Advertisement

ಖಾಸಗಿ ಹಕ್ಕಿಗೆ ಬಂತು ಜೀವ, ಆಸ್ತಿ ಹಕ್ಕಿಗೆ ಎಂದು ಮರುಜೀವ?

07:54 AM Sep 06, 2017 | |

ಖಾಸಗಿತನವನ್ನು ವ್ಯಕ್ತಿಯ ಮೂಲಭೂತ ಹಕ್ಕೆಂದು ಸರ್ವೋಚ್ಚ ನ್ಯಾಯಾಲಯ ಘೋಷಿಸಿದೆಯಷ್ಟೆ. ಇದೀಗ ಆಸ್ತಿ ಒಡೆತನಕ್ಕೆ ಸಂಬಂಧಿಸಿದ ಮೂಲಭೂತ ಹಕ್ಕನ್ನು ಕೂಡ ಪುನರೂರ್ಜಿತಗೊಳಿಸುವ ಕಾಲ ಒದಗಿ ಬಂದಿದೆ.

Advertisement

ಕಳೆದ ತಿಂಗಳಲ್ಲಿ ಸರ್ವೋಚ್ಚ ನ್ಯಾಯಾಲಯದ ಈ ಮಹತ್ವದ ತೀರ್ಪು ಹೊರಬಿದ್ದಿದ್ದು, ಈ ಮೂಲಕ ನ್ಯಾಯಾಲಯ ಖಾಸಗಿತನವನ್ನು ಈ ದೇಶದ ಪ್ರತಿಯೊಬ್ಬ ಪ್ರಜೆಯ ಮೂಲಭೂತ ಹಕ್ಕೆಂದು ಇದೇ ಪ್ರಥಮ ಬಾರಿಗೆ ಘೋಷಿಸಿದಂತಾಗಿದೆ. ಈ ತೀರ್ಪಿನೊಂದಿಗೆ ಹಲವಾರು ಕಾನೂನು – ಕಾಯ್ದೆ ಸಂಬಂಧಿ ಹಕ್ಕುಗಳನ್ನು ದೇಶದ ಪ್ರಜೆಗಳಿಗೆ ಒದಗಿಸಿದಂತಾಗಿದೆ. ಮೂಲತಃ ಆಸ್ತಿ ಮೂಲಭೂತ ಹಕ್ಕನ್ನು, ನಮ್ಮ ಮೂಲ ಸಂವಿಧಾನದ 19 (1) ಎಫ್ ವಿಧಿಯಡಿಯಲ್ಲಿ (ಆಸ್ತಿ ಖರೀದಿ, ಅದರ ಒಡೆತನ ಹಾಗೂ ಮಾರಾಟದ ಹಕ್ಕು) ಹಾಗೂ 31ನೆಯ ವಿಧಿಯಡಿಯಲ್ಲಿ (ಯಾವನೇ ವ್ಯಕ್ತಿ ತನ್ನ ಆಸ್ತಿಯ ಮೇಲಿನ ಒಡೆತನದ ಅವಕಾಶದಿಂದ ವಂಚಿಸಲ್ಪಡದ ಹಕ್ಕು) ಅಂತರ್ನಿಹಿತಗೊಳಿಸಲಾಗಿತ್ತು. ಆದರೆ ಸದಸ್ಯರ ಆಸ್ತಿ ಕುರಿತ ಮೂಲಭೂತ ಹಕ್ಕಿನ ಶವಪೆಟ್ಟಿಗೆಗೆ ಕೊನೆಯ ಮೊಳೆ ಹೊಡೆದದ್ದು, ದೇಶದ ಪ್ರಪ್ರಥಮ ಕಾಂಗ್ರೆಸ್ಸೇತರ (ಜನತಾ ಪಕ್ಷದ) ಮೊರಾರ್ಜಿ ದೇಸಾಯಿಯವರ ಸರಕಾರ. ಈ ಸರಕಾರ ಅಂದು ಇಂದಿರಾರ ಸರಕಾರವು ದೇಶದಲ್ಲಿದ್ದ ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಮಾಡಿದ್ದ 42ನೆಯ ತಿದ್ದುಪಡಿಯ ದೌರ್ಜನ್ಯಕಾರಿ ಅಂಶಗಳನ್ನು ಕಿತ್ತು ಹಾಕುವ ಉದ್ದೇಶದಿಂದ ಮಾಡಿದ 44ನೆಯ ಸಂವಿಧಾನ ತಿದ್ದುಪಡಿ ಅದು. ಅಂದ ಹಾಗೆ, 44ನೆಯ ತಿದ್ದುಪಡಿಯ ಬಹುತೇಕ ನಿಯಮಗಳು ಸ್ವಾಗತಾರ್ಹವೇ ಆಗಿದ್ದರೂ, ಈ ನಿಯಮಗಳಲ್ಲಿ ಆಸ್ತಿ ಕುರಿತ ಮೂಲಭೂತ ಹಕ್ಕಿನ ರದ್ದತಿಯಂಥ ಅನಗತ್ಯ ಕ್ರಮವೂ ಸೇರಿಕೊಂಡಿತ್ತು.  300 ಎ ಎಂಬ ಹೊಸ ವಿಧಿಯೊಂದನ್ನು “ಆಸ್ತಿ ಹಕ್ಕು’ ಎಂಬ ಶೀರ್ಷಿಕೆಯಲ್ಲಿ ಸಂವಿಧಾನದಲ್ಲಿ ಸೇರ್ಪಡೆಗೊಳಿಸಿತು. ಇದರ ಪ್ರಕಾರ ಕಾನೂನು ರೀತ್ಯಾ ಅಧಿಕಾರದ ಹೊರತು ವ್ಯಕ್ತಿಯೊಬ್ಬ ತನ್ನ ಆಸ್ತಿಯ ಹಕ್ಕಿನಿಂದ ವಂಚಿತನಾಗತಕ್ಕದ್ದಲ್ಲ. ಈ ದೇಶದ ಪ್ರಜೆಗಳಿಗೆ ಕಾನೂನು ರೀತ್ಯಾ ಹಕ್ಕನ್ನು ಒದಗಿಸುವ ಈ ವಿಧಿ, ಇದಕ್ಕೆ ಪೂರ್ವದಲ್ಲಿದ್ದ ಆಸ್ತಿ ಸಂಬಂಧಿ ಮೂಲಭೂತ ಹಕ್ಕಿನ ಜಾಗಕ್ಕೆ ಬಂದ ಕಳಪೆ ಪರ್ಯಾಯ ಎಂಬಂಥ ಅಭಿಪ್ರಾಯ ವ್ಯಕ್ತವಾಗಿದೆ. ಏನಿದ್ದರೂ ಭಾರತದ ಜನತೆಯನ್ನು, ಅದರಲ್ಲೂ ವಿಶೇಷವಾಗಿ ಬಡ ಹಿಡುವಳಿದಾರರನ್ನು ಕಾನೂನಿನ ಇಕ್ಕುಳ ಹಿಡಿದು ದೋಚಿದ್ದು ಕಾಂಗ್ರೆಸ್‌ ಪಕ್ಷವೇ, ಸಂವಿಧಾನವನ್ನು ಓದಿ ತಿಳಿದುಕೊಳ್ಳಬಲ್ಲ ಯಾವನೇ ಶ್ರೀಸಾಮಾನ್ಯನಿಗೂ ಇದು ಅರ್ಥವಾಗುತ್ತದೆ. ಸಂವಿಧಾನ ಜಾರಿಗೊಂಡ ಮೊದಲ ಎರಡು ದಶಕಗಳ ಅವಧಿಯ ಕೇಂದ್ರ ಸರಕಾರದ ಆಡಳಿತ, ಭೂಮಸೂದೆ ಸಂಬಂಧಿ ಕಾಯ್ದೆಗಳ ಅನುಷ್ಠಾನದ ಮೂಲಕ ಆಸ್ತಿಯ ಮೂಲಭೂತ ಹಕ್ಕನ್ನು ಕಿತ್ತುಕೊಳ್ಳುವುದಕ್ಕೆ, ಜಮೀನಾªರೀ ಪದ್ಧತಿಯ ನಿಷೇಧ ಹಾಗೂ ಸಾರ್ವಜನಿಕ ಉದ್ದೇಶಕ್ಕಾಗಿ ಭೂ ಸ್ವಾಧೀನ ಎಂಬ ಪ್ರಹಸನ -ಇವುಗಳಿಗೇ ತನ್ನನ್ನು ಅರ್ಪಿಸಿಕೊಂಡು ಬಿಟ್ಟಿತು. ಲೆಕ್ಕವಿಲ್ಲದಷ್ಟು ಶಾಸನಾತ್ಮಕ ಸರ್ಕಸ್ಸುಗಳ ಮೂಲಕ ಆಸ್ತಿ ಕುರಿತ ಮೂಲಭೂತ ಹಕ್ಕಿನ ಶಕ್ತಿಯನ್ನು ಕುಂದಿಸಿತು. ಆಸ್ತಿ ಮೂಲಭೂತ ಹಕ್ಕಿಗೆ ಕತ್ತರಿ ಹಾಕಿ ಸಮಾಜವಾದಿ ಧೋರಣೆಯ ವ್ಯವಸ್ಥೆಯನ್ನು ರೂಪಿಸುವುದಕ್ಕಾಗಿ ಏನಿಲ್ಲವೆಂದರೂ ಒಂಬತ್ತು ಸಂವಿಧಾನ ತಿದ್ದುಪಡಿಗಳನ್ನು ಮಾಡಲಾಯಿತು. ಈ ಕೆಲಸ ಶುರುವಾದುದು 1951ರಲ್ಲಿ ಮಾಡಿದ್ದ ಪ್ರಥಮ ತಿದ್ದುಪಡಿಯೊಂದಿಗೆ. ಅಂದರೆ ಪ್ರಥಮ ಲೋಕಸಭೆ ರೂಪುಗೊಳ್ಳುವುದಕ್ಕೂ ಮೊದಲೇ. ಜನರ ಕೈಯಲ್ಲಿದ್ದ ಆಸ್ತಿ ಹಕ್ಕನ್ನು ಸರಕಾರ ಹೀಗೆ ಕೊಳ್ಳೆ ಹೊಡೆಯುವುದನ್ನು ಸರ್ವೋಚ್ಚ ನ್ಯಾಯಾಲಯ ಪ್ರಥಮ ಬಾರಿಗೆ ತರಾಟೆಗೆ ತೆಗೆದುಕೊಂಡದ್ದು 1967ರಲ್ಲಿ; ಗೋಲಕ್‌ನಾಥ್‌- ಪಂಜಾಬ್‌ ಸರಕಾರದ ನಡುವಣ ಪ್ರಕರಣದಲ್ಲಿ. ಆಗಿನ ಭಾರತದ ಶ್ರೇಷ್ಠ ನ್ಯಾಯಮೂರ್ತಿ ಕೆ. ಸುಬ್ಬರಾವ್‌ ಅವರು ಈ ಪ್ರಕರಣದ ತೀರ್ಪಿನಲ್ಲಿ “ಸರಕಾರ ಹೀಗೆ ಮೂಲಭೂತ ಹಕ್ಕುಗಳಿಗೆ ಕತ್ತರಿ ಹಾಕುವಂತಿಲ್ಲ; ಯಾಕೆಂದರೆ ಅವು ಜನರ ಮೂಲಭೂತ ಅಧಿಕಾರ’ ಎಂದು ಎಚ್ಚರಿಕೆ ನೀಡಿದ್ದರು. ಮುಂದೆ 24ನೆಯ ಸಂವಿಧಾನ ತಿದ್ದುಪಡಿಯ ಮೂಲಕ ಈ ತೀರ್ಪನ್ನು ಅನೂರ್ಜಿತಗೊಳಿಸಲಾಯಿತು. ಮೂಲಭೂತ ಹಕ್ಕುಗಳನ್ನು ಮೊಟಕುಗೊಳಿಸುವ ಅಧಿಕಾರ ಸಂಸತ್ತಿಗೆ ಈ ಮೂಲಕ ಪ್ರಾಪ್ತವಾಯಿತು. ಆದರೆ ಮುಂದೆ 1973ರಲ್ಲಿ ಮೂಲಭೂತ ಹಕ್ಕುಗಳ ವಿಷಯದಲ್ಲಿ ಸುಪ್ರೀಂಕೋರ್ಟ್‌ ತಾನು ಹೇಳಿದ್ದೇ ಅಂತಿಮ ಎಂಬುದನ್ನು ಸ್ಪಷ್ಟಪಡಿಸಿತು (ಮೂಲಭೂತ ಹಕ್ಕುಗಳ ಅಥವಾ ಮೂಲ ಲಕ್ಷಣಗಳ ಪ್ರಕರಣ, ಅಥವಾ ಕೇಶವಾನಂದ ಭಾರತೀ ಪ್ರಕರಣ). ಈ ತೀರ್ಪಿನ ಮೂಲಕ ಆಸ್ತಿ ಹಕ್ಕನ್ನು ಸಂವಿಧಾನದ ಮೂಲ ಸ್ವರೂಪವನ್ನು ಪ್ರತಿನಿಧಿಸುವ ಹಕ್ಕೆಂದು ಸರಿಯಾಗಿ ಗುರುತಿಸಿದಂತಾಗಿದೆ ಎಂಬುದು ಅನೇಕರ ಅಭಿಪ್ರಾಯ.  ಆಸ್ತಿ ಸಂಬಂಧಿ ಮೂಲಭೂತ ಹಕ್ಕಿನ ಮೇಲಿನ ಪ್ರಹಾರ ಢಾಳಾಗಿ ಗೋಚರಿಸಿದ್ದು 1950 ಹಾಗೂ 1960ರ ದಶಕಗಳಲ್ಲಿ, ಸಮಾಜವಾದಿ ಸಿದ್ಧಾಂತದ ಅನುಷ್ಠಾನದ ಭರಾಟೆಯ ವರ್ಷಗಳಲ್ಲಿ. ಈ ಅವಧಿಯಲ್ಲಿ ಸರಕಾರ ಲಕ್ಷ್ಯವಹಿಸಿದ್ದು ಕೃಷಿ ಭೂ ಹಿಡುವಳಿದಾರರನ್ನು ಸತಾಯಿಸುವಂಥ ಕ್ರಮಗಳ ಮೇಲೆ. ಮಧ್ಯಮ ಹಾಗೂ ಬಡವರ್ಗಗಳ ಹಿಡುವಳಿದಾರರ ಜಮೀನನ್ನು ವಶಪಡಿಸಿಕೊಳ್ಳಬೇಕು, ಅವರಿಗೆ ನ್ಯಾಯಯುತವಾಗಿ ಸಲ್ಲಬೇಕಾದ ಪರಿಹಾರ ಸಿಗಬಾರದು ಎಂಬುದು ಸರಕಾರದ ಬಯಕೆಯಾಗಿತ್ತು. 1974ರಲ್ಲಿ ಜಾರಿಗೊಂಡ ದೇವರಾಜ ಅರಸ್‌ ಸರಕಾರದ ಭೂಮಸೂದೆ ಕಾಯ್ದೆ, ಇಂಥ ಧೋರಣೆಯ ಸರಕಾರಿ ಕ್ರಮಗಳ ಗುಂಪಿಗೆ ಸೇರಿಸಬಹುದಾದ ಸಮಾಜವಾದಿ ಧೋರಣೆಯ ಕಾಯ್ದೆ. ಆ ಸರಕಾರ ಇದನ್ನು ಬಲವಂತವಾಗಿ ಹೇರಿದ್ದು, ತುರ್ತು ಪರಿಸ್ಥಿತಿಯು ದಿನಗಳಲ್ಲಿ ವಿರೋಧ ಪಕ್ಷಗಳ ನಾಯಕರು ಜೈಲು ಪಾಲಾಗಿದ್ದಾಗ ಮತ್ತು ಜನರ ಧ್ವನಿಯನ್ನು ಕಾನೂನಿನ ಭಯ ಕುಗ್ಗಿಸಿದ್ದ ದಿನಗಳಲ್ಲಿ. ಈ ಕಾಯ್ದೆ ಕರ್ನಾಟಕವನ್ನು ಸಮಾಜವಾದದತ್ತ ಒಂದೇ ಒಂದು ಅಂಗುಲ ಕೂಡ ಒಯ್ಯಲಿಲ್ಲವೆಂದು ಪ್ರತ್ಯೇಕವಾಗಿ ಹೇಳಬೇಕಾಗಿಯೇ ಇಲ್ಲ. ಸಮಾಜವಾದಿ ಎಂಬ ಮಂತ್ರವನ್ನು ಪಠಿಸುತ್ತಿದ್ದ ಅಂದಿನ ರಾಜಕಾರಣಿಗಳು ಸ್ವತಃ ಬಂಡವಾಳಶಾಹಿಗಳಾದರು; ಬೇರೆ ಬೇರೆ ಉಪಾಯಗಳಿಂದ ದೊಡ್ಡ ಮೊತ್ತದ ಹಣವನ್ನು ಸಂಪಾದಿಸುವಲ್ಲಿ ಯಶಸ್ವಿಯಾದರು. ಬ್ಯಾಂಕುಗಳ ರಾಷ್ಟ್ರೀಕರಣ, ರಾಜಾದಾಯಗಳ ನಿಷೇಧ, ಯುವ ರಾಜರುಗಳ ಸವಲತ್ತುಗಳ ರದ್ದತಿ ಮುಂತಾದ ಕ್ರಮಗಳನ್ನು ಸಮಾಜವಾದದ ಆ ದಿನಗಳಲ್ಲಿ ಇಂದಿರಾ ಸರಕಾರ ಬಹು ಸಂಭ್ರಮದಿಂದ ಅನುಷ್ಠಾನಗೊಳಿಸಿತು.

ಪಿ.ವಿ. ನರಸಿಂಹ ರಾವ್‌-ಮನಮೋಹನ್‌ ಸರಕಾರಗಳು ಸಮಾಜವಾದಕ್ಕೆ ಶುಭವಿದಾಯ ಹೇಳಿ ಉದಾರೀಕರಣ ನೀತಿಗೆ ಜೈ ಎಂದರು. ಇಂದು ಭೂ ಸುಧಾರಣೆ, ರಾಷ್ಟ್ರೀಕರಣದಂಥ ಕ್ರಮಗಳನ್ನು ಕುರಿತು ಯಾರೂ ಸೊಲ್ಲೆತ್ತುತ್ತಿಲ್ಲ. ಹಿಂದಿನ ವಂಶಾಡಳಿತ ಪದ್ಧತಿಯ ಮಹಾರಾಜರುಗಳ ಸ್ಥಾನದಲ್ಲಿಂದು ಕಾರ್ಪೊರೇಟ್‌ ಹಾಗೂ ರಾಜಕೀಯ ಸ್ವರೂಪದ ಮಹಾರಾಜರುಗಳಿದ್ದಾರೆ. ಎಲ್ಲೆಡೆಗಳಲ್ಲೂ ಖಾಸಗಿ ಬ್ಯಾಂಕ್‌ಗಳಿವೆ. ನೆಹರೂ ಹಾಗೂ ಇಂದಿರಾ ಗಾಂಧಿಯವರ ಕಾಲದಲ್ಲಿ ಬಿರ್ಲಾಗಳು ಹಾಗೂ ಟಾಟಾಗಳಿದ್ದರೆ ಇಂದು ಎಗ್ಗಿಲ್ಲದ ಬಂಡವಾಳಶಾಹಿಗಳು ದೇಶದೆಲ್ಲೆಡೆಗಳಲ್ಲಿದ್ದಾರೆ. ಅಂದು ಇದ್ದ ಬಂಡವಾಳ ಶಾಹಿಗಳು ಏನಿಲ್ಲೆಂದರೂ ಸ್ವಾತಂತ್ರ್ಯ ಚಳವಳಿಗೆ ಧನಸಹಾಯ ಮಾಡುತ್ತಿದ್ದರು; ಅತ್ಯುತ್ಕೃಷ್ಟ ಗುಣಮಟ್ಟದ ಸಂಸ್ಥೆಗಳನ್ನು ಹುಟ್ಟು ಹಾಕಿದ್ದರು. ಇಂದು ಸರಕಾರಿ ಕೈಗಾರಿಕಾ ಸಂಸ್ಥೆಗಳನ್ನು ದೇಶದಲ್ಲಿ, ವಿಶೇಷವಾಗಿ ಕರ್ನಾಟಕದಲ್ಲಿ ಜುಜುಬಿ ಬೆಲೆಗೆ ಮಾರಲಾಗುತ್ತಿದೆ; ಅವುಗಳ ಜಮೀನನ್ನು