Advertisement
ಧಾರವಾಡ: ಲಾಕ್‌ಡೌನ್ ಅವಧಿಯಲ್ಲಿ ನಿರೀಕ್ಷಿತ ಬೆಲೆ ಸಿಗದೇ, ಮಾರಾಟವಾಗದೇ ತಿಪ್ಪೆಯ ಪಾಲಾಗುತ್ತಿದ್ದ ತರಕಾರಿ ಹಾಗೂ ಸೊಪ್ಪಿಗೆ ಇದೀಗ ಅನ್‌ಲಾಕ್ ನಂತರ ಬಂಪರ್ ಬೆಲೆ ಬಂದಿದೆ.
Related Articles
Advertisement
ಈ ಹಿಂದೆ ಕೆಜಿಗೆ 20-25 ರೂ.ಗಳಿಗೆ ಮಾರುತ್ತಿದ್ದ ಹಸಿಮೆಣಸು ಈಗ ಕೆಜಿಗೆ 35-40 ರೂ. ಮಾರಾಟವಾಗುತ್ತಿದೆ. ಇದೇ ರೀತಿ ಟೊಮ್ಯಾಟೊ, ಬದನೆಕಾಯಿ, ಹಿರೇಕಾಯಿ, ಸೌತೆಕಾಯಿ ಸೇರಿದಂತೆ ಇತರೆ ತರಕಾರಿ ಬೆಲೆಯಲ್ಲಿ ಕೆಜಿಗೆ 10 ರಿಂದ 20 ರೂ.ವರೆಗೂ ಏರಿಕೆ ಕಂಡಿದೆ. ಯಾವುದೇ ತರಕಾರಿಗೆ ಕೆಜಿಗೆ ಕನಿಷ್ಠ 40 ರೂ. ಬೆಲೆ ಇದ್ದು, ಗರಿಷ್ಠ 60 ರೂ. ದಾಟಿದೆ. ಇನ್ನು 10 ರೂ. ಗೆ 2-3 ಸಿವುಡು ಸಿಗುತ್ತಿದ್ದ ಕೋತಂಬರಿ, ಮೆಂತೆ ಸೇರಿದಂತೆ ಇತರೆ ಸೊಪ್ಪುಗಳು ಈಗ 10-15 ರೂ.ಗೆ ಒಂದು ಸಿವುಡು ಸಿಗುವಂತಾಗಿದೆ.
ಹೋಲ್‌ಸೇಲ್ ದರದಲ್ಲೂ ಏರಿಕೆ: ಹೋಲ್‌ಸೇಲ್ ತರಕಾರಿ ಮಾರುಕಟ್ಟೆಯಲ್ಲೂ ತರಕಾರಿ, ಸೊಪ್ಪಿನ ಬೆಲೆ ಏರಿಕೆಯಾಗಿದೆ. 10 ರಿಂದ 12 ಕೆಜಿಯ ಬದನೆಕಾಯಿ ಬಾಕ್ಸ್‌ವೊಂದಕ್ಕೆ 200-250 ರೂ. ದರವಿತ್ತು. ಮಂಗಳವಾರ ನಡೆದ ವ್ಯಾಪಾರದಲ್ಲಿ ಈ ದರವು 600-700ಕ್ಕೆ ಏರಿದೆ. ಇದೇ ರೀತಿ ಬೀನ್ಸ್, ಚವಳೇಕಾಯಿ, ಹಾಗಲಕಾಯಿ, ಹಿರೇಕಾಯಿ, ಟೊಮಾಟೋ ಸೇರಿದಂತೆ ಎಲ್ಲ ತರಕಾರಿಗಳ ಹೋಲ್ ಸೇಲ್ ದರದಲ್ಲಿ 200-300 ರೂ. ಏರಿಕೆ ಕಂಡಿದೆ. ಇದರ ಜತೆಗೆ ಸೊಪ್ಪಿನ ದರದಲ್ಲೂ 100-150 ರೂ. ಏರಿಕೆ ಕಂಡಿದೆ.