದ್ದುಬಿಟ್ಟೆ. ಆವತ್ತು ನನ್ನ ಮುಖ್ಯೋಪಾಧ್ಯಾಯರು ನನ್ನ ಬೆನ್ನು ತಟ್ಟಿ ಹೇಳಿದ ಮಾತುಗಳನ್ನು ಈಗಲೂ ಜ್ಞಾಪಿಸುತ್ತೇನೆ.
ಗೀತಾಶ್ರೀ
ದ್ವಿತೀಯ ಪಿಯುಸಿ, ಸ್ವಾಮಿ ವಿವೇಕಾನಂದ ಪದವಿಪೂರ್ವ ಕಾಲೇಜು, ಎಡಪದವು