Advertisement
ಆನೇಕಲ್‌ನ ಮಣಿ (30), ಜೆ.ಪಿ.ನಗರದ ರೂಪೇಶ್ (33), ಸೆಲ್ವರಾಜ್ (33) ಹಾಗೂ ಕೊಲೆಗೆ ಸುಪಾರಿ ಕೊಟ್ಟಿದ್ದ ಸಿದ್ದಾಪುರ ಗುಟ್ಟೆಪಾಳ್ಯ ನಿವಾಸಿ, ಫೈನಾನ್ಸಿಯರ್ ಲಕ್ಷ್ಮಣ್ (38) ಬಂಧಿತ ಆರೋಪಿಗಳು. ಅರಕೆರೆ ಬಳಿಯ ಬೀಡಾ ಅಂಗಡಿ ಮಾಲೀಕ ಶಿವಕುಮಾರ್‌ನನ್ನು ಹತ್ಯೆಗೈಯಲು ಆರೋಪಿಗಳು ಜು.25ರಂದು ಪೆದ್ದಣ್ಣ ಎಂಬ ಕ್ಯಾಬ್ ಚಾಲಕನ ಮೇಲೆ ಹಲ್ಲೆ ನಡೆಸಿ ಕಾರು ಕಳವು ಮಾಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
Related Articles
Advertisement
3 ಲಕ್ಷಕ್ಕೆ ಸುಪಾರಿ: ಫೈನಾನ್ಸಿಯರ್ ಲಕ್ಷ್ಮಣ್ 10 ವರ್ಷಗಳ ಹಿಂದೆ ವಿವಾಹವಾಗಿದ್ದು, ಈತನ ಪತ್ನಿ ಖಾಸಗಿ ಆಸ್ಪತ್ರೆಯೊಂದರಲ್ಲಿ ಶುಶ್ರೂಷಕಿಯಾಗಿ ಕೆಲಸ ಮಾಡುತ್ತಿದ್ದರು. ಮದುವೆಯಾದ ಒಂದೇ ವರ್ಷದಲ್ಲಿ ಈಕೆ ಅರಕೇರೆ ಬೀಡಾ ಅಂಗಡಿ ಮಾಲೀಕ ಶಿವಕುಮಾರ್ ಜತೆ ಅನೈತಿಕ ಸಂಬಂಧ ಹೊಂದಿದ್ದರು.
ಇದೇ ವಿಚಾರವಾಗಿ ದಂಪತಿ ನಡುವೆ ಜಗಳವಾಗಿದ್ದು, ಪತಿಯನ್ನು ತೊರೆದ ಪತ್ನಿ ಶಿವಕುಮಾರ್ ಜತೆ ವಾಸವಾಗಿದ್ದರು ಎಂದು ಹೇಳಲಾಗಿದೆ. ಕಳೆದ ತಿಂಗಳು ಲಕ್ಷ್ಮಣ್ ಬನ್ನೇರುಘಟ್ಟದಲ್ಲಿರುವ ತನ್ನ ಸಂಬಂಧಿಕರ ಖಾಲಿ ನಿವೇಶನಕ್ಕೆ ಹೋಗಿದ್ದರು. ಇಲ್ಲಿ ಕೆಲಸ ಮಾಡುತ್ತಿದ್ದ, ಅಪರಾಧ ಹಿನ್ನೆಲೆಯುಳ್ಳ ಆರೋಪಿ ಮಣಿ ಪರಿಚಯವಾಗಿದೆ.
ಈತನನ್ನು ಪರಿಚಯಿಸಿಕೊಂಡ ಲಕ್ಷ್ಮಣ್ ಈತನ ಮೊಬೈಲ್ ನಂಬರ್ ಪಡೆದು, ಬನ್ನೇರುಘಟ್ಟದ ಬಾರ್‌ವೊಂದಕ್ಕೆ ಕರೆಸಿಕೊಂಡು ಶಿವಕುಮಾರ್‌ನನ್ನು ಕೊಲೆಗೈಯಲು 3 ಲಕ್ಷಕ್ಕೆ ಸುಪಾರಿ ಕೊಟ್ಟಿದ್ದು, ಮುಂಗಡವಾಗಿ 7 ಸಾವಿರ ರೂ. ಹಣ ಕೊಟ್ಟಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಸುಪಾರಿ ಪಡೆದ ಮಣಿ ತನ್ನ ಸಹಚರರಾದ ರೂಪೇಶ್ ಮತ್ತು ಸೆಲ್ವರಾಜ್ ಜತೆ ಸೇರಿ ಕಳವು ಮಾಡಿದ ಕಾರಿನಲ್ಲಿ ಶಿವಕುಮಾರ್‌ನನ್ನು ಅಪಹರಿಸಿ ನಿರ್ಜನ ಪ್ರದೇಶದಲ್ಲಿ ಕೊಲ್ಲಲು ಸಂಚು ರೂಪಿಸಿದ್ದರು.
ಅದರಂತೆ ಪೆದ್ದಣ್ಣ ನ ಕಾರು ಕಳವು ಮಾಡಿ ರಾತ್ರಿ 11.30ರಲ್ಲಿ ಬೀಡ ಅಂಗಡಿ ಮುಚ್ಚಿ ಮನೆಗೆ ನಡೆದುಕೊಂಡು ಹೋಗುವಾಗ ಶಿವಕುಮಾರ್‌ನನ್ನು ಅಪಹರಿಸಿದ್ದರು. ಆತನ ಮೇಲೆ ಹಲ್ಲೆ ನಡೆಸಿ ಕೊಲೆಗೈಯಲು ಯತ್ನಿಸಿದ್ದರು. ಅಷ್ಟರಲ್ಲಿ ಮಾಹಿತಿ ಪಡೆದ ಪೊಲೀಸರು ಕೂಡಲೇ ಸ್ಥಳಕ್ಕೆ ಧಾವಿಸಿ ಶಿವಕುಮಾರ್‌ನನ್ನು ರಕ್ಷಣೆ ಮಾಡಿದ್ದಾರೆ.