Advertisement

ಬಸವಣ್ಣನವರಿಗೆ ನಮಿಸುವ ಪ್ರಧಾನಿ ನುಡಿದಂತೆ ನಡೆಯುತ್ತಿಲ್ಲ

07:15 AM Apr 28, 2018 | Team Udayavani |

ಮಡಿಕೇರಿ : ಬಸವಣ್ಣ ಅವರು ನುಡಿದಂತೆ ನಡೆ ಎಂದಿದ್ದರು, ಆದರೆ ಬಸವಣ್ಣನವರಿಗೆ ನಮಿಸುವ ದೇಶದ ಪ್ರಧಾನಿ ನರೇಂದ್ರ ಮೋದಿ ಅವರು ನುಡಿದಂತೆ ನಡೆದಿಲ್ಲವೆಂದು ಅಖೀಲ ಭಾರತ ಕಾಂಗ್ರೆಸ್‌ ಸಮಿತಿಯ ರಾಷ್ಟ್ರೀಯ ಅಧ್ಯಕ್ಷರಾದ ರಾಹುಲ್‌ ಗಾಂಧಿ ಟೀಕಿಸಿದ್ದಾರೆ.

Advertisement

ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಗೋಣಿಕೊಪ್ಪದಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಪರ ಪ್ರಚಾರ ಸಭೆಯಲ್ಲಿ ಪಾಲ್ಗೊಂಡು ದಸರಾ ಮೈದಾನದಲ್ಲಿ ಮಾತನಾಡಿದ ಅವರು, ಬಸವಣ್ಣನವರು ನುಡಿದಂತೆ ನಡೆ ಎಂದಿದ್ದರು, ಅವರಿಗೆ ನಮಿಸುವ ಮೋದಿ ನುಡಿದಂತೆ ನಡೆದಿಲ್ಲ. ಕಳೆದ ಲೋಕಸಭಾ ಚುನಾವಣೆ ಸಂದರ್ಭ  ಪ್ರತಿಯೊಬ್ಬರ ಖಾತೆಗೆ 15ಲ.ರೂ. ಹಾಕುವುದಾಗಿ ಭರವಸೆ ನೀಡಿದ್ದರು. ಆದರೆ ಯಾರಿಗೂ ಏನೂ ಸಿಗಲಿಲ್ಲವೆಂದು ಆರೋಪಿಸಿದರು.

ನೋಟ್‌ ಬ್ಯಾನ್‌ ಪ್ರಯೋಗ ಮಾಡುವ ಮೂಲಕ ಜನಸಾಮಾನ್ಯರನ್ನು ಪ್ರಧಾನಿ ಸಂಕಷ್ಟಕ್ಕೆ ಸಿಲುಕಿಸಿದರು. ಅವರ ಸೂಟ್‌ ಬೂಟ್‌ ಸ್ನೇಹಿತರು ಬ್ಲ್ಯಾಕ್‌ ಮನಿಯನ್ನು ವೈಟ್‌ ಮಾಡಿಕೊಂಡರು. ಬಡವರು ಕಷ್ಟ ಕಾಲಕ್ಕಾಗಿ ಇಟ್ಟಿದ್ದ ಹಣವನ್ನು ಸೂಟ್‌ ಬೂಟ್‌ ಸ್ನೇಹಿತರಿಗೆ ನೀಡಿದರು. ನೀರವ್‌ ಮೋದಿ ಅಂಥವರು ಬಡವರ ಹಣ ಗುಳುಂ ಮಾಡಿದರು ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದ ರಾಹುಲ್‌ಗಾಂಧಿ “”ನುಡಿದಂತೆ ನಡೆ” ಮೋದೀಜೀ ಎನ್ನುವ ಮೂಲಕ ಪಕ್ಷದ ಕಾರ್ಯಕರ್ತರ ಕರತಾಡನ ಗಿಟ್ಟಿಸಿಕೊಂಡರು. 
 
ಮೋದಿ ಜೀ ಅವರೇ ಸಿದ್ದರಾಮಯ್ಯ ಅವರನ್ನು ನೋಡಿ ಕಲಿಯಿರಿ,  ಸಿದ್ದರಾಮಯ್ಯ ನುಡಿದಂತೆ ನಡೆದಿದ್ದಾರೆ ಎಂದು ಹೆಮ್ಮೆ ವ್ಯಕ್ತಪಡಿಸಿದರು.  “ಬೇಟಿ ಬಚಾವೋ ಬೇಟಿ ಪಡಾವೋ’ ಅಂತಾರೆ, ಆದರೆ ಯು.ಪಿಯಲ್ಲಿ ಬಿಜೆಪಿ ಶಾಸಕರೇ ಅತ್ಯಾಚಾರ ಮಾಡುತ್ತಾರೆ ಎಂದು ಆರೋಪಿಸಿದ ರಾಹುಲ್‌ ಗಾಂಧಿ, ಬಿಜೆಪಿಯವರಿಂದ ಭೇಟಿ ಬಚಾವೋ ಸಾಧ್ಯವಿಲ್ಲವೆಂದು ಟೀಕಿಸಿದರು. ಚಿಲ್ಲರೆ ಅಂಗಡಿಯವರನ್ನೂ ಬಿಡದೆ ಎಲ್ಲರಿಂದಲೂ ಕೇಂದ್ರ ಸರಕಾರ ಲೂಟಿ ಮಾಡುತ್ತಿದೆ ಎಂದು ಆರೋಪಿಸಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತನಾಡಿ ಪ್ರಧಾನಿ ಮೋದಿ ಬಾಯಿ ಬಡಾಯಿಯಾಯಿತೇ ಹೊರತು ಸಾಧನೆ ಶೂನ್ಯ ಎಂದು ವ್ಯಂಗ್ಯವಾಡಿದರು.

ನಮ್ಮ ಸರಕಾರದ ಮೇಲೆ ಆಧಾರ ರಹಿತ ಆರೋಪ ಮಾಡುತ್ತಿದ್ದಾರೆ,  ನಿಮಗೆ ತಾಕತ್‌ ಇದ್ದರೆ ಒಂದೇ ವೇದಿಕೆಯಲ್ಲಿ ಚರ್ಚೆಗೆ ಬನ್ನಿ ಎಂದು  ಬಿಜೆಪಿ ನಾಯಕರಿಗೆ ಸವಾಲು ಹಾಕಿದ್ದೆ. ಆದರೆ ಅವರಿಗ್ಯಾರಿಗೂ ಬರಲು ಧಮ್‌ ಇಲ್ಲ ಎಂದು ಸಿಎಂ ವಾಗ್ಧಾಳಿ ನಡೆಸಿದರು. ಮೋದಿಯದ್ದು ಬರೀ ಮನ್‌ಕೀ ಬಾತ್‌, ಕಾಮ್‌ ಕೀ ಬಾತ್‌ ನಹೀ ಎಂದು ಲೇವಡಿ ಮಾಡಿದರು.

Advertisement

ಮೋದಿಗೆ ಜೈ ! 
ಗೋಣಿಕೊಪ್ಪಕ್ಕೆ ಹೆಲಿಕಾಪ್ಟರ್‌ನಲ್ಲಿ ಆಗಮಿಸಿದ ರಾಹುಲ್‌ ಗಾಂಧಿ ಕಾವೇರಿ ಕಾಲೇಜು ಮೈದಾನದಲ್ಲಿ ಇಳಿದು ದಸರಾ ಮೈದಾನಕ್ಕೆ ಆಗಮಿಸುವ ಸಂದರ್ಭ ಕಾಲೇಜು ರಸ್ತೆಯಲ್ಲಿ ಕೆಲವು ಬಿಜೆಪಿ ಕಾರ್ಯಕರ್ತರು ಮೋದಿ ಪರ ಘೋಷಣೆ ಕೂಗಿದ ಪ್ರಸಂಗವೂ ನಡೆಯಿತು.

ವೇದಿಕೆ ಏರದ ಅಭ್ಯರ್ಥಿಗಳು! 
ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಸಿ.ಎಸ್‌.ಅರುಣ್‌ ಮಾಚಯ್ಯ ಹಾಗೂ ಮಡಿಕೇರಿ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಕೆ.ಪಿ. ಚಂದ್ರಕಲಾ ಅವರುಗಳ ಪರ ಪ್ರಚಾರ ನಡೆಸುವುದಕ್ಕಾಗಿ ರಾಹುಲ್‌ ಗಾಂಧಿ ಆಗಮಿಸಿದ್ದರು. ಆದರೆ ತಾವು ವೇದಿಕೆ ಏರಿದರೆ ಸಮಾವೇಶದ ವೆಚ್ಚದ ಲೆಕ್ಕ ನಮ್ಮ ತಲೆಗೆ ಬರುತ್ತದೆ ಎನ್ನುವ ಕಾರಣಕ್ಕಾಗಿ ಇಬ್ಬರೂ ಅಭ್ಯರ್ಥಿಗಳು ಸಭಿಕರ ಸಾಲಿನಲ್ಲೇ ಕುಳಿತು ನಾಯಕರ ಭಾಷಣ ಆಲಿಸಿದ್ದು ವಿಶೇಷ.

Advertisement

Udayavani is now on Telegram. Click here to join our channel and stay updated with the latest news.

Next