ಬಂಡವಾಳಶಾಹಿಗಳಿಗೆ, ಭೂತಿಮಿಂಗಿಲಗಳಿಗೆ ಹಾಗೂ ಕಟ್ಟಡ ಕಂಟ್ರಾಕ್ಟರ್‌ಗಳಿಗೆ ಮಾರಿ ಕೈ ತೊಳೆದುಕೊಳ್ಳಲಾಗುತ್ತಿದೆ. ಕರ್ನಾಟಕದಲ್ಲಿ ನೋಡಿ – ಇಲ್ಲಿ ಹಿಂದೆ ಇದ್ದ ಅಬಕಾರಿ ಗುತ್ತಿಗೆದಾರರ ಸ್ಥಾನಕ್ಕೆ ಈಗ ದೊಡ್ಡ ದೊಡ್ಡ ರಿಯಲ್‌ ಎಸ್ಟೇಟ್‌ “ಡೆವಲಪರ್‌’ಗಳು ಹಾಗೂ ವ್ಯಾಪಾರೀಕೃತ ಶೈಕ್ಷಣಿಕ ಸಂಸ್ಥೆಗಳ ಕುಳವಾರುಗಳು ಬಂದಿದ್ದಾರೆ. ಕರ್ನಾಟಕದ ನಮ್ಮ ಶಾಸಕರು ವಿಧಾನಸಭೆಯ ಉಭಯ ಸದನಗಳಲ್ಲಿ ಭೂ ಸುಧಾರಣಾ ಕ್ರಮಗಳ ಮಾತೆತ್ತುವುದು ತೀರ ಅಪರೂಪ. ಎಲ್ಲಕ್ಕಿಂತ ಮುಖ್ಯವಾಗಿ ಇದು ಕೃಷಿ ಕ್ಷೇತ್ರದ ಬಿಕ್ಕಟ್ಟು; ರೈತರ ಆತ್ಮಹತ್ಯೆಗಳಿಗೆ ದಾರಿ ಮಾಡಿಕೊಟ್ಟಿರುವ ಪೆಡಂಭೂತ. ಗೇಣಿದಾರರು ಹೊಲದೊಡೆಯರಾದರೇನೋ ಹೌದು; ಆದರೆ ಸಾಲದ ಉರುಳಿಗೆ ಬಿದ್ದಿರುವ ಈ ರೈತರು ಮಾಡಿದ ಸಾಲವನ್ನು ತಾವೇ ಭರಿಸುವುದು ಹೇಗೆಂಬುದು ಅವರೆದುರು ಉದ್ಭವಿಸಿರುವ ಪ್ರಶ್ನೆ. ಕೃಷಿ ಕ್ಷೇತ್ರದಲ್ಲಿನ ಮೂಲಭೂತ ಕೊರತೆಯನ್ನು ನಿಭಾಯಿಸುವುದಕ್ಕೆ ಸಾಲಮನ್ನಾ ಮಾತ್ರವೇ ಪರ್ಯಾಯ ಉಪಾಯವಲ್ಲ.  ಭೂಮಿ ಕಳಕೊಂಡಿರುವವರಿಗೆ ಉತ್ತಮ ರೀತಿಯ ಪರಿಹಾರದ ಅಗತ್ಯವಿದೆಯೆಂಬುದನ್ನು ಸರಿಯಾಗಿಯೇ ಗುರುತಿಸಿರುವ ಕೇಂದ್ರ ಸರಕಾರ 1894ರ ಭೂ ಸ್ವಾಧೀನ ಕಾಯ್ದೆಯ ಬದಲಿಗೆ 2011ರ ಭೂ ಸ್ವಾಧೀನ, ಪುನರ್ವಸತೀಕರಣ ಕಾಯ್ದೆಯನ್ನು ತಂದಿದೆ ಎಂಬುದನ್ನು ಗಮನಿಸಬೇಕಾಗಿದೆ. ಈ ಹಿಂದೆ 2010ರಲ್ಲಿ ಸಂಜೀವ್‌ ಅಗ್ರವಾಲ್‌ ಎಂಬವರು ಆಸ್ತಿ ಸಂಬಂಧ ಮೂಲಭೂತ ಹಕ್ಕಿಗೆ ಮರುಜೀವ ಕೊಡುವ ವಿಫ‌ಲ ಪ್ರಯತ್ನವನ್ನು ಸವೋಚ್ಚ ನ್ಯಾಯಾಲಯದಲ್ಲಿ ಮಾಡಿದ್ದುಂಟು. 44ನೆಯ ತಿದ್ದುಪಡಿಯನ್ನು ಅಸಿಂಧುಗೊಳಿಸಬೇಕು, ಸಂವಿಧಾನದ ಪ್ರಸ್ತಾವನೆಯಲ್ಲಿ ಸೇರ್ಪಡೆಗೊಳಿಸಲಾಗಿರುವ ಸಮಾಜವಾದಿ ಎಂಬ ಪದವನ್ನು ತೆಗೆದು ಹಾಕುವಂತೆ ಸರಕಾರಕ್ಕೆ ಸೂಚಿಸಬೇಕು ಎಂದು ಅಗ್ರವಾಲ್‌ ತಮ್ಮ ಸಾರ್ವಜನಿಕ ಹಿತಾಸಕ್ತಿಯ ದೂರಿನಲ್ಲಿ ಕೋರಿದ್ದರು. ಆದರೆ ಆಗಿನ ಮುಖ್ಯ ನ್ಯಾಯಮೂರ್ತಿ ಎಸ್‌.ಎಚ್‌. ಕಪಾಡಿಯಾ ಅವರು, “ಈ ಕೇಸಿನಲ್ಲಿ ನ್ಯಾಯಾಲಯದ ಹಿಂದಿನ ಹಲವಾರು ತೀರ್ಪುಗಳನ್ನು ಮರುಪರಿಶೀಲಿಸಬೇಕಾದೀತು. ಹಾಗೆಲ್ಲ ಹಿಂದಿನ ವಿವಾದಗಳನ್ನು ಮತ್ತೆ ಕೆದಕಲು ಸಾಧ್ಯವಿಲ್ಲ’ ಎಂಬ ಕಾರಣ ನೀಡಿ ಈ ಅರ್ಜಿಯನ್ನು ವಜಾಗೊಳಿಸಿದ್ದರು. ಸರ್ವೋಚ್ಚ ನ್ಯಾಯಾಲಯ ಈಗ ಖಾಸಗಿತನವನ್ನು ಮೂಲಭೂತ ಹಕ್ಕೆಂದು ಘೋಷಿಸಿದ್ದನ್ನು ಮೋದಿ ಸರಕಾರ ಘನತೆಯಿಂದ ಒಪ್ಪಿಕೊಳ್ಳಬೇಕು. ಆಸ್ತಿಗೆ ಸಂಬಂಧಿಸಿದ ಮೂಲಭೂತ ಹಕ್ಕನ್ನು ಪುನರೂರ್ಜಿತ ಗೊಳಿಸಲು ಮುಂದಾಗುವುದು/ ಬಿಡುವುದು ಮೋದಿ ಸರಕಾರದ ನಿರ್ಧಾರಕ್ಕೆ ಸಂಬಂಧಪಟ್ಟ ವಿಚಾರ. ದೇಶದ ಆರ್ಥಿಕತೆಗೆ ಸಂಬಂಧಿಸಿದ ವಾಸ್ತವ ಸಂಗತಿಗಳಲ್ಲಿ ಆಗಿರುವ ಬದಲಾವಣೆಗಳನ್ನೀಗ ಸರಕಾರ ಗುರುತಿಸಬೇಕು; ಶ್ರೀ ಸಾಮಾನ್ಯನ ಕೈಗೆ ಅವನ ಆಸ್ತಿಯ ಹಕ್ಕನ್ನು ಮರಳಿಕೊಡಿಸುವ ಕೆಲಸ ಸರಕಾರದಿಂದ ಆಗಬೇಕು.

ಅರಕೆರೆ ಜಯರಾಮ್‌

Advertisement

Udayavani is now on Telegram. Click here to join our channel and stay updated with the latest news.

Next