ಜೇವರ್ಗಿ: ನಾಡಿನ ಪ್ರತಿಯೊಬ್ಬ ಮಠಾಧೀಶರು ಬಸವ ತತ್ವವನ್ನು ಕಡ್ಡಾಯವಾಗಿ ಅನುಷ್ಠಾನಕ್ಕೆ ತಂದಿದ್ದೆ ಆದಲ್ಲಿ ಅಸ್ಪೃಶ್ಯತೆ, ಜಾತಿ ಪದ್ಧತಿ, ಮೂಢನಂಬಿಕೆ, ಕಂದಾಚಾರ, ಬಡತನ ನಿರ್ಮಾಲನೆ ಮಾಡಲು ಸಾಧ್ಯವಾಗುತ್ತದೆ ಎಂದು ಲೋಕಸಭೆ ಕಾಂಗ್ರೆಸ್ ಪಕ್ಷದ ನಾಯಕ ಡಾ| ಮಲ್ಲಿಕಾರ್ಜುನ ಖರ್ಗೆ ಅಭಿಪ್ರಾಯಪಟ್ಟರು.
ಸ್ವಾಮಿಗಳ 25ನೇ ಪುಣ್ಯಸ್ಮರಣೋತ್ಸವ ನಿಮಿತ್ತ ತಾಲೂಕಿನ ಸೊನ್ನದ ಶಿವಾನಂದ ಶಿವಯೋಗಿಜನಕಲ್ಯಾಣ ಸಂಸ್ಥೆ ಆವರಣದಲ್ಲಿ ಸೋಮವಾರ ಆಯೋಜಿಸಲಾಗಿದ್ದ ಸಾಮೂಹಿಕ ವಿವಾಹ ಸಮಾರಂಭ ಹಾಗೂ ಯಾತ್ರಿ ನಿವಾಸ ಅಡಿಗಲ್ಲು ನೆರವೇರಿಸಿ ಅವರು ಮಾತನಾಡಿದರು.
ಪ್ರಜಾಪ್ರಭುತ್ವ, ಸಂವಿಧಾನದ ಮೌಲ್ಯಗಳನ್ನು ಗಟ್ಟಿಗೊಳಿಸಲು ಮಠಾಧೀಶರು ಪ್ರಯತ್ನಿಸಬೇಕು. 21ನೇ ಶತಮಾನದಲ್ಲಿಯೂ ದೇಶದಲ್ಲಿ ಇನ್ನೂ ಅಸ್ಪೃಶ್ಯತೆ ಜೀವಂತವಾಗಿರುವುದು ತುಂಬಾ ನೋವಿನ ಸಂಗತಿ. ಸೊನ್ನ ಮಠ ಸಾಮಾಜಿಕ ನ್ಯಾಯದ ತಳಹದಿ ಮೇಲೆ ನಿಂತಿದೆ.
17ನೇ ಶತಮಾನದಿಂದ ಇಲ್ಲಿಯವರೆಗೂ ಧಾರ್ಮಿಕ, ಸಾಮಾಜಿಕ, ಶೈಕ್ಷಣಿಕ ಕ್ಷೇತ್ರದಲ್ಲಿ ಪ್ರಗತಿ ಸಾಧಿಧಿಸಿ ನೂರಾರು ಬಡ ಮಕ್ಕಳಿಗೆ ಊಟ ವಸತಿ ಸೌಕರ್ಯ ನೀಡುವುದರ ಜತೆಗೆ ಜ್ಞಾನ ದಾಸೋಹ ಮಾಡುತ್ತಿರುವ ಶಿವಾನಂದ ಶ್ರೀಗಳ ಕಾರ್ಯ ಮೆಚ್ಚುವಂತದ್ದು. ಸಮಾಜವನ್ನು ತಿದ್ದಿ ತೀಡಬೇಕಾದ ಮಠಗಳ ಕೊಡುಗೆ ಅಪಾರವಾಗಿದೆ.
ದೇಶ ಉಳಿಯಬೇಕಾದರೆ ಸಂವಿಧಾನ ಹಾಗೂ ಪ್ರಜಾಪ್ರಭುತ್ವ ಉಳಿಯಬೇಕು. ಆ ನಿಟ್ಟಿನಲ್ಲಿ 12ನೇ ಶತಮಾನದ ಬಸವಾದಿ ಶರಣರ ಆಚಾರ, ವಿಚಾರ, ತತ್ವಗಳನ್ನು ಪ್ರತಿಯೊಬ್ಬರೂ ಪಾಲಿಸಿ ಆಚರಣೆಗೆ ತರಬೇಕು. ಬಡವರಿಗಾಗಿ, ಹಿಂದುಳಿದವರಿಗಾಗಿ ಕೆಲಸ ಮಾಡುವ ಸ್ವಾಮೀಜಿಗಳು ತುಂಬಾ ವಿರಳ. ಬಸವ ತತ್ವದ ಅಡಿ ಕೆಲಸ ಮಾಡುವ ಸ್ವಾಮೀಜಿಗಳನ್ನೇ ನಾವು ಸದಾ ಬೆಂಬಲಿಸುತ್ತೇವೆ ಎಂದು ಹೇಳಿದರು.