ರಾಯಚೂರು: ವಿವಿಧ ಸಂಕಷ್ಟಗಳ ನಡುವೆಯೂ ದೇಶ ಮುನ್ನಡೆಸುವಲ್ಲಿ ಪ್ರಧಾನಿ ನರೇಂದ್ರ ಮೋದಿ ಸಾಕಷ್ಟು ಶ್ರಮಿಸುತ್ತಿದ್ದಾರೆ. ಆತ್ಮನಿರ್ಭರ ಭಾರತದ ಮೂಲಕ ಆರ್ಥಿಕ ಚೇತರಿಕೆಗೆ ಒತ್ತು ನೀಡಿದ್ದಾರೆ ಎಂದು ಸಂಸದ ರಾಜಾ ಅಮರೇಶ್ವರ ನಾಯಕ ತಿಳಿಸಿದರು.
ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತ ನಾಡಿದ ಅವರು, ಕೋವಿಡ್ ಆರಂಭಿಕ ಹಂತದಲ್ಲಿ ಜಾರಿಗೊಳಿಸಿದ ಲಾಕ್‌ಡೌನ್‌ನಿಂದ ನಮ್ಮ ದೇಶ ಈಗ ಸಾಕಷ್ಟು ನಿಯಂತ್ರಣದಲ್ಲಿದೆ. ಇಲ್ಲವಾದರೆ ಪರಿಸ್ಥಿತಿ ಕೈ ಮೀರಿ ಹೋಗುತ್ತಿತ್ತು ಎಂದರು.
ಕೇಂದ್ರ ಸರ್ಕಾರ 80 ಕೋಟಿ ಜನರಿಗೆ ಉಚಿತ ಪಡಿತರ ಧಾನ್ಯ, ನರೇಗಾದಡಿ ಕೂಲಿ ಮತ್ತು ವಲಸೆ ಕಾರ್ಮಿಕರಿಗೆ 1 ಲಕ್ಷ ಕೋಟಿ ರೂ. ಅನುದಾನ ಘೋಷಣೆ, ಪಶುಸಂಗೋಪನೆಗೆ 15 ಸಾವಿರ ಕೋಟಿ ರೂ., ಗರೀಬ್ ಕಲ್ಯಾಣ ಯೋಜನೆಯಲ್ಲಿ ದೇಶದ ವಲಸೆ ಕಾರ್ಮಿಕ ಮತ್ತು ಬಡವರಿಗೆ 1 ಲಕ್ಷ 70 ಸಾವಿರ ಕೋಟಿ ರೂ.ಅನುದಾನ ನೀಡಿದ್ದಾರೆ ಎಂದು ತಿಳಿಸಿದರು.
ಮಧ್ಯಮ ಮತ್ತು ಸಣ್ಣ ಕೈಗಾರಿಕೆಗಳ ಅಭಿವೃದ್ಧಿಗೆ 3 ಲಕ್ಷ ಕೋಟಿ ರೂ. ಘೋಷಿಸುವ ಮೂಲಕ ಸ್ವಾವಲಂಬನೆ ಜತೆಗೆ ಬಂಡವಾಳ ಹೂಡಿಕೆದಾರರಿಗೆ ದೇಶ ದಲ್ಲಿ ಉತ್ತಮ ವೇದಿಕೆ ಕಲ್ಪಿಸಲಾಗಿದೆ ಎಂದು ತಿಳಿಸಿದರು. ಜಿಲ್ಲೆಯ ವೈಟಿಪಿಎಸ್, ಆರ್‌ಟಿಪಿಎಸ್‌ನಲ್ಲಿ ಭೂ ಸಂತ್ರಸ್ತರಿಗೆ ಮೊದಲು ಉದ್ಯೋಗಾವಕಾಶ ಕಲ್ಪಿಸಲು ಆಡಳಿತಾಧಿಕಾರಿಗೆ ಸೂಚಿಸಲಾಗಿದೆ. ಆದರೆ, ವೈಟಿಪಿಎಸ್ ಖಾಸಗೀಕರಣ ವಿಚಾರ ಸರ್ಕಾರದ ನಿರ್ಧಾರ. ಆ ಬಗ್ಗೆ ನಾನು ಹೆಚ್ಚು ಪ್ರತಿಕ್ರಿಯಿಸುವುದಿಲ್ಲ. ಆದರೆ, ಈ ಕೇಂದ್ರಗಳಿಂದ ಸಿಎಸ್ಸಾರ್ ಚಟುವಟಿಕೆ ಅಡಿ ಅನುದಾನವನ್ನು ಸ್ಥಳೀಯ ಅಭಿವೃದ್ಧಿಗೆ ಬಳಸಲು ಬದ್ಧರಾಗಿದ್ದೇವೆ ಎಂದು ತಿಳಿಸಿದರು.
ಜಿಲ್ಲೆಯ ಮೂರು ಹತ್ತಿ ನಿಗಮದಿಂದ ಕನಿಷ್ಠ ಬೆಂಬಲಬೆಲೆ ನೀಡಿ 7,904 ರೈತರ ಹತ್ತಿ ಖರೀದಿಸಲಾಗಿದೆ. ರಾಯಚೂರು, ದೇವದುರ್ಗ, ಸಿಂಧನೂರು ಖರೀದಿ ಕೇಂದ್ರದಿಂದ 25.63 ಲಕ್ಷ ಕ್ವಿಂಟಲ್ ಹತ್ತಿ ಖರೀದಿಸಿದ್ದು, ರೈತರಿಗೆ 138.52 ಕೋಟಿ ರೂ. ಪೈಕಿ 135.40 ಕೋಟಿ ರೂ. ಪಾವತಿಸಲಾಗಿದೆ. ಯಾದಗಿರಿಯಲ್ಲಿ 4783 ರೈತರ ಸುಮಾರು 24.22 ಲಕ್ಷ ಕ್ವಿಂಟಲ್ ಹತ್ತಿ ಖರೀದಿಸಿದ್ದು, 126 ಕೋಟಿ ರೂ. ಪಾವತಿಸಲಾಗಿದೆ ಎಂದು ವಿವರಿಸಿದರು ರಾಜ್ಯಸಭಾ ಸದಸ್ಯ ಅಶೋಕ ಗಸ್ತಿ, ಮಾಜಿ ಶಾಸಕ ಎ. ಪಾಪರೆಡ್ಡಿ, ಬಿಜೆಪಿ ಜಿಲ್ಲಾಧ್ಯಕ್ಷ ರಮಾಕಾಂತ ಯಾದವ, ನಗರ ಅಧ್ಯಕ್ಷ ಗೋವಿಂದ ಪೆಪ್ಸಿ, ದೊಡ್ಡಮಲ್ಲೇಶ ಸುದ್ದಿಗೋಷ್ಠಿಯಲ್ಲಿದ್ದರು.