ಮಾಸ್ಕೊ: ಈ ಬಾರಿಯ ಫಿಫಾ ವಿಶ್ವಕಪ್ ಬಹುಮಾನ ಮೊತ್ತದಲ್ಲಿ 42 ಮಿಲಿಯನ್ ಡಾಲರ್‌ಗಳ ಹೆಚ್ಚಳವಾಗಿದೆ. 2014ರಲ್ಲಿ ಒಟ್ಟು ಮೊತ್ತ 358 ಮಿ. ಡಾಲರ್ ಇದ್ದರೆ, ಈ ಸಲ ಇದು 400 ಮಿ. ಡಾಲರ್‌ಗೆ ಏರಿದೆ(ಅಂದಾಜು 2,680 ಕೋ.ರೂ.). ಇದರಲ್ಲಿ ವಿಜೇತ ತಂಡಕ್ಕೆ ಲಭಿಸುವ ಮೊತ್ತ 38 ಮಿ. ಡಾಲರ್. ರನ್ನರ್ ಅಪ್ ತಂಡ 28 ಮಿ. ಡಾಲರ್ ಪಡೆಯಲಿದೆ.
ತೃತೀಯ ಸ್ಥಾನಿಗೆ 24 ಮಿ. ಡಾಲರ್, 4ನೇ ಸ್ಥಾನಿಗೆ 22 ಮಿ. ಡಾಲರ್ ಮೊತ್ತ ಸಿಗಲಿದೆ. ಕ್ವಾರ್ಟರ್ ಫೈನಲ್‌ನಲ್ಲಿ ಸೋತು ನಿರ್ಗಮಿಸುವ 4 ತಂಡಗಳು ತಲಾ 16 ಮಿ. ಡಾಲರ್ ಪಡೆಯಲಿವೆ.
16ರ ಸುತ್ತಿನ ಪಂದ್ಯದ ಬಳಿಕ ಕೂಟದಿಂದ ನಿರ್ಗಮಿಸುವ 8 ತಂಡಗಳಿಗೆ ತಲಾ 12 ಮಿ. ಡಾಲರ್, ಗ್ರೂಪ್ ಹಂತದಲ್ಲಿ ಸೋತು ತೆರಳುವ 16 ತಂಡಗಳಿಗೆ ತಲಾ 8 ಮಿ. ಡಾಲರ್ ಬಹುಮಾನ ನೀಡಲಾಗುವುದು.
ಇದನ್ನು ಹೊರತುಪಡಿಸಿಯೂ ವಿಶ್ವಕಪ್‌ನಲ್ಲಿ ಆಡುವ ಅರ್ಹತೆ ಸಂಪಾದಿಸಿರುವ 32 ತಂಡಗಳಿಗೆ “ತಯಾರಿ ಶುಲ್ಕ’ವಾಗಿ ತಲಾ 1.5 ಮಿ. ಡಾಲರ್ ನೀಡಲಾಗುವುದು. ಹಾಗೆಯೇ “ಕ್ಲಬ್ ಪ್ರೊಟೆಕ್ಷನ್ ಪ್ರೋಗ್ರಾಂ’ಗೆ ಫಿಫಾ ಹೆಚ್ಚುವರಿಯಾಗಿ 134 ಮಿ. ಡಾಲರ್ ಮೊತ್ತವನ್ನು ತೆಗೆದಿರಿಸಿದೆ. ವಿಶ್ವಕಪ್ ಆಡುವ ವೇಳೆ ಆಟಗಾರರು ಗಾಯಾಳಾದರೆ ಪರಿಹಾರವಾಗಿ ಇದರ ಮೊತ್ತವನ್ನು ಸಂಬಂಧಪಟ್ಟ ಫುಟ್‌ಬಾಲ್ ಕ್ಲಬ್‌ಗಳಿಗೆ ನೀಡಲಾಗುವುದು.
ಕ್ರೀಡಾಪಟುಗಳನ್ನು ಹೊರತುಪಡಿಸಿ ರೆಫ್ರಿ, ಅಧಿಕಾರಿಗಳು ಹಾಗೂ ಇತರೆಲ್ಲ ಸಿಬಂದಿಗಳಿಗಾಗಿ ಫಿಫಾ 791 ಮಿಲಿಯನ್ ಡಾಲರ್ ಮೊತ್ತವನ್ನು ವ್ಯಯಿಸಲಿದೆ. ಇದು ಕಳೆದ ಸಲಕ್ಕೆ ಹೋಲಿಸಿದರೆ ಶೇ. 40ರಷ್ಟು ಆಧಿಕ.