ಬೇಡಿಕೆ ಹೆಚ್ಚಿರುವುದರಿಂದ ಪುಟ್ಟಬಾಳೆ ಹಣ್ಣುಗಳಿಗೆ ಈಗ ಬಂಪರ್ ಬೆಲೆ ಬಂದಿದೆ. ಪೂಜೆಗೆ ಮತ್ತು ತಿನ್ನಲು ಬಳಸುವ ಪುಟ್ಟಬಾಳೆ ಹಣ್ಣಿನ ದರ ಈಗ ಕೆ.ಜಿ.ಗೆ 120 ರಿಂದ 130 ರೂ ಇದೆ. ವರ್ತಕರು ಬಾಳೆ ತೋಟಗಳಲ್ಲಿ ಬೆಳೆಗಾರರಿಗೆ ಕೆ.ಜಿ.ಗೆ 90 ರೂ.ನಿಂದ 95 ರೂ.ದರ ನೀಡಿ ಖರೀದಿಸಿದರೆ, ವ್ಯಾಪಾರಿಗಳು ಬಾಳೆ ಮಂಡಿಗಳಲ್ಲಿ ಕೆ.ಜಿ.ಗೆ 105 ರೂ. ದರದಲ್ಲಿ ಖರೀದಿಸಿ ಮಾರುಕಟ್ಟೆಯಲ್ಲಿ ಒಂದು ಕೆ.ಜಿ.ಗೆ 120 ರೂ.ನಿಂದ 130 ರೂ .ದರದಲ್ಲಿ ಮಾರಾಟ ಮಾಡುತ್ತಿದ್ದಾರೆ. ಪುಟ್ಟಬಾಳೆ ಕಳೆದ ವಾರ ಕೆ.ಜಿ.ಗೆ 100 ರೂ.ಗೆ ಮಾರಾಟವಾಗುತ್ತಿದ್ದರೆ, ಈ ವಾರ ಗೌರಿ – ಗಣೇಶ ಹಬ್ಬದ ಹಿನ್ನೆಲೆ ಕೆ.ಜಿಗೆ 20 ರಿಂದ 30 ರೂ ಹೆಚ್ಚಳವಾಗಿದೆ. ದಿಢೀರನೆ ಬೆಲೆ ಏರಿಕೆ: ಕಳೆದ ವರ್ಷ ಪುಟ್ಟಬಾಳೆ ಕೆಜಿಗೆ 70 ರೂ. ಇತ್ತು, ಆನಂತರ 30 – 40 ರೂ.ಗೆ ಇಳಿದಿತ್ತು. ಆದರೆ ಈಗ ಒಂದೆರೆಡು ತಿಂಗಳಿನಿಂದೀಚೆಗೆ ದಿಢೀರನೆ ಏರಿಕೆಯಾಗಿದೆ. ಹಿಂದಿನ ವರ್ಷಗಳಿಗೆ ಹೋಲಿಸಿದರೆ ಈ ವರ್ಷ ಪುಟ್ಟಬಾಳೆ ಬೆಳೆ ಶೇ.50 ಕ್ಕಿಂತ ಕಡಿಮೆಯಾಗಿದೆ.
ರಾಜ್ಯದಲ್ಲಿ ನೀರಾವರಿ ಪ್ರದೇಶಗಳಿರುವ ಜಿಲ್ಲೆಗಳಲ್ಲಿ ಪುಟ್ಟಬಾಳೆ ಬೆಳೆಯಲಾಗುತ್ತಿತ್ತು. ಮುಖ್ಯವಾಗಿ ಮೈಸೂರು, ಮಂಡ್ಯ, ಚಾಮರಾಜನಗರ, ಹಾಸನ, ಚಿಕ್ಕಮಗಳೂರು, ಶಿವಮೊಗ್ಗ, ದಾವಣಗೆರೆ, ಬಳ್ಳಾರಿಗಳಿಗೆ ಹೆಚ್ಚಾಗಿ ಬೆಳೆಯಲಾಗುತ್ತಿತ್ತು. ರೋಗ ಬಾಧೆ: ನಾಟಿ ಮಾಡಿದ ನಂತರ 13 ರಿಂದ 15 ತಿಂಗಳಲ್ಲಿ ಕಟಾವಿಗೆ ಬರುವ ಪುಟ್ಟಬಾಳೆ ಮೂರು ವರ್ಷದವರೆಗೂ ಫಸಲು ಕೊಡುತ್ತದೆ. ಅಂದರೆ ಒಂದು ಬಾರಿ ಬಾಳೆ ಗೊನೆ ಕಡಿದರೆ, ಆದರ ಬುಡದಲ್ಲಿ ಹುಟ್ಟುವ ಕಂದುಗಳ ಮೂಲಕ 2-3 ಬೆಳೆಗಳನ್ನು ಪಡೆಯಬಹುದು. ಇತ್ತೀಚಿನ ವರ್ಷಗಳಲ್ಲಿ ಸತತ ಬರಗಾಲದಿಂದ ನೀರಿನ ಕೊರತೆ ಹಾಗೂ ರೋಗ ಬಾಧೆಯಿಂದಾಗಿ ಪುಟ್ಟಬಾಳೆ ಕಡಿಮೆಯಾಗುತ್ತಾ ಬಂದಿದೆ. ರಾಜ್ಯದಲ್ಲಿ ವರ್ಷಕ್ಕೆ ಸುಮಾರು 75 ಸಾವಿರ ಹೆಕ್ಟೇರ್‌ನಲ್ಲಿ ಬೆಳೆಯುತ್ತಿದ್ದ ಪುಟ್ಟ ಬಾಳೆ ಈ ವರ್ಷ ಶೇ.50ಕ್ಕಿಂತಲೂ ಕಡಿಮೆಯಾಗಿದೆ. ಹಾಸನ ಜಿಲ್ಲೆಯಲ್ಲಿ 7 ರಿಂದ 8 ಸಾವಿರ ಹೆಕ್ಟೇರ್‌ನಲ್ಲಿ ಬೆಳೆಯುತ್ತಿದ್ದ ಪುಟ್ಟಬಾಳೆ ಈಗ 3 ಸಾವಿರ ಹೆಕ್ಟೇರನಲ್ಲೂ ಬೆಳೆಯುತ್ತಿಲ್ಲ ಎಂದು ಬೇಸರದ ಸಂಗತಿ. ಬಯಲುಸೀಮೆಯಲ್ಲಿ ರೈತರು ಪ್ರತ್ಯೇಕವಾಗಿ ಬಾಳೆ ಬೆಳೆಯುತ್ತಿದ್ದರೆ, ಮಲೆನಾಡು ಪ್ರದೇಶಗಳಲ್ಲಿ ಅಡಕೆ, ತೆಂಗಿನ ತೋಟಗಳಲ್ಲಿ ಉಪ ಬೆಳೆಯಾಗಿ ಪುಟ್ಟಬಾಳೆ ಬೆಳೆಯುತ್ತಿದ್ದರು. ಆದರೆ ಈಗ ಮಳೆಯ ಕೊರತೆಯಿಂದ ಅಲ್ಲೂ ಕೈಬಿಟ್ಟಿದ್ದಾರೆ.
ನೀರಾವರಿ ಪ್ರದೇಶಗಳಲ್ಲೂ ಬಹುತಿಂಗಳ ಬೆಳೆಯಾದ ಬಾಳೆಬೆಳೆಯುವ ಬದಲು ರೈತರು ಈಗ ಶುಂಠಿ, ಅರಿಶಿಣ ಮತ್ತಿತರ ಬೆಳೆಗಳನ್ನು ಬೆಳೆಯುತ್ತಿದ್ದಾರೆ. ಈ ಬೆಳೆಗಳು 7 ರಿಂದ 10 ತಿಂಗಳ ಒಳಗೆ ಕಟಾವಿಗೆ ಬರುತ್ತವೆ. ಬಾಳೆ ಕಷ್ಟಪಡಬೇಕಾದ ಹಾಗೂ ಮಾರುಕಟ್ಟೆಗಾಗಿ ಪರದಾಡಬೇಕಾದ ಪರಿಸ್ಥಿತಿಯಿಲ್ಲ. ಇದೂ ಕೂಡ ಪುಟ್ಟಬಾಳೆ ಕಡಿಮೆಯಾಗಲು ಕಾರಣ. ಬಾಳೆ ಬೆಳೆಯುತ್ತಿರುವ ರೈತರೂ ಕೂಡ ಪುಟ್ಟ ಬಾಳೆಗೆ ಬದಲು ಪಚ್ಚಬಾಳೆ ಬೆಳೆಯಲು ಆಸಕ್ತಿ ತೋರುತ್ತಾರೆ. ಪಚ್ಚಬಾಳೆ ಕಡೆ ರೈತರ ಒಲವು: ಪುಟ್ಟಬಾಳೆಗಿಂತ ಉತ್ತಮ ಮಾರುಕಟ್ಟೆ ಹಾಗೂ ಗುಣಮಟ್ಟದಲ್ಲಿ ಏರುಪೇರಿದ್ದರೂ ಪಚ್ಚಬಾಳೆ ಚಿಪ್ಸ್ ತಯಾರಿಕೆಗಾಗಿ ಕೇರಳಕ್ಕೆ ರವಾನೆಯಾಗುವುದರಿಂದ ಮಾರುಕಟ್ಟೆಗಾಗಿ ಪರದಾಡುವಷ್ಟು ಸಂಕಷ್ಟವಿಲ್ಲ. ಇಳುವರಿಯೂ ಪುಟ್ಟಬಾಳೆಗಿಂತ ಪಚ್ಚಬಾಳೆ ಹೆಚ್ಚು, ಪುಟ್ಟಬಾಳೆ ಉತ್ತಮ ಬೆಳೆ ಬಂದರೆ ಎಕರೆಗೆ 15 ಟನ್ ಇಳುವರಿ ಬರುತ್ತದೆ. ಈಗ ಇಳುವರಿ 7 ರಿಂದ 8 ಟನ್ ಮಾತ್ರ. ಪುಟ್ಟಬಾಳೆಗಿಂತ ಪಚ್ಚಬಾಳೆ ದುಪ್ಪಟ್ಟು ಇಳುವರಿ ಬರುತ್ತದೆ. ಹಾಗಾಗಿ ಬೆಳೆಗಾರರು ಪುಟ್ಟಬಾಳೆಗಿಂತ ಪಚ್ಚಬಾಳೆ ಬೆಳೆಯಲು ಆಸಕ್ತಿ ತೋರುತ್ತಾದೆ.
Advertisement