ಬೆಂಗಳೂರು: ಮಳೆಗಾಲದಲ್ಲಿ ರಾಜಕಾಲುವೆ ಉಕ್ಕಿ ಹರಿದು ಉಂಟಾಗುವ ಅನಾಹುತಗಳನ್ನು ತಪ್ಪಿಸಲು ಮುಂದಾಗಿರುವ ಬಿಬಿಎಂಪಿ, ನಗರದ ಸುಮಾರು 400 ಕಿ.ಮೀ. ಉದ್ದದ ರಾಜಕಾಲುವೆಗಳ ನಿರ್ವಹಣೆ ಹೊಣೆ ಖಾಸಗಿಯವರಿಗೆ ನೀಡಲು ಮುಂದಾಗಿದೆ.
ಪಾಲಿಕೆಯ ಬೃಹತ್ ಮಳೆನೀರು ಕಾಲುವೆ ವಿಭಾಗದಿಂದ ಟೆಂಡರ್ ನೀಡಲಾಗಿದ್ದರೂ, ಮಳೆಗಾಲ ಆರಂಭವಾದ ಬಳಿಕ ಪ್ರತಿವರ್ಷ ಕಾಲುವೆಗಳಲ್ಲಿ ಹೂಳು ತೆಗೆಯುವ ಕಾಮಗಾರಿ ಆರಂಭವಾಗುತ್ತದೆ. ಇದರಿಂದಾಗಿ ಕಾಲುವೆಗಳು ಉಕ್ಕಿ ಹರಿದು ಮನೆವಸತಿ ಪ್ರದೇಶಗಳಿಗೆ ನುಗ್ಗಿ ಸಮಸ್ಯೆಗಳು ಸೃಷ್ಟಿಯಾಗುತ್ತಿವೆ. ಆ ಹಿನ್ನೆಲೆಯಲ್ಲಿ ರಾಜಕಾಲುವೆಗಳು ವರ್ಷವಿಡೀ ನಿರ್ವಹಣೆ ಹೊಣೆಯನ್ನು ಗುತ್ತಿಗೆದಾರರಿಗೆ ನೀಡಲು ಪಾಲಿಕೆ ಸಿದ್ಧತೆ ನಡೆಸಿದೆ.
ರಾಜಕಾಲುವೆ ವಾರ್ಷಿಕ ನಿರ್ವಹಣೆ ಕುರಿತಂತೆ ಸರ್ಕಾರದ ಅನುಮೋದನೆ ಬೇಕಿದ್ದು, ಅದಕ್ಕೆ ಶೀಘ್ರದಲ್ಲಿ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ಆಯುಕ್ತರು ತಿಳಿಸಿದ್ದಾರೆ. ಅದರಂತೆ ಸರ್ಕಾರದಿಂದ ಅನುಮೋದನೆ ಬಂದ ನಂತರ ಯಾವ ಭಾಗದ ರಾಜಕಾಲುವೆಯನ್ನು ನಿರ್ವಹಣೆ ಮಾಡಬೇಕು ಎಂಬುದನ್ನು ನಿಗದಿಗೊಳಿಸಲಾಗುವುದು ಎಂದು ತಿಳಿಸಿದ್ದಾರೆ.
ಗುತ್ತಿಗೆ ಪಡೆದವರು ತಮಗೆ ನೀಡಲಾದ ಅವಧಿಯವರೆಗೆ ರಾಜಕಾಲುವೆಯಲ್ಲಿ ಹೂಳು ತುಂಬದಂತೆ ನೋಡಿಕೊಳ್ಳಬೇಕು. ಜತೆಗೆ ರಾಜಕಾಲುವೆಗಳಿಗೆ ಕಸ ಎಸೆಯುವವರನ್ನು ಪತ್ತೆ ಮಾಡಿ ಅವರ ವಿರುದ್ಧ ಕ್ರಮಕ್ಕೆ ಬಿಬಿಎಂಪಿಗೆ ಶಿಫಾರಸು ಮಾಡಬೇಕಿದ್ದು, ಒಂದೊಮ್ಮೆ ನಿರ್ವಹಣಾ ಅವಧಿಯಲ್ಲಿ ರಾಜಕಾಲುವೆಯಲ್ಲಿ ಸರಾಗವಾಗಿ ನೀರು ಹರಿಯದೆ, ಪ್ರವಾಹ ಉಂಟಾದರೆ ಅದಕ್ಕೆ ಗುತ್ತಿಗೆದಾರರನ್ನೇ ಹೊಣೆಯಾಗಿಸಲು ಎಂದು ಆಯುಕ್ತ ಮಂಜುನಾಥ ಪ್ರಸಾದ್ ತಿಳಿಸಿದರು.
400 ಕಿ.ಮೀ. ಉದ್ದದ ರಾಜಕಾಲುವೆ ನಿರ್ವಹಣೆ: ಬಿಬಿಎಂಪಿ ವ್ಯಾಪ್ತಿಯಲ್ಲಿನ ಒಟ್ಟು 842 ಕಿ.ಮೀ. ಉದ್ದದ ರಾಜಕಾಲುವೆಗಳಿದ್ದು, ಅದರಲ್ಲಿ ಈಗಾಗಲೆ 296.35 ಕಿ. ಮೀ. ಉದ್ದದ ರಾಜಕಾಲುವೆಗೆ ತಡೆಗೋಡೆ ನಿರ್ಮಾಣ ಸೇರಿ ಇನ್ನಿತರ ಕಾಮಗಾರಿಯನ್ನು ಪೂರ್ಣಗೊಂಡಿದೆ. ಹಾಲಿ 92.65 ಕಿ.ಮೀ. ಉದ್ದದ ಕಾಲುವೆ ದುರಸ್ತಿ ಕಾರ್ಯ ಚಾಲ್ತಿಯಲ್ಲಿದೆ. ಉಳಿದಂತೆ 453 ಕಿ.ಮೀ. ಉದ್ದದ ರಾಜಕಾಲುವೆ ದುರಸ್ತಿ ಬಾಕಿ ಉಳಿದಿದೆ. ಹೀಗೆ ಈಗಾಗಲೆ ಕಾಮಗಾರಿ ಪೂರ್ಣಗೊಂಡಿರುವ 389 ಕಿ.ಮೀ. ಹಾಗೂ ದುರಸ್ತಿಯಾಗದೆ ಬಾಕಿ ಉಳಿದಿರುವ ರಾಜಕಾಲುವೆಯಲ್ಲಿ ನಿರ್ವಹಣೆ ಮಾಡಲೇಬೇಕಿರುವ ಭಾಗವನ್ನು ಗುರುತಿಸಿ ಒಟ್ಟು 400 ಕಿ.ಮೀ. ಉದ್ದದ ಕಾಲುವೆಯನ್ನು ನಿರ್ವಹಣೆಗೆ ನೀಡಲು ಪಾಲಿಕೆ ಯೋಜನೆ ರೂಪಿಸಿದೆ.
ದುರಸ್ತಿಗೆ 3 ಸಾವಿರ ಕೋಟಿ ರೂ. ಅಗತ್ಯ
2006-07ರಿಂದ 2015-16ರವರೆಗೆ ಒಟ್ಟು 1,367 ಕೋಟಿ ರೂ. ವೆಚ್ಚದಲ್ಲಿ 177.02 ಕಿ.ಮೀ. ಉದ್ದದ ರಾಜಕಾಲುವೆ ಹಾಗೂ 2016-17ರಿಂದ ಈವರೆಗೆ 119.33 ಕಿ.ಮೀ. ಉದ್ದದ ರಾಜಕಾಲುವೆಯನ್ನು 531.27 ಕೋಟಿ ರೂ.ವೆಚ್ಚದಲ್ಲಿ ದುರಸ್ತಿ ಮಾಡಲಾಗಿದೆ. ಅದರಂತೆ ಈಗಾಗಲೆ ಒಟ್ಟು 1,898 ಕೋಟಿ ರೂ. ವೆಚ್ಚದಲ್ಲಿ 296.35 ಕಿ.ಮೀ. ಉದ್ದದ ರಾಜಕಾಲುವೆಗೆ ತಡೆಗೋಡೆ ನಿರ್ಮಾಣ ಸೇರಿ ಇನ್ನಿತರ ಕಾಮಗಾರಿಯನ್ನು ಪೂರ್ಣಗೊಳಿಸಲಾಗಿದೆ.
ಜತೆಗೆ 92.65 ಕಿ.ಮೀ. ಕಾಮಗಾರಿ ಚಾಲ್ತಿಯಲ್ಲಿದ್ದು, ಅದಕ್ಕಾಗಿ 531.27 ಕೋಟಿ ರೂ. ವ್ಯಯಿಸಲಾಗುತ್ತಿದೆ. ಆದರೆ, ಉಳಿದ 453 ಕಿ.ಮೀ. ಉದ್ದದ ರಾಜಕಾಲುವೆ ದುರಸ್ತಿ ಮಾಡಲು 3 ಸಾವಿರ ಕೋಟಿ ರೂ. ಬೇಕಾಗುತ್ತದೆ ಎಂದು ಅಂದಾಜಿಸಲಾಗಿದೆ